ಎಲ್ಲಾ ಅನರ್ಹ ಶಾಸಕರಿಗೆ ಉಪಚುನಾವಣೆಯಲ್ಲಿ ಟಿಕೆಟ್: ಸಚಿವ ಆರ್.ಅಶೋಕ್

Update: 2019-11-13 17:24 GMT

ಬೆಂಗಳೂರು, ನ. 13: ಅನರ್ಹ ಶಾಸಕರಿಗೆ ಯಾವುದೇ ಕಾರಣಕ್ಕೂ ಅನ್ಯಾಯ ಆಗಲು ಬಿಡುವುದಿಲ್ಲ. ಎಲ್ಲರಿಗೂ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಇಂದಿಲ್ಲಿ ಭರವಸೆ ನೀಡಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅನರ್ಹ ಶಾಸಕರ ಕುರಿತು ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಾರ್ಹ. ಅನರ್ಹರು ಮತ್ತೆ ಶಾಸಕರಾಗಿ ಆಯ್ಕೆಯಾಗಲು ಯಾವುದೇ ಅಡೆ-ತಡೆ ಇಲ್ಲ. ಉಪಚುನಾವಣೆ ಸ್ಪರ್ಧಿಸಲು ಕೋರ್ಟ್ ಅವಕಾಶ ಕಲ್ಪಿಸಿದೆ ಎಂದರು.

ಅನರ್ಹರಿಗೆ ಬಿಜೆಪಿ ಮಾತುಕೊಟ್ಟಂತೆ ನಡೆದುಕೊಳ್ಳಲಿದೆ. ನಮಗೆ ಸಹಾಯ ಮಾಡಿದವರನ್ನು ನಾವು ಕೈಬಿಡುವುದಿಲ್ಲ. ಅನರ್ಹ ಶಾಸಕರು ಬಿಜೆಪಿ ಅಭ್ಯರ್ಥಿಗಳಾಗಿ ಸ್ಪರ್ಧಿಸಲಿದ್ದು, ಇದರಲ್ಲಿ ಯಾವುದೇ ಸಂಶಯವಿಲ್ಲ. ನಾವು ಅನರ್ಹರ ಶಾಸಕರ ಪರವಾಗಿದ್ದೇವೆ ಎಂದರು.

ಅನರ್ಹರು ಎಲ್ಲೆಲ್ಲಿ ಅಭ್ಯರ್ಥಿಗಳಾಗಿ ಸ್ಪರ್ಧಿಸಬೇಕೆಂದು ಪಕ್ಷ ತೀರ್ಮಾನಿಸಲಿದ್ದು, ಬಿಎಸ್‌ವೈ ಸರಕಾರ ರಾಜ್ಯದಲ್ಲಿರಬೇಕೆಂಬುದು ನಮ್ಮ ಬಯಕೆ ಎಂದ ಅವರು, ಕಾಂಗ್ರೆಸ್‌ ನಲ್ಲಿ ಭಿನ್ನಮತ ಸ್ಫೋಟವಾಗಿದ್ದು, ಜೆಡಿಎಸ್ ಇನ್ನೂ ಚುನಾವಣೆ ತಯಾರಿ ನಡೆಸಿಲ್ಲ. ಹೀಗಾಗಿ ವಿಪಕ್ಷಗಳಲ್ಲಿ ಗೊಂದಲವಿದೆ ಎಂದು ಹೇಳಿದರು.

‘ನಮ್ಮ ಪಕ್ಷದ ಯಾರೊಬ್ಬರು ಅನರ್ಹರ ಸ್ಪರ್ಧೆಯನ್ನು ತಡೆಯುವುದಿಲ್ಲ. ಪಕ್ಷ ವಿರೋಧಿ ಚಟುವಟಿಕೆ ಮಾಡಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಅನರ್ಹರಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಶರತ್ ಇದನ್ನೆಲ್ಲ ಅರ್ಥ ಮಾಡಿಕೊಳ್ಳುತ್ತಾರೆ. ಪಕ್ಷದ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರಬೇಕು’

-ಆರ್.ಅಶೋಕ್, ಕಂದಾಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News