ಸಿದ್ದರಾಮಯ್ಯ ಎಲ್ಲಿಂದ ಬೆಳೆದು ಬಂದಿದ್ದಾರೆ ಅನ್ನೋದು ಮರೆಯಬಾರದು: ಎಚ್.ಡಿ.ದೇವೇಗೌಡ

Update: 2019-11-13 14:22 GMT

ಬೆಂಗಳೂರು, ನ.13: ಉಪ ಚುನಾವಣೆಯ ಫಲಿತಾಂಶ ಏನೇ ಬರಲಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿ ಸರಕಾರ ರಚನೆ ಮಾಡುವ ಪರಿಸ್ಥಿತಿ ಇಲ್ಲ. ಆದುದರಿಂದ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರಕಾರಕ್ಕೆ ಯಾವುದೇ ಆತಂಕ ಎದುರಾಗಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.

ಬುಧವಾರ ನಗರದಲ್ಲಿನ ಜೆಡಿಎಸ್ ಕಚೇರಿ(ಜೆ.ಪಿ.ಭವನ)ಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅನರ್ಹ ಶಾಸಕರಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಕುರಿತು ನಾನು ಯಾವುದೇ ರೀತಿಯ ಪ್ರತಿಕ್ರಿಯೆ ಕೊಡಲು ಬಯಸುವುದಿಲ್ಲ. ಅದನ್ನು ತಜ್ಞರು ಚರ್ಚೆ ಮಾಡುತ್ತಾರೆ ಎಂದರು.

ಉಪ ಚುನಾವಣೆ ನಡೆಯುತ್ತಿರುವ 15 ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳೇ ಗೆದ್ದು ಬಂದರೂ, ಎಲ್ಲರನ್ನೂ ಸಚಿವರನ್ನಾಗಿ ಮಾಡಲು ಸಾಧ್ಯವಿಲ್ಲ. 106 ಮಂದಿ ಬಿಜೆಪಿ ಶಾಸಕರ ಪೈಕಿ 50 ಜನರನ್ನು ನಿಗಮ, ಮಂಡಳಿಯ ಅಧ್ಯಕ್ಷರನ್ನಾಗಿ ಮಾಡಬಹುದು. 27 ಜನರನ್ನು ಸಚಿವರನ್ನಾಗಿ ಮಾಡಬಹುದು ಎಂದು ಅವರು ಹೇಳಿದರು.

ಜೆಡಿಎಸ್ ಪಕ್ಷದಲ್ಲಿ ಜಾತ್ಯತೀತ ತತ್ವ ಎಲ್ಲಿದೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಹಾಸನದಲ್ಲಿ ರಾಹುಲ್ ಗಾಂಧಿಗೆ ಸಿದ್ದರಾಮಯ್ಯ ಸೆಕ್ಯುಲರಿಸಂ(ಜಾತ್ಯತೀತ) ವರ್ಗಾಯಿಸಿದ್ದಾರೆ. ಅದನ್ನು ಪುನಃ ಪಡೆದುಕೊಳ್ಳುವ ಕಾಲ ಬಂದಾಗ, ಪಡೆದುಕೊಳ್ಳುತ್ತೇನೆ ಎಂದು ದೇವೇಗೌಡ ತಿರುಗೇಟು ನೀಡಿದರು.

ಸಿದ್ದರಾಮಯ್ಯ ಯಾವ ಪಕ್ಷದಲ್ಲಿದ್ದರು. ಅವರು ಎಲ್ಲಿಂದ ಬೆಳೆದು ಬಂದಿದ್ದಾರೆ ಅನ್ನೋದು ಮರೆಯಬಾರದು. ಇದೇ ದೇವೇಗೌಡ ಜೊತೆ ರಾಜಕೀಯ ಮಾಡುವಾಗ ಸೆಕ್ಯುಲರಿಸಂ ಇತ್ತು. ಈಗ ಅವರು ಕಾಂಗ್ರೆಸ್‌ಗೆ ಹೋದ ಕೂಡಲೆ ನಮ್ಮ ಪಕ್ಷದಲ್ಲಿ ಸೆಕ್ಯುಲರಿಸಂ ಇಲ್ಲವೇ ಎಂದು ಅವರು ಪ್ರಶ್ನಿಸಿದರು.

ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿ ಕೈಯಲ್ಲಿ ಜೆಡಿಎಸ್ ಪಕ್ಷವನ್ನು ಬಿಜೆಪಿಯ ‘ಬಿ’ ಟೀಂ ಎಂದು ಹೇಳಿಸಿದರು. ಅದರ ಹಣೆಬರಹ ಏನು ಆಯ್ತು? 130 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್ ಪಕ್ಷ 78 ಸ್ಥಾನಗಳಿಗೆ ಕುಸಿಯಿತು ಎಂದು ದೇವೇಗೌಡ ಹೇಳಿದರು.

ಕುಮಾರಸ್ವಾಮಿ ಬಿಜೆಪಿ ಜೊತೆ ಕೈ ಜೋಡಿಸಿದರು ಎಂದು ಟೀಕಿಸುತ್ತಾರೆ. ಹಾಗಾದರೆ, ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವನ್ನು ಬೆಂಬಲಿಸಿದ್ದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಮನೆ ಬಾಗಿಲಿಗೆ ಕಾಂಗ್ರೆಸ್ ಹೋಗಿರಲಿಲ್ಲವೇ? ನಮ್ಮನ್ನು ಟೀಕಿಸಲು ಕಾಂಗ್ರೆಸ್ ನಾಯಕರಿಗೆ ಯಾವ ನೈತಿಕತೆ ಇದೆ ಎಂದು ದೇವೇಗೌಡ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News