ಸುತ್ತೋಲೆಯಲ್ಲಿ ಅಂಬೇಡ್ಕರ್‌ ಗೆ ಅವಮಾನ ಆರೋಪ: ಪ್ರೌಢ ಶಿಕ್ಷಣ ಇಲಾಖೆಯ ನಿರ್ದೇಶಕ ಅಮಾನತು

Update: 2019-11-13 14:30 GMT

ಬೆಂಗಳೂರು, ನ.13: ಸಂವಿಧಾನ ರಚನೆ ಕುರಿತ ವಿವಾದಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ ಪ್ರೌಢಶಿಕ್ಷಣ ಇಲಾಖೆಯ ನಿರ್ದೇಶಕ ಕೆ.ಎಸ್.ಮಣಿಯನ್ನು ಅಮಾನತು ಮಾಡಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್‌ಕುಮಾರ್ ತಿಳಿಸಿದ್ದಾರೆ. 

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂಸಿಎ ಎಂಬ ಖಾಸಗಿ ಸಂಸ್ಥೆ ಸಂವಿಧಾನದ ಕುರಿತು ನೀಡಿದ ಕೈಪಿಡಿಯನ್ನು ಸರಿಯಾಗಿ ಪರಿಶೀಲನೆ ಮಾಡದೆ ಅಜಾಗರೂಕರಾಗಿ ಇಲಾಖೆಯ ವೆಬ್‌ಸೈಟ್‌ನಲ್ಲಿ ದಾಖಲು ಮಾಡಲಾಗಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಯನ್ನು ಅಮಾನತು ಮಾಡಿ, ವಿಚಾರಣೆಗೆ ಆದೇಶಿಸಲಾಗಿದೆ ಎಂದರು.

ಅ.1ರಂದು ಸಿಎಂಸಿಎ ಖಾಸಗಿ ಸಂಸ್ಥೆಯು ಸಂವಿಧಾನಕ್ಕೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಗೆ ಕೈಪಿಡಿಯೊಂದನ್ನು ನೀಡಿತ್ತು. ಈ ಬಗ್ಗೆ ಇಲಾಖೆಯ ಆಯುಕ್ತರು, ಸಿಎಂಸಿಎ ಸಂಸ್ಥೆ ನೀಡಿರುವ ಕೈಪಿಡಿಯನ್ನು ಪರಿಶೀಲಿಸಿ, ನನ್ನ ಗಮನಕ್ಕೆ ತರಬೇಕೆಂದು ಪ್ರೌಢಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಪತ್ರ ಬರೆಲಾಗಿತ್ತು. ಆದರೆ, ಈ ಬಗ್ಗೆ ಸರಿಯಾಗಿ ಪರಿಶೀಲನೆ ನಡೆಯದೆ ವೆಬ್‌ಸೈಟ್‌ಗೆ ದಾಖಲಾಗಿರುವುದು ಗಮನಕ್ಕೆ ಬಂದಿದೆ ಎಂದು ಅವರು ಹೇಳಿದರು.

ಸಂವಿಧಾನ ರಚನೆಕಾರ ಡಾ.ಬಿ.ಆರ್.ಅಂಬೇಡ್ಕರ್‌ರವರ ಕಾರ್ಯ ಸ್ಮರಣೀಯವಾದದ್ದು. ಆದರೆ, ಸಂವಿಧಾನದ ಕುರಿತು ಸಿಎಂಸಿಎ ನೀಡಿದ ಕೈಪಿಡಿಯಿಂದಾಗಿ ಇಲಾಖೆಗೆ ಕಪ್ಪು ಚುಕ್ಕೆ ಬರುವಂತಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News