ಉಪಚುನಾವಣೆ: ಬಿಜೆಪಿ ಮುಖಂಡರಿಗೆ ತಲೆನೋವಾದ 'ಬಂಡಾಯ'

Update: 2019-11-13 13:06 GMT

ಬೆಂಗಳೂರು, ನ. 13: ಅನರ್ಹರು ಉಪಚುನಾವಣೆ ಸ್ಪರ್ಧೆಗೆ ಅವಕಾಶ ಕಲ್ಪಿಸಿ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿದ ಬೆನ್ನಲ್ಲೆ ಅಭ್ಯರ್ಥಿಗಳ ಆಯ್ಕೆಗೆ ಬಿಜೆಪಿ ಕಸರತ್ತು ನಡೆಸುತ್ತಿದೆ. ಆದರೆ, ಹೊಸಕೋಟೆ ಹಾಗೂ ಕಾಗವಾಡ ಕ್ಷೇತ್ರಗಳಲ್ಲಿ ಬಂಡಾಯದ ಬೇಗುದಿ ಮುಖಂಡರಿಗೆ ತಲೆನೋವು ತಂದಿಟ್ಟಿದೆ.

ಕಾಗವಾಡ ಕ್ಷೇತ್ರದ ಮಾಜಿ ಶಾಸಕ ಭರವಮಗೌಡ (ರಾಜು) ಕಾಗೆ ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಸೇರ್ಪಡೆಯಾಗುವ ಮೂಲಕ ಉಪಚುನಾವಣೆ ಸ್ಪರ್ಧೆಗೆ ಸಿದ್ಧತೆ ಆರಂಭಿಸಿದ್ದಾರೆ. ಮತ್ತೊಂದೆಡೆ ಹೊಸಕೋಟೆ ಕ್ಷೇತ್ರದ ಬಿಜೆಪಿ ಮುಖಂಡ ಶರತ್ ಬಚ್ಚೇಗೌಡ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವೆ ಎಂದು ಘೋಷಿಸಿದ್ದಾರೆ.

‘ಅನರ್ಹರು ಉಪಚುನಾವಣೆಯಲ್ಲಿ ಸ್ಪರ್ಧಿಸಬಹುದು’ ಎಂದು ಕೋರ್ಟ್ ಹೇಳಿದ್ದು, ಹೊಸಕೋಟೆ ಕ್ಷೇತ್ರದಿಂದ ಅನರ್ಹ ಶಾಸಕ ಎಂ.ಟಿ.ಬಿ.ನಾಗರಾಜ್ ಅವರಿಗೆ, ಅದೇ ರೀತಿ ಬೆಳಗಾವಿಯ ಕಾಗವಾಡ ಕ್ಷೇತ್ರದಿಂದ ಶ್ರೀಮಂತ ಪಾಟೀಲ್‌ಗೆ ಬಿಜೆಪಿ ಟಿಕೆಟ್ ನಿಶ್ಚಿತವಾಗಿದೆ. ಹೀಗಾಗಿ ಪಕ್ಷ ಬಿಟ್ಟು ಬಂದವರಿಗೆ ಬಿಜೆಪಿ ಮಣೆ ಹಾಕುತ್ತಿದೆ ಎಂದು ಎರಡೂ ಕ್ಷೇತ್ರಗಳಲ್ಲಿಯೂ ಮುಖಂಡರು ಬಹಿರಂಗ ಅಸಮಾಧಾನ ಹೊರಹಾಕಿದ್ದಾರೆ. ಹೀಗಾಗಿ ಹೊಸಕೋಟೆ ಮತ್ತು ಕಾಗವಾಡ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿಗೆ ಬಂಡಾಯ ಎದುರಾಗಿದೆ.

ಸ್ಪರ್ಧೆಗೆ ಬರಲಿ: ಶರತ್ ಬಚ್ಚೇಗೌಡ ಅವರು ನನ್ನ ವಿರುದ್ಧ ಯಾವುದೇ ಪಕ್ಷದಿಂದ ಸ್ಪರ್ಧೆ ಮಾಡಲಿ. ಅವರು ಪದೇ ಪದೇ ನನ್ನನ್ನು ಸ್ವಾರ್ಥಿ, ತಾವು ಸ್ವಾಭಿಮಾನಿ ಎನ್ನುತ್ತಾರೆ. ಹೀಗಾಗಿ ಅವರು ನೇರವಾಗಿ ಚರ್ಚೆಗೆ ಬಂದರೆ ಉತ್ತಮ. ನಾನು ಎಲ್ಲದಕ್ಕೂ ಸಿದ್ಧನಾಗಿದ್ದೇನೆ ಎಂದು ಅನರ್ಹ ಶಾಸಕ ಎಂ.ಟಿ.ಬಿ.ನಾಗರಾಜ್ ಸವಾಲು ಹಾಕಿದ್ದಾರೆ.

ಸ್ವಾಭಿಮಾನ ಎತ್ತಿ ಹಿಡಿಯಬೇಕು

‘ಅನರ್ಹತೆಯನ್ನ ಎತ್ತಿಹಿಡಿದು ಸುಪ್ರಿಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಉಪಚುನಾವಣೆಯಲ್ಲಿ ನಾನು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದೇನೆ. ಮಂಡ್ಯದಲ್ಲಿ ಯಾರು ಏನೆ ಮಾಡಿದರೂ ಸ್ವಾಭಿಮಾನ ಎಂದು ಸುಮಲತಾ ಅವರಿಗೆ ಜನತೆ ಬೆಂಬಲ ನೀಡಿದಂತೆ ಹೊಸಕೋಟೆ ಕ್ಷೇತ್ರದ ಜನತೆ ಸ್ವಾಭಿಮಾನ ಎತ್ತಿ ಹಿಡಿಯಬೇಕು’

-ಶರತ್ ಬಚ್ಚೇಗೌಡ, ಬಿಜೆಪಿ ಮುಖಂಡ

ಹಾವೂ ಸಾಯ್ಬರ್ದು..ಕೋಲೂ ಮುರೀಬಾರ್ದು ಎನ್ನುವ ತೀರ್ಪಿನ ಆಶೀರ್ವಾದ ಪಡಕೊಂಡು ತೃಪ್ತ ಶಾಸಕರು ಕೊಂಕಣ ಸುತ್ಕೊಂಡು ಮೈಲಾರಕ್ ಬಂದವೆ. ಒಳ್ಳೇದೆ ಆಯ್ತು. ಸ್ವಾಭಿಮಾನಿ ಕನ್ನಡಿಗರೆ..ಇವುಗಳಿಗೆ..ಜನ್ಮ ಜನ್ಮಕ್ಕೂ ಮರೀದೆ ಇರೋ ತೀರ್ಪು ಕೊಡೋದು ಈಗ ನಮ್ಮ ಜವಾಬ್ದಾರಿ’

-ಪ್ರಕಾಶ್ ರಾಜ್, ಬಹುಭಾಷಾ ನಟ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News