ಮಹಿಳೆಯರಿಗೆ ಪ್ರವೇಶಾವಕಾಶ ಮುಂದುವರಿಕೆ: ಶಬರಿಮಲೆ ಪ್ರಕರಣ ವಿಸ್ತೃತ ಪೀಠಕ್ಕೆ ವರ್ಗಾವಣೆ

Update: 2019-11-14 15:24 GMT

  ಹೊಸದಿಲ್ಲಿ, ನ.14: ಕೇರಳದ ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಎಲ್ಲಾ ವರ್ಗದ ಮಹಿಳೆಯರಿಗೂ ಪ್ರವೇಶಾವಕಾಶ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಲಾಗಿರುವ ಎಲ್ಲಾ ಅರ್ಜಿಗಳನ್ನೂ 7 ಸದಸ್ಯರ ವಿಸ್ತೃತ ನ್ಯಾಯಪೀಠಕ್ಕೆ ವಹಿಸಲಾಗಿದೆ.

 ಶಬರಿಮಲೆ ದೇವಸ್ಥಾನ ಹಾಗೂ ಮಸೀದಿಗಳಿಗೆ ಮಹಿಳೆಯರಿಗೆ ಪ್ರವೇಶಾವಕಾಶ , ದಾವೂದಿ ಬೋಹ್ರ ಸಮುದಾಯದಲ್ಲಿ ಸ್ತ್ರೀ ಜನನಾಂಗ ವಿರೂಪಗೊಳಿಸುವುದೂ ಸೇರಿದಂತೆ ವಿವಿಧ ಧಾರ್ಮಿಕ ವಿಷಯಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು 7 ಸದಸ್ಯರ ವಿಸ್ತೃತ ನ್ಯಾಯಪೀಠಕ್ಕೆ ವಹಿಸಲಾಗಿದೆ ಎಂದು ನ್ಯಾಯಪೀಠ ತಿಳಿಸಿದೆ. ಅಲ್ಲದೆ, ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶಾವಕಾಶ ಒದಗಿಸಿದ್ದ 2018ರ ಸೆಪ್ಟೆಂಬರ್ 28ರ ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ನ್ಯಾಯಪೀಠ ಯಾವುದೇ ವ್ಯತಿರಿಕ್ತ ಸೂಚನೆ ನೀಡಿಲ್ಲ.

ನ್ಯಾಯಪೀಠದಲ್ಲಿದ್ದ ಸಿಜೆಐ ರಂಜನ್ ಗೊಗೊಯಿ, ಎಎಂ ಖಾನ್ವಿಳ್ಕರ್ ಮತ್ತು ಇಂದು ಮಲ್ಹೋತ್ರಾ ಈ ಅರ್ಜಿಗಳನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸುವ ನಿರ್ಧಾರಕ್ಕೆ ಬಂದರೆ, ನ್ಯಾಯಮೂರ್ತಿಗಳಾದ ಆರ್‌ಎಫ್ ನಾರಿಮನ್ ಮತ್ತು ಡಿವೈ ಚಂದ್ರಚೂಡ್ ಭಿನ್ನ ಅಭಿಪ್ರಾಯ ತಳೆದಿದ್ದು ಮರುಪರಿಶೀಲನೆ ಕೋರಿದ ಎಲ್ಲಾ ಅರ್ಜಿಗಳನ್ನೂ ತಿರಸ್ಕರಿಸಿ, ಸೆಪೆಂಬರ್ 28ರ ತೀರ್ಪನ್ನೇ ಅನುಸರಿಸಬೇಕೆಂಬ ನಿರ್ಧಾರ ಪ್ರಕಟಿಸಿದರು. ಅಂತಿಮವಾಗಿ ವಿಸ್ತೃತ ಪೀಠಕ್ಕೆ ವರ್ಗಾಯಿಸುವ ನಿರ್ಧಾರವನ್ನು 3:2ರ ತೀರ್ಪಿನ ಆಧಾರದಲ್ಲಿ ಪ್ರಕಟಿಸಲಾಯಿತು.

 ಕೇರಳದ ಶಬರಿಮಲೆ ದೇವಸ್ಥಾನಕ್ಕೆ ಎಲ್ಲಾ ವರ್ಗದ ಮಹಿಳೆಯರಿಗೂ ಪ್ರವೇಶಾವಕಾಶ ಕಲ್ಪಿಸಿ ಸುಪ್ರೀಂಕೋರ್ಟ್ 2018ರ ಸೆ.28ರಂದು ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಒಟ್ಟು 65 ಅರ್ಜಿಗಳನ್ನು ಸಲ್ಲಿಸಲಾಗಿದೆ. ನ್ಯಾಯಾಲಯದ ಆದೇಶವನ್ನು ವಿರೋಧಿಸಿ ಕೇರಳದಲ್ಲಿ ವಿವಿಧ ಹಿಂದು ಸಂಘಟನೆಗಳು ಹಾಗೂ ಬಿಜೆಪಿ ಕಾರ್ಯಕರ್ತರು ಭಾರೀ ಪ್ರತಿಭಟನೆ ನಡೆಸಿದ್ದರು. ಬಿಂದು ಅಮ್ಮಿಣಿ ಹಾಗೂ ಕನಕ ದುರ್ಗ ಎಂಬ ಇಬ್ಬರು ಮಹಿಳೆಯರು ವಿರೋಧ, ಅಡೆತಡೆಯ ಮಧ್ಯೆಯೂ ದೇವಸ್ಥಾನವನ್ನು ಪ್ರವೇಶಿಸಲು ಸಫಲರಾಗಿದ್ದರು.

  ಶಬರಿಮಲೆ ದೇವಸ್ಥಾನದ ತಂತ್ರಿಗಳಾದ ನಾಯರ್ ಸೇವಾ ಸಮಾಜದವರು ಸುಪ್ರೀಂಕೋರ್ಟ್‌ನ ತೀರ್ಪನ್ನು ವಿರೋಧಿಸಿದ್ದರು. ಶಬರಿಮಲೆ ದೇವಸ್ಥಾನದ ಆಡಳಿತ ನಿರ್ವಹಿಸುತ್ತಿರುವ ಟ್ರಾವಂಕೋರ್ ದೇವಸ್ವಂ ಬೋರ್ಡ್(ಟಿಡಿಬಿ) ಆರಂಭದಲ್ಲಿ ತೀರ್ಪನ್ನು ವಿರೋಧಿಸಿದ್ದರೂ ಬಳಿಕ ಸುಪ್ರೀಂಕೋರ್ಟ್‌ನ ಆದೇಶಕ್ಕೆ ತಾನು ಬದ್ಧ ಎಂದು ತಿಳಿಸಿತ್ತು. ಸುಪ್ರೀಂಕೋರ್ಟ್‌ನ ತೀರ್ಪನ್ನು ಸ್ವಾಗತಿಸಿದ್ದ ಕೇರಳದ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್ ಸರಕಾರ, ಸರ್ವೋಚ್ಛ ನ್ಯಾಯಾಲಯ ಮರುಪರಿಶೀಲನೆ ಕೋರಿದ ಎಲ್ಲಾ ಅರ್ಜಿಗಳನ್ನೂ ತಿರಸ್ಕರಿಸಬೇಕು ಎಂದು ಆಗ್ರಹಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News