ಶಾಸಕರ ಅನರ್ಹತೆ ಪ್ರಕರಣದ ಸುಪ್ರೀಂ ತೀರ್ಪಿನ ಬಗ್ಗೆ ಬಿಎಸ್‌ವೈ ಪ್ರತಿಕ್ರಿಯೆ ಏನು ?

Update: 2019-11-13 12:46 GMT

ಬೆಂಗಳೂರು, ನ. 13: ಉಪಚುನಾವಣೆ ನಡೆಯಲಿರುವ ಹದಿನೈದು ಕ್ಷೇತ್ರಗಳಿಗೆ ನಾಳೆಯೇ(ನ.14) ಸಚಿವರನ್ನು ಮತ್ತು ಮುಖಂಡರನ್ನು ಉಸ್ತುವಾರಿಯಾಗಿ ನೇಮಕ ಮಾಡಿ, ಉಪಚುನಾವಣೆ ಗೆಲ್ಲಲು ಕಾರ್ಯತಂತ್ರ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

ಬುಧವಾರ ಅನರ್ಹ ಶಾಸಕರ ಕುರಿತು ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಅಂದಿನ ಸ್ಪೀಕರ್ ರಮೇಶ್‌ಕುಮಾರ್ ಕುತಂತ್ರದಿಂದ ಶಾಸಕರನ್ನು ಅನರ್ಹಗೊಳಿಸಲಾಗಿತ್ತು ಎಂದು ಟೀಕಿಸಿದರು.

ಕೋರ್ಟ್‌ನಲ್ಲಿ ಅನರ್ಹರಿಗೆ ನ್ಯಾಯ ಸಿಗುವ ವಿಶ್ವಾಸವಿತ್ತು. ಇದೀಗ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದ್ದು, ಇದರಿಂದ ಸಿದ್ದರಾಮಯ್ಯ ಮತ್ತು ರಮೇಶ್‌ಕುಮಾರ್‌ಗೆ ಹಿನ್ನಡೆಯಾಗಿದೆ ಎಂದ ಅವರು, ಉಪಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದು, 15 ಕ್ಷೇತ್ರಗಳನ್ನು ಗೆಲ್ಲಲು ಒಗ್ಗಟ್ಟಿನಿಂದ ಶ್ರಮಿಸುತ್ತೇವೆ ಎಂದರು.

ಉಪಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ ಕಾರ್ಯಕರ್ತರು ಪಕ್ಷದ ಗೆಲುವಿಗಾಗಿ ಶ್ರಮಿಸುತ್ತಿದ್ದು, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುತ್ತೇವೆ. ಯಾರಿಗೂ ಅಸಮಾಧಾನಕ್ಕೆ ಅವಕಾಶವಿಲ್ಲದಂತೆ ನೋಡಿಕೊಳ್ಳುತ್ತೇವೆ ಎಂದ ಅವರು, ಟಿಕೆಟ್ ನೀಡುವ ಸಂಬಂಧ ಕೋರ್ ಕಮಿಟಿ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News