ಯೋಗ ಒಲಿಂಪಿಕ್ಸ್ ಕ್ರೀಡೆಯಾಗಿ ಪರಿಚಯಿಸಲು ಚಿಂತನೆ: ಕೇಂದ್ರ ಸಚಿವ ಶ್ರೀಪಾದ್ ನಾಯಕ್

Update: 2019-11-15 18:12 GMT

ಮೈಸೂರು,ನ.15: ಆಯುಷ್ ಇಲಾಖೆಯಿಂದ ಯೋಗವನ್ನು ಒಲಿಂಪಿಕ್ಸ್ ಕ್ರೀಡೆಯಾಗಿ ಪರಿಚಯಿಸಲು ಚಿಂತಿಸಲಾಗುತ್ತಿದೆ ಎಂದು ಕೇಂದ್ರ ಆಯುಷ್ ಸಚಿವ ಹಾಗೂ ರಕ್ಷಣಾ ಇಲಾಖೆಯ ರಾಜ್ಯ ಸಚಿವ ಶ್ರೀಪಾದ್ ಯಶೋ ನಾಯಕ್ ತಿಳಿಸಿದರು.

ಕರ್ನಾಟಕ ರಾಜ್ಯ ಮುಕ್ತ ವಿವಿ ಆವರಣದಲ್ಲಿರುವ ಸಭಾಂಗಣದಲ್ಲಿ ಶುಕ್ರವಾರ, ಭಾರತ ಆಯುಷ್ ಇಲಾಖೆಯು ಆಯೋಜಿಸಿರುವ ಯೋಗ ಫಾರ್ ಹಾರ್ಟ್ ಕೇರ್ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಆಯುಷ್ ಇಲಾಖೆಗೆ ಪ್ರತ್ಯೇಕ ಸಚಿವಾಲಯ ನೀಡಿದ ಬಳಿಕ ಅನೇಕ ಕಾರ್ಯಕ್ರಮಗಳನ್ನು ಕೈಗೊಂಡಿದ್ದೇವೆ. ಮುಖ್ಯವಾಗಿ ಮೊರಾರ್ಜಿ ದೇಸಾಯಿ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಯೋಗ ತೆರೆಯಲಾಗಿದೆ. ಶಾಲೆಗಳಿಲ್ಲಿ ಯೋಗವನ್ನು ಕ್ರೀಡೆಯ ಮೂಲಕ ಪರಿಚಯಿಸುವ ಉದ್ದೇಶವಿದ್ದು, ಅದಕ್ಕೆ ಬೇಕಾದ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಯೋಗವನ್ನು ಒಲಿಂಪಿಕ್ಸ್ ನಲ್ಲಿ ಕ್ರೀಡೆಯಾಗಿ ಪರಿಚಯಿಸಲು ತೀರ್ಮಾನಿಸಲಾಗಿದೆ. ಆ ಮೂಲಕ ಯೋಗ ಪದ್ಧತಿಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ಮತ್ತು ಜನರ ಆರೋಗ್ಯ ರಕ್ಷಣೆಯ ಉದ್ದೇಶ ಹೊಂದಲಾಗಿದೆ ಎಂದರು.

ಪ್ರಸ್ತುತ ಆಪ್ ಬಿಡುಗಡೆಗೊಳಿಸುತ್ತಿದ್ದು, ಇದರ ಮೂಲಕ ಎಲ್ಲಿ ಯೋಗ ತರಬೇತಿ ನೀಡಲಾಗುತ್ತಿದೆ ಮತ್ತು ಎಲ್ಲಿ ಯೋಗ ಸ್ಪರ್ಧೆಗಳು ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಲಿದೆ. ಮೈಸೂರಿನಲ್ಲಿ 2020ರ ವೇಳೆಗೆ ಆಯೋಜಿಸುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಿ, ಅವರನ್ನು ಕರೆತರುವ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಪತಂಜಲಿ ಸಂಸ್ಥೆ ಸಂಸ್ಥಾಪಕ ಬಾಬಾ ರಾಮದೇವ್ ಮಾತನಾಡಿ, ಯೋಗ ಫಾರ್ ಹಾರ್ಟ್ ಕೇರ್ ಎಂಬ ಹೆಸರಿನಲ್ಲಿ ಈ ಸಮ್ಮೇಳನ ಆಯೋಜಿಸಲಾಗಿದೆ. ಆದರೆ ಯೋಗ ಫಾ ಹಾರ್ಟ್ ಕ್ಯೂರ್ ಎಂದಾಗಬೇಕು. ನಾವು ಪರಿಸರವನ್ನು ಸ್ವಚ್ಛಗೊಳಿಸುತ್ತಿದ್ದೇವೆ. ನಾವು ಬಾಹ್ಯ ಪ್ರಪಂಚ ಸ್ವಚ್ಛವಾಗಿರುವಂತೆಯೇ ನಮ್ಮ ಅಂತರಂಗವೂ ಸ್ವಚ್ಛವಾಗಿರಬೇಕು. ದುರಾಲೋಚನೆ, ದುರಾಸೆ, ದುರ್ಬುದ್ಧಿ ಮುಂತಾದವುಗಳಿಂದ ಮುಕ್ತವಾಗಬೇಕು. ಯೋಗವು ಮನುಷ್ಯನನ