ರಫೇಲ್ ಒಪ್ಪಂದ: ರಾಹುಲ್ ಗಾಂಧಿ ಕ್ಷಮೆಯಾಚನೆಗೆ ಒತ್ತಾಯಿಸಿ ನಾಳೆ ಬಿಜೆಪಿ ಪ್ರತಿಭಟನೆ

Update: 2019-11-15 16:34 GMT

ಬೆಂಗಳೂರು, ನ.15: ರಫೇಲ್ ಒಪ್ಪಂದ ಕುರಿತು ಸುಳ್ಳು ಮಾಹಿತಿ ಮತ್ತು ಸುದ್ದಿಯನ್ನು ಹಬ್ಬಿಸಿರುವ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ದೇಶದ ಕ್ಷಮೆ ಕೋರುವಂತೆ ಒತ್ತಾಯಿಸಿ ಶನಿವಾರ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ ಪ್ರತಿಭಟನೆ ನಡೆಸಲಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ತಿಳಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ಸರಕಾರವನ್ನು ದೋಷಮುಕ್ತಗೊಳಿಸಿ ನೀಡಿದ್ದ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ ಎಂದರು.

ಒಪ್ಪಂದ ಕುರಿತು ಸುಳ್ಳು ಮಾಹಿತಿ ಹಾಗೂ ಸುದ್ದಿ ಹಬ್ಬಿಸಿದ ರಾಹುಲ್‌ ಗಾಂಧಿಗೆ ನ್ಯಾಯಲಯ ಛೀಮಾರಿ ಹಾಕಿದೆ. ದೇಶದ ಭದ್ರತೆಯ ಪ್ರಮುಖ ವಿಷಯದಲ್ಲಿ ಸುಳ್ಳು ಹೇಳಿಕೆಗಳನ್ನು ನೀಡಿರುವ ರಾಹುಲ್‌ಗಾಂಧಿ ದೇಶದ ಕ್ಷಮೆಯಾಚಿಸುವಂತೆ ಒತ್ತಾಯಿಸಿ ಬಿಜೆಪಿ ನಾಳೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಬೆಳಗ್ಗೆ 11 ಗಂಟೆಗೆ ಪ್ರತಿಭಟನೆ ನಡೆಸಲಿದೆ ಎಂದು ಅವರು ಹೇಳಿದರು.

ದಿಲ್ಲಿಯ ಜೆಎನ್‌ಯು ವಿಶ್ವವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ಭಗ್ನಗೊಳಿಸಿದ ಕಿಡಿಗೇಡಿಗಳ ಕೃತ್ಯ ಖಂಡನೀಯ. ಮಹಾತ್ಮಗಾಂಧಿ, ಸುಭಾಷ್‌ ಚಂದ್ರಬೋಸ್ ಹಾಗೂ ನಮ್ಮೆಲ್ಲರಿಗೂ ಸ್ಫೂರ್ತಿಯಾದ ವಿವೇಕಾನಂದರ ಪ್ರತಿಮೆ ಭಗ್ನಗೊಳಿಸಿರುವುದು ದೇಶ ದ್ರೋಹಿಗಳ ಕೃತ್ಯವಾಗಿದೆ. ಕೂಡಲೇ ಈ ಕಿಡಿಗೇಡಿಗಳನ್ನು ಬಂಧಿಸಬೇಕು ಎಂದು ರವಿಕುಮಾರ್ ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News