ರಾಹುಲ್ ಗಾಂಧಿ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣ ರದ್ದು

Update: 2019-11-14 17:14 GMT

ಹೊಸದಿಲ್ಲಿ, ನ. 14: ‘‘ಚೌಕಿ ದಾರ್ ಚೋರ್ ಹೈ’’ ಹೇಳಿಕೆ ಕುರಿತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣವನ್ನು ಸುಪ್ರೀಂ ಕೋರ್ಟ್ ಗುರುವಾರ ರದ್ದುಗೊಳಿಸಿದೆ.

ನರೇಂದ್ರ ಮೋದಿ ಅವರನ್ನು ಟೀಕಿಸುವ ಭರದಲ್ಲಿ ನ್ಯಾಯಾಲಯವನ್ನು ಉಲ್ಲೇಖಿಸಿ ‘‘ಚೌಕಿ ದಾರ್ ಚೋರ್ ಹೈ’’ ಎಂದು ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸುತ್ತಿದ್ದರು.

ಅನಂತರ ರಾಹುಲ್ ಗಾಂಧಿ ಕ್ಷಮೆ ಕೋರಿದ್ದರು. ಸುಪ್ರೀಂ ಕೋರ್ಟ್ ಗುರುವಾರ ರಾಹುಲ್ ಗಾಂಧಿ ಅವರ ‘ನಿಶ್ಯರ್ತ ಕ್ಷಮೆ’ ಸ್ವೀಕರಿಸಿದೆ ಹಾಗೂ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣವನ್ನು ರದ್ದುಗೊಳಿಸಿದೆ.

ಇದೇ ಸಂದರ್ಭ ರಾಹುಲ್ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್, ಅವರ ಸ್ಥಾನದಲ್ಲಿರುವ ಯಾರಾದರೂ ಹೆಚ್ಚು ಜಾಗರೂಕರಾಗಿಬೇಕು. ರಾಹುಲ್ ಗಾಂಧಿ ಅವರು ಭವಿಷ್ಯದಲ್ಲಿ ಎಚ್ಚರಿಕೆಯಿಂದ ಇರಬೇಕು ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ, ನ್ಯಾಯಮೂರ್ತಿ ಗಳಾದ ಎಸ್.ಕೆ. ಕೌಲ್ ಹಾಗೂ ಕೆ.ಎಂ. ಜೋಸೆಫ್ ಒಳಗೊಂಡ ಸುಪ್ರೀಂ ಕೋರ್ಟ್‌ನ ಪೀಠ ಎಚ್ಚರಿಕೆ ನೀಡಿತು.

ರಫೇಲ್ ಪ್ರಕರಣಕ್ಕೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಅವರು ‘‘ಚೌಕಿ ದಾರ್ ಚೋರ್ ಹೈ’’ ಎಂಬುದನ್ನು ನ್ಯಾಯಾಲಯವೇ ಒಪ್ಪಿಕೊಂಡಿದೆ ಎಂದು ತಪ್ಪಾಗಿ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಅವರು ರಾಹುಲ್ ಗಾಂಧಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ತೀರ್ಪನ್ನು ಸುಪ್ರೀಂ ಕೋರ್ಟ್ ಇಂದು ಪ್ರಕಟಿಸಿತು.

ರಫೇಲ್ ಒಪ್ಪಂದದ ಬಗ್ಗೆ ಕಳೆದ ವರ್ಷ ಡಿಸೆಂಬರ್ 14ರಂದು ನೀಡಿದ ತೀರ್ಪಿನ ವಿರುದ್ಧ ಮರು ಪರಿಶೀಲನಾ ಅರ್ಜಿಗೆ ಬೆಂಬಲವಾಗಿ ನಿರ್ದಿಷ್ಟ ದಾಖಲೆಗಳನ್ನು ಪರಿಗಣಿಸುವ ಕುರಿತು ಕೇಂದ್ರ ಸರಕಾರದ ಪ್ರಾಥಮಿಕ ಆಕ್ಷೇಪವನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ್ದ ಎಪ್ರಿಲ್ 10ರಂದು ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News