ಅಪೌಷ್ಟಿಕತೆಯಿಂದ ತಾಯಂದಿರ ಸಾವು ವಿಚಾರ: ಮಕ್ಕಳ ತಜ್ಞರನ್ನು ಕೂಡಲೇ ನೇಮಿಸಲು ಹೈಕೋರ್ಟ್ ನಿರ್ದೇಶನ

Update: 2019-11-13 17:48 GMT

ಬೆಂಗಳೂರು, ನ.13: ರಾಜ್ಯದಲ್ಲಿ ಹೆಚ್ಚಿರುವ ಅಪೌಷ್ಟಿಕತೆಯಿಂದ ಪ್ರಸವದ ವೇಳೆ ತಾಯಂದಿರ ಮರಣ ಪ್ರಮಾಣ ತಗ್ಗಿಸಲು ಪ್ರಸೂತಿ ತಜ್ಞ, ಮಕ್ಕಳ ತಜ್ಞರನ್ನು ಕೂಡಲೇ ನೇಮಕ ಮಾಡಬೇಕೆಂದು ಹೈಕೋರ್ಟ್ ರಾಜ್ಯ ಸರಕಾರಕ್ಕೆ ನಿರ್ದೇಶಿಸಿದೆ. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರು ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ಬುಧವಾರ ನಡೆಯಿತು.

ಕಾನೂನು ಸೇವಾ ಪ್ರಾಧಿಕಾರದ ಪರ ವಾದಿಸಿದ ವಕೀಲೆ ನಳೀನಾ ಮಾಯಗೌಡ ಅವರು, ತಾಯಂದಿರ ಮರಣ ಪ್ರಮಾಣ ತಗ್ಗಿಸಲು ಮಕ್ಕಳ ತಜ್ಞರನ್ನು ಎರಡು ತಿಂಗಳಲ್ಲಿ ನೇಮಕ ಮಾಡಬೇಕೆಂದು ನ್ಯಾಯಪೀಠವು ನಿರ್ದೇಶಿಸಿದರೂ ರಾಜ್ಯ ಸರಕಾರ ನೇಮಕ ಮಾಡಿಲ್ಲ ಎಂದು ಪೀಠಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ಪ್ರಸೂತಿ ತಜ್ಞರನ್ನು ಯಾಕೆ ನೇಮಕ ಮಾಡಿಲ್ಲ ಎಂದು ಸರಕಾರದ ವಿರುದ್ಧ ಕಿಡಿಕಾರಿತು. ಅಲ್ಲದೆ, ತಜ್ಞರನ್ನು ಕೂಡಲೇ ನೇಮಕ ಮಾಡಬೇಕೆಂದು ನಿರ್ದೇಶನ ನೀಡಿತು.

ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಪ್ರಸೂತಿ ತಜ್ಞ, ಮಕ್ಕಳ ತಜ್ಞರ ನೇಮಕವಾಗಿಲ್ಲ. ಹೀಗಾಗಿ, ಪ್ರತಿನಿತ್ಯ ಇಬ್ಬರು ಗರ್ಭಿಣಿಯರು ಸಾವನ್ನಪ್ಪಿದ್ದಾರೆ. 16 ತಿಂಗಳ ಅವಧಿಯಲ್ಲಿ 96 ತಾಯಂದಿರು ಸಾವನ್ನಪ್ಪಿದ್ದಾರೆ. ಹಲವು ಕಡೆ ಆಂಬ್ಯುಲೆನ್ಸ್ ಇಲ್ಲ. ರಕ್ತ ನಿಧಿಗಳಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪ್ರಸೂತಿ ಮಾಡಿಸಲು ವ್ಯವಸ್ಥೆ ಇಲ್ಲ ಎಂದು ಅರ್ಜಿದಾರರ ಪರ ವಕೀಲರು ಪೀಠಕ್ಕೆ ತಿಳಿಸಿದರು. ನ್ಯಾಯಪೀಠವು ಮಕ್ಕಳ ತಜ್ಞರನ್ನು ಕೂಡಲೇ ನೇಮಕ ಮಾಡಲು ನಿರ್ದೇಶಿಸಿ ವಿಚಾರಣೆಯನ್ನು ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News