ರಾಣೆಬೆನ್ನೂರಿನಲ್ಲಿ ಪುತ್ರನ ಸ್ಪರ್ಧೆ ವಿಚಾರ: ಮಾಧ್ಯಮಗಳ ವಿರುದ್ಧ ಸಚಿವ ಈಶ್ವರಪ್ಪ ಆಕ್ರೋಶ

Update: 2019-11-15 12:26 GMT

ಶಿವಮೊಗ್ಗ, ನ.15: ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದಿಂದ ಪುತ್ರ ಕೆ.ಇ.ಕಾಂತೇಶ್ ಸ್ಪರ್ಧೆ ವಿಚಾರದ ಕುರಿತಂತೆ ಸಚಿವ ಕೆ.ಎಸ್.ಈಶ್ವರಪ್ಪ ಪತ್ರಕರ್ತರ ವಿರುದ್ದ ಗರಂ ಆಗಿ, 'ನಿಮಗೆ ಯಾವ ಭಾಷೆಯಲ್ಲಿ ಹೇಳಲಿ' ಎಂದು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ ಕೆ.ಇ.ಕಾಂತೇಶ್ ಸ್ಪರ್ಧೆಯ ಪ್ರಶ್ನೆಗೆ ಸಿಡಿಮಿಡಿಗೊಂಡರು. 'ನಿಮಗೆ ಎಷ್ಟು ಬಾರಿ ಹೇಳಬೇಕು. ಈಗಾಗಲೇ ನಿಮಗೆ ಮೂರ್ನಾಲ್ಕು ಬಾರಿ ಹೇಳಿದ್ದೆನೆ. ಆ ದಿಕ್ಕಿನಲ್ಲಿ ಯೋಚಿಸಿಯೇ ಇಲ್ಲ. ಆದರೂ ಕೂಡ ಕೆಲವು ಟಿ.ವಿ. ಮಾಧ್ಯಮದವರು ಕಾಂತೇಶ್ ಸ್ಪರ್ಧಿಸುತ್ತಾರೆ ಎಂದು ಪ್ರಸಾರ ಮಾಡುತ್ತಿದ್ದಾರೆ. ಇನ್ನ್ಯಾವ ಭಾಷೆಯಲ್ಲಿ ಹೇಳಬೇಕೋ ಎಂಬುವುದು ಗೊತ್ತಾಗುತ್ತಿಲ್ಲ' ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಪೇಜಾವರ ಶ್ರೀಗಳನ್ನು ನಮಸ್ಕರಿಸುವ ಉದ್ದೇಶದಿಂದ ತಾವು ಪತ್ನಿಯ ಜೊತೆ ಹೋಗಿದ್ದೆ. ಆದರೆ ಟಿ.ವಿ. ಮಾಧ್ಯಮದವರು ತಮ್ಮ ಪುತ್ರನಿಗೆ ಟಿಕೆಟ್ ಸಿಗಲು ಲಾಬಿ ಮಾಡಲು ಹೋಗಿದ್ದೆನೆ ಎಂದು ಬಿಂಬಿಸಿದರು. ಇವರಿಗೆ ಯಾವ ರೋಗ ಬಡಿದಿದೆಯೋ' ಎಂದು ಕಿಡಿಕಾರಿದರು. 

ಮುಂಬರುವ ಉಪ ಚುನಾವಣೆಯಲ್ಲಿ ಅಥಣಿ ಕ್ಷೇತ್ರ ಸೇರಿದಂತೆ ಎಲ್ಲ 15 ಕ್ಷೇತ್ರಗಳಲ್ಲಿಯೂ ಬಿಜೆಪಿ ಜಯ ಸಾಧಿಸಲಿದೆ. ಈ ಬಗ್ಗೆ ಯಾವ ಅನುಮಾನಗಳು ಬೇಡ. ಸರ್ಕಾರ ಮತ್ತಷ್ಟು ಸುಭದ್ರವಾಗಿರಲಿದೆ. ಈ ಬಗ್ಗೆ ಯಾವುದೇ ಅನುಮಾನಗಳು ಬೇಡ ಎಂದು ಹೇಳಿದರು. 

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣಕರ್ತರಾದ ಅನರ್ಹ ಶಾಸಕರಿಗೂ ಟಿಕೆಟ್ ಕೊಡುವುದು ಮತ್ತು ಗೆಲ್ಲಿಸುವುದು ನಮ್ಮ ಕರ್ತವ್ಯವಾಗಿದೆ. ಅಥಣಿಯಲ್ಲಿ ಲಕ್ಷ್ಮಣ್ ಸವದಿಯವರು ಕೂಡ ಪ್ರಚಾರ ನಡೆಸಲಿದ್ದಾರೆ ಎಂದು ಇದೇ ವೇಳೆ ಅವರು ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News