ಚಿಕ್ಕಮಗಳೂರು: ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಬಲಿ

Update: 2019-11-12 17:59 GMT

ಚಿಕ್ಕಮಗಳೂರು, ನ.12: ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ಬಾರದಾಗಿದ್ದು, ಅರಣ್ಯ ಇಲಾಖೆ ಹಾಗೂ ಸರಕಾರಗಳ ನಿರ್ಲಕ್ಷದಿಂದಾಗಿ ಬಡಜನರು, ಕಾರ್ಮಿಕರು, ರೈತರು ಪ್ರಾಣ ಕಳೆದುಕೊಳ್ಳುವ ಸ್ಥಿತಿ ಜಿಲ್ಲೆಯಲ್ಲಿ ಮುಂದುವರಿದಿದೆ. ಸೋಮವಾರ ರಾತ್ರಿ ತಾಲೂಕಿನ ಮಲ್ಲಂದೂರು ಅರಣ್ಯ ವಲಯದಲ್ಲಿ ಕಾಡಾನೆ ದಾಳಿಗೆ ಸಿಲುಕಿ ಕೂಲಿ ಕಾರ್ಮಿಕನೊಬ್ಬ ದಾರುಣವಾಗಿ ಮೃತಪಟ್ಟ ಘಟನೆ ವರದಿಯಾಗಿದೆ.

ತಾಲೂಕಿನ ಮಲ್ಲಂದೂರು ಅರಣ್ಯ ವಲಯದ ನಿಡಗೋಡು ನಿವಾಸಿ ರಂಗಯ್ಯ(60) ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟಿದ್ದು, ಸೋಮವಾರ ಸಂಜೆ ವೇಳೆ ರಂಗಯ್ಯ ದನಗಳನ್ನು ಮನೆಗೆ ಹೊಡೆದುಕೊಂಡು ಬರಲು ತೆರಳಿದ್ದ ಮಲ್ಲಂದೂರು ಅರಣ್ಯ ವಲಯದತ್ತ ತೆರಳಿದ್ದರು. ಈ ವೇಳೆ ಕಾಡಾನೆ ಏಕಾಏಕಿ ದಾಳಿ ಮಾಡಿದ್ದು, ಪರಿಣಾಮ ರಂಗಯ್ಯ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತುಳಿದು ಬಂದಿದೆ.

ಕಾಡಿನತ್ತ ತೆರಳಿದ್ದ ರಂಗಯ್ಯ ಕತ್ತಲಾದರೂ ಬಾರದಿರುವುದನ್ನು ಅನುಮಾನಗೊಂಡ ಮನೆಯವರು ಕಾಡಿನತ್ತ ಹೋಗಿ ನೋಡಿದಾಗ ರಂಗಯ್ಯ ಕಾಡಿನಲ್ಲಿ ಸತ್ತು ಬಿದ್ದಿರುವುದು ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಅರಣ್ಯ ಇಲಾಖಾಧಿಕಾರಿಗಳು ಹಾಗೂ ಮಲ್ಲಂದೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಂಗಳವಾರ ಬೆಳಗ್ಗೆ ಮೃತ ವ್ಯಕ್ತಿಯ ಮರಣೋತ್ತರ ಪರೀಕ್ಷೆಯನ್ನು ಜಿಲ್ಲಾಸ್ಪತ್ರೆಯಲ್ಲಿ ನಡೆಸಿ ಸಂಬಂಧಿಕರಿಗೆ ಶವ ಹಸ್ತಾಂತರಿಸಲಾಯಿತು.

