ನನ್ನ ಹಾಗೂ ಶ್ರೀನಿವಾಸಪ್ರಸಾದ್ ಸಂಬಂಧದಿಂದ ಯಡಿಯೂರಪ್ಪ ಸಿಎಂ ಆದರು: ಎಚ್.ವಿಶ್ವನಾಥ್

Update: 2019-11-15 16:50 GMT

ಮೈಸೂರು,ನ.15: ನಾನು ಬಿಜೆಪಿ ಸೇರಲು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಕಾರಣ. ನನ್ನ ಮತ್ತು ವಿ.ಶ್ರೀನಿವಾಸ್ ಪ್ರಸಾದ್ ಅವರ ಅವಿನಾಭಾವ ಸಂಬಂಧದಿಂದ ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಲು ಕಾರಣವಾಯಿತು ಎಂದು ಮಾಜಿ ಸಚಿವ, ಅನರ್ಹ ಶಾಸಕ ಎಚ್.ವಿಶ್ವನಾಥ್ ಹೇಳಿದರು.

ಬಿಜೆಪಿ ಸೇರ್ಪಡೆ ನಂತರ ಮೊದಲ ಬಾರಿಗೆ ಶುಕ್ರವಾರ ಬಿಜೆಪಿ ಕಚೇರಿಗೆ ಭೇಟಿ ನೀಡಿದ ಅವರು ಜಿಲ್ಲಾ ಬಿಜೆಪಿ ನಾಯಕರೊಂದಿಗೆ ಉಪಹಾರ ಸೇವಿಸಿದರು. ಬಳಿಕ ಬಿಜೆಪಿ ಕಚೇರಿಯಲ್ಲಿ ನಡೆದ ಕನಕದಾಸ ಜಯಂತಿಯಲ್ಲಿ ಭಾಗಿಯಾದರು. 

ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಇಷ್ಟೆಲ್ಲಾ ಬೆಳವಣಿಗೆ ನಡೆಯಲು ಕಾರಣ ವಿ.ಶ್ರೀನಿವಾಸಪ್ರಸಾದ್. ಶ್ರೀನಿವಾಸಪ್ರಸಾದ್ ಮೂಲಕ ಬಿ.ಎಸ್. ಯಡಿಯೂರಪ್ಪ ನನಗೆ ಪಕ್ಷಕ್ಕೆ ಆಹ್ವಾನಿಸಿದರು. ಇಬ್ಬರು ಮೂವರು ಬರುತ್ತಾರೆ ಹೋಗುತ್ತಾರೆ. ಜೆಡಿಎಸ್ ಬಿಟ್ಟು ಬಿಜೆಪಿಯನ್ನು ಅಧಿಕಾರಕ್ಕೆ ತರಲು ನೀವೇ ಮುಂದೆ ನಿಲ್ಲಬೇಕು ಎಂದು ಶ್ರೀನಿವಾಸಪ್ರಸಾದ್ ಕೇಳಿದರು. ಆವತ್ತು ಅವರ ಮನೆಯಲ್ಲೇ ಎಲ್ಲವೂ ತೀರ್ಮಾನವಾಗಿ ಹೋಯಿತು. ಪ್ರಸಾದ್ ಅಲ್ಲದೆ ಬೇರೆ ಯಾರು ಕೇಳಿದ್ದರೂ ನಾನು ಇದಕ್ಕೆ ಒಪ್ಪುತ್ತಿರಲಿಲ್ಲ ಎಂದರು.

ಜೆಡಿಎಸ್ ಪಕ್ಷದ ಕಚೇರಿ ಪಕ್ಷದ ಹೆಸರಿನಲ್ಲಿ ಇಲ್ಲ, ಕುಟುಂಬದ ಹೆಸರಿನಲ್ಲಿದೆ. ಆದರೆ, ಮೈಸೂರಿನಲ್ಲಿ ಬಿಜೆಪಿ ಮುಖಂಡರೊಬ್ಬರು ತಾವು ದುಡಿದ ಹಣದಲ್ಲಿ ಪಕ್ಷಕ್ಕೆ ಕಚೇರಿ ಕಟ್ಟಿ ಕೊಟ್ಟಿರೋದು ಗ್ರೇಟ್. ರಾಜ್ಯದಲ್ಲಾದ ರಾಜಕೀಯ ಪಲ್ಲಟವನ್ನು ಯಾವ ಸಾಹಿತಿ, ರಾಜಕೀಯ ಚಿಂತಕ ಸರಿಯಾಗಿ ವಿಶ್ಲೇಷಿಸಲಿಲ್ಲ. ನಮ್ಮನ್ನು ಬಾಯಿಗೆ ಬಂದಂತೆ ಅನರ್ಹರು, ಅಬ್ಬೆಪಾರಿಗಳು ಅಂತ ಕರೆದರು. ಇದು ನೋವು ತಂದಿತು. ನಾವು ಪಕ್ಷಾಂತರಿಗಳಲ್ಲ. ಇದು ರಾಜಕೀಯ ಧ್ರುವೀಕರಣ. ರಾಜ್ಯದಲ್ಲಿ ರಾಕ್ಷಸ ರಾಜಕಾರಣ, ಜಾತಿ ರಾಜಕಾರಣ ಹೆಚ್ಚಾದಾಗ ತ್ಯಾಗ ಮಾಡಲೇಬೇಕಾಯಿತು ಎಂದರು.

ದೇವರಾಜ ಅರಸು ಹೇಗೆ ಜಾತಿ ಇಲ್ಲದ ಜಾತಿಯಿಂದ ಬಂದರೋ, ಅದೇ ರೀತಿ ಮೋದಿ ಜಾತಿ ಇಲ್ಲದ ಜಾತಿಯಿಂದ ಬಂದಿದ್ದಾರೆ. ದೇವರಾಜ ಅರಸು ಜೊತೆ ಮೋದಿ ಅವರನ್ನು ಸಮೀಕರಣ ಮಾಡಿ ನೋಡಬೇಕು ಎಂದರು.

ಈ ಸಂದರ್ಭ ಸಂಸದ ಪ್ರತಾಪ್ ಸಿಂಹ, ಮಾಜಿ ಸಚಿವ ಸಿ.ಹೆಚ್.ವಿಜಯಶಂಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News