ದೇಶದಲ್ಲಿ ಅಮಾಯಕರಿಗೆ ಭಾವನಾತ್ಮಕ ಅಫೀಮು ಕುಡಿಸುತ್ತಿದ್ದಾರೆ: ದೇವನೂರು ಮಹಾದೇವ

Update: 2019-11-12 18:11 GMT

ಮೈಸೂರು,ನ.12: ಭಾರತದಲ್ಲೀಗ ಪೂತನಿ (ಕ್ರೋನಿಕ್) ಬಂಡವಾಳಶಾಹಿ ಮತ್ತು ಆಳ್ವಿಕೆ ಜೊತೆಗೂಡಿಕೊಂಡು ಜನಸಮುದಾಯಕ್ಕೆ ತಾವು ಬೀದಿಗೆ ಬೀಳುವುದರ ಅರಿವು ಬಾರದಿರಲೆಂದು ಆ ಅಮಾಯಕರಿಗೆ ಭಾವನಾತ್ಮಕ ಅಫೀಮು ಕುಡಿಸುತ್ತಿದ್ದಾರೆ ಎಂದು ಹಿರಿಯ ಸಾಹಿತಿ ದೇವನೂರು ಮಹಾದೇವ ಬೇಸರ ವ್ಯಕ್ತಪಡಿಸಿದರು.

ನಗರದ ಹುಣಸೂರು ರಸ್ತೆಯಲ್ಲಿರುವ ರಾಣಿಬಹದ್ದೂರ್ ಸಭಾಂಗಣದಲ್ಲಿ ಮಂಗಳವಾರ ಪ್ರಜಾವಾಣಿ, ಜ್ಞಾನ ಸರೋವರ ಅಂತರಾಷ್ಟ್ರೀಯ ವಸತಿ ಶಾಲೆ ಆಯೋಜಿಸಿದ್ದ 'ಪ್ರಾದೇಶಿಕ ಸಮಗ್ರ ಆರ್ಥಿಕ ಒಪ್ಪಂದ (ಆರ್‍ಸಿಇಪಿ): ಹಿಂದೆ ಮತ್ತು ಮುಂದೆ' ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಉದ್ಯೋಗ ಸ್ಥಿತಿಗತಿ ಇನ್ನೇನು ಸ್ವಾತಂತ್ರ್ಯ ಪೂರ್ವ ಕಾಲಕ್ಕೆ ದಯನೀಯ ಸ್ಥಿತಿಗೆ ತಲುಪಲೂಬಹುದು. ಜನ ಸಮುದಾಯಕ್ಕೆ ತಾವು ಬೀದಿಗೆ ಬೀಳುವುದರ ಅರಿವು ಬಾರದಿರಲೆಂದು ಆ ಅಮಾಯಕರಿಗೆ ಭಾವನಾತ್ಮಕ ಅಫೀಮು ಕುಡಿಸುತ್ತಿದ್ದಾರೆ. ಟಿಪ್ಪು ವಿಷಯ ತರುತ್ತಾರೆ, ಅಂಬೇಡ್ಕರ್ ಸಂವಿಧಾನ ರಚಿಸಿಲ್ಲ ಎನ್ನುತ್ತಾರೆ, ಗೋಮಾತೆ ಅನ್ನುತ್ತಾರೆ, ಪಾಕಿಸ್ತಾನದ ಬಗ್ಗೆ ಭೀತಿ ತೋರಿಸುತ್ತಾರೆ, ದೇವರಿಗೂ ಕೈಕಾಲು ಕಟ್ಟಿ ಎಳೆದು ತರುತ್ತಾರೆ. ಮಾದಕ ಲೋಕ ಸೃಷ್ಟಿಸುತ್ತಾರೆ. ಇಂದು ವ್ಯಾಘ್ರನ ಗೋಮುಖ ಬಯಲಿಗೆಳೆಯಬೇಕಾಗಿದೆ. 'ಒಂದು ಗ್ಯಾರಂಟಿ ಉದ್ಯೋಗ ನೀಡು, ಆಮೇಲೆ ಮಾತಾಡು' ಎಂದು ಮೊದಲು ಕೇಳಿ, ಆಮೇಲೆ ಉಳಿದುದೆಲ್ಲ. ಇದು ಸಮುದಾಯದ ಒಕ್ಕೊರಲ ಧ್ವನಿಯಾಗಬೇಕಾಗಿದೆ ಎಂದು ದೇವನೂರ ಮಹಾದೇವ ಅಭಿಪ್ರಾಯಪಟ್ಟರು.

ಇಂದು ಭಾರತದಲ್ಲಿ ಯುವ ಜನತೆ ಅಭಿವ್ಯಕ್ತಗೊಳ್ಳಬೇಕಾಗಿದೆ. ಸಮುದಾಯದ ಧ್ವನಿಯಾಗಬೇಕು. ಭಾರತದಲ್ಲಿ ಸುಮಾರು 137 ಕೋಟಿ ಬಾಯಿಗಳಿವೆ. 137 ಕೋಟಿ ಹೊಟ್ಟೆಗಳೂ ಇವೆ. 274 ಕೋಟಿ ಕೈಗಳಿವೆ. ಈ ಕೈಗಳಿಗೆ ಕೆಲಸ ಸಿಗುವಂತಾಗಿ ಅವುಗಳ ಹೊಟ್ಟೆ ತುಂಬಿಸಬೇಕಾಗಿದೆ ಎಂದರು.

ವಿಚಾರ ಸಂಕಿರಣದಲ್ಲಿ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಲೇಖಕಿ ಕೆ.ಪಿ. ಸುರೇಶ್, ಚಿಂತಕ ವಿಶ್ವನಾಥ ಭಟ್ ಮಾತನಾಡಿದರು. ಎಫ್‍ಕೆಸಿಸಿಐ ಅಧ್ಯಕ್ಷ ಸುಧಾಕರ್ ಎಸ್. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಬಿ.ಎಂ.ಹನೀಫ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News