ಘಟನೆ ಸಂಬಂಧ ಅರಣ್ಯಾಧಿಕಾರಿಗಳು ಹಾಗೂ ಸರಕಾರಗಳ ವಿರುದ್ಧ ರೈತರು, ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಜಿಲ್ಲೆಯಲ್ಲಿ ಪ್ರತೀ ವರ್ಷ ಕಾಡಾನೆಗಳ ದಾಳಿಗೆ ಸಿಲುಕಿ ರೈತರು, ಕಾರ್ಮಿಕರು ಸಾಯುತ್ತಿದ್ದಾರೆ. ಆದರೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮತ್ತು ಸರಕಾರ ಪರಿಹಾರ ನೀಡಿ ಕೈತೊಳೆದುಕೊಳ್ಳುತ್ತಿದೆಯೇ ಹೊರತು, ಕಾಡಾನೆಗಳ ನಿಯಂತ್ರಣಕ್ಕೆ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಸರಕಾರ ಕಾಡಾನೆಗಳ ಹಾವಳಿ ಇರುವ ಕಾಡಂಚುಗಳಲ್ಲಿ ರೈಲ್ವೆ ಕಂಬಿಗಳ ಬ್ಯಾರಿಕೇಡ್ ನಿರ್ಮಾಣಕ್ಕೆ ಬಜೆಟ್‍ನಲ್ಲಿ ಜಿಲ್ಲೆಗೆ ಅನುದಾನ ನೀಡಿದೆ ಎಂದು ಹೇಳಲಾಗುತ್ತಿದೆಯಾದರೂ ಇದುವರೆಗೂ ಈ ಸಂಬಂಧ ಯಾವುದೇ ಕ್ರಮಕೈಗೊಳ್ಳದೇ ನಿರ್ಲಕ್ಷ್ಯ ವಹಿಸಲಾಗಿದೆ. ಪರಿಣಾಮ ಕಾಡಾನೆಗಳು ಅರಣ್ಯ ವ್ಯಾಪ್ತಿಯ ಗ್ರಾಮಗಳಿಗೆ ಲಗ್ಗೆ ಇಟ್ಟು, ತೋಟ, ಬೆಳೆ ನಾಶ ಮಾಡುತ್ತಿರುವುದಲ್ಲದೇ ಜನರ ಪ್ರಾಣಿ ತೆಗೆಯುತ್ತಿವೆ. ಅರಣ್ಯಾಧಿಕಾರಿಗಳು ಕೊನೆ ಪಕ್ಷ ಆನೆಗಳನ್ನು ಬೇರೆಡೆಗೆ ಸ್ಥಳಾಂತರಿಸುವ ಕಾರ್ಯಚರಣೆಯನ್ನೂ ಮಾಡುತ್ತಿಲ್ಲ. ಕಾಡಾನೆಗಳ ಹಾವಳಿಯಿಂದಾಗಿ ಕಾಡಂಚಿನ ಗ್ರಾಮಗಳಲ್ಲಿ ರೈತರು, ಕಾರ್ಮಿಕರು ಪ್ರತಿದಿನ ಆತಂಕದಿಂದ ಬದುಕುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರಕಾರ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಜನರ ಪ್ರಾಣದ ಮೇಲೆ ಕಿಂಚಿತ್ ಕಾಳಜಿ ಇರುವುದು ನಿಜವಾದರೇ ಕೂಡಲೇ ಕಾಡಾನೆ ಹಾವಳಿ ನಿಯಂತ್ರಣಕ್ಕೆ ರೈಲ್ವೆ ಕಂಬಿಗಳ ಬ್ಯಾರಿಕೇಡ್ ನಿರ್ಮಿಸುವ ಮೂಲಕ ಮತ್ತಷ್ಟು ಜನರು ಸಾಯುವುದನ್ನು ತಪ್ಪಿಸಬೇಕು. ರೈತರ ನೆಮ್ಮದಿ ಕೆಡಿಸಿರುವ ಕಾಡಾನೆಗಳನ್ನು ಬೇರೆಡೆ ಸ್ಥಳಾಂತರ ಮಾಡಲು ಸರಕಾರದ ಮೇಲೆ ಒತ್ತಡ ಹಾಕಬೇಕು. ಶೀಘ್ರ ಇದನ್ನು ಅನುಷ್ಠಾನಕ್ಕೆ ತರದಿದ್ದಲ್ಲಿ ಅರಣ್ಯಾಧಿಕಾರಿ ಕಚೇರಿ ಎದುರು ಧರಣಿ ಹಮ್ಮಿಕೊಳ್ಳುವುದಾಗಿ ರೈತ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News