ರಾಣೆಬೆನ್ನೂರು ಕ್ಷೇತ್ರದಲ್ಲಿ ಅರುಣ್ ಕುಮಾರ್ ಗೆ ಟಿಕೆಟ್ ಘೋಷಿಸಿದ ಬಿಜೆಪಿ

Update: 2019-11-15 14:37 GMT

ಬೆಂಗಳೂರು, ನ.15: ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಅರುಣ್‌ಕುಮಾರ್ ಗುತ್ತೂರ್ ಅವರಿಗೆ ಬಿಜೆಪಿ ಟಿಕೆಟ್ ಘೋಷಿಸಿದೆ. ಆ ಮೂಲಕ ಅನರ್ಹ ಶಾಸಕ ಆರ್.ಶಂಕರ್‌ಗೆ ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿ, ಸಚಿವ ಸ್ಥಾನ ನೀಡಲು ಬಿಜೆಪಿ ನಿರ್ಧರಿಸಿದೆ.

ರಾಣೆಬೆನ್ನೂರು ಕ್ಷೇತ್ರದಿಂದ ನನಗೆ ಬಿಜೆಪಿ ಟಿಕೆಟ್ ನೀಡಲೇಬೇಕು. ಚುನಾವಣೆಯಲ್ಲಿ ಸ್ಪರ್ಧಿಸುವ ನನ್ನ ನಿರ್ಧಾರದಿಂದ ಹಿಂದಕ್ಕೆ ಸರಿಯುವ ಪ್ರಶ್ನೆಯೇ ಇಲ್ಲ. ನನಗೆ ವಿಧಾನಪರಿಷತ್ ಸದಸ್ಯತ್ವ ಅಗತ್ಯವಿಲ್ಲ. ಎರಡು ಬಾರಿ ಸಚಿವನಾಗಿ ಕೆಲಸ ಮಾಡಿದ್ದೇನೆ. ನನ್ನ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ದುಡಿದಿದ್ದೇನೆ ಎಂದು ಶುಕ್ರವಾರ ಬೆಳಗ್ಗೆ ಅನರ್ಹ ಶಾಸಕ ಆರ್.ಶಂಕರ್ ಹೇಳಿದ್ದರು.

ರಾಣೆಬೆನ್ನೂರು ಕ್ಷೇತ್ರದ ಟಿಕೆಟ್ ಬೇರೆಯವರ ಪಾಲಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಶಂಕರ್ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡ ಮುಖ್ಯಮಂತ್ರಿ ಯಡಿಯೂರಪ್ಪ, ಅವರ ಜೊತೆ ಮಾತುಕತೆ ನಡೆಸಿ ಸಚಿವ ಸ್ಥಾನದ ಭರವಸೆ ನೀಡಿ, ಚುನಾವಣೆಯಲ್ಲಿ ಸ್ಪರ್ಧಿಸದಂತೆ ಮನವೊಲಿಸುವಲ್ಲಿ ಯಶಸ್ವಿಯಾದರು.

ಮುಖ್ಯಮಂತ್ರಿ ಭೇಟಿ ಬಳಿಕ ಮಾತನಾಡಿದ ಶಂಕರ್, ಮುಖ್ಯಮಂತ್ರಿ ಯಡಿಯೂರಪ್ಪ ನನಗೆ ಸಚಿವ ಸ್ಥಾನದ ಭರವಸೆ ನೀಡಿದ್ದಾರೆ. ರಾಣೆಬೆನ್ನೂರು ಕ್ಷೇತ್ರದಲ್ಲಿ ಯಾರೇ ಸ್ಪರ್ಧಿಸಿದರೂ ಅವರ ಗೆಲುವಿಗೆ ಶ್ರಮಿಸುತ್ತೇನೆ ಎಂದರು.

ಇದೇ ವೇಳೆ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಶಂಕರ್ ಜೊತೆ ಮಾತುಕತೆ ನಡೆಸಿದ್ದೇನೆ. ಅವರನ್ನು ವಿಧಾನಪರಿಷತ್‌ಗೆ ಆಯ್ಕೆ ಮಾಡಿ ಸಚಿವ ಸ್ಥಾನ ನೀಡಲಾಗುವುದು. ನನ್ನ ಮಾತಿಗೆ ಶಂಕರ್ ಒಪ್ಪಿಕೊಂಡಿದ್ದಾರೆ. ರಾಣೆಬೆನ್ನೂರು ಕ್ಷೇತ್ರದಿಂದ ಅರುಣ್ ಕುಮಾರ್ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂದರು.

ರಾಜಕೀಯಕ್ಕೆ ಹೊಸ ತಿರುವು: ಡಿಸೆಂಬರ್ 9ರ ನಂತರ ರಾಜ್ಯ ರಾಜಕೀಯಕ್ಕೆ ಹೊಸ ತಿರುವು ಸಿಗಲಿದೆ. ಮುಂದಿನ ಮೂರುವರೆ ವರ್ಷ ಸುಭದ್ರ ಸರಕಾರ ನೀಡುತ್ತೇವೆ. ಉಪ ಚುನಾವಣೆಯಲ್ಲಿ 15 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸುವ ವಿಶ್ವಾಸವಿದೆ. ರೋಷನ್ ಬೇಗ್ ಪಕ್ಷೇತರರಾಗಿ ಸ್ಪರ್ಧಿಸುವುದು ಅವರ ಸ್ವಂತ ನಿರ್ಧಾರ ಎಂದು ಯಡಿಯೂರಪ್ಪ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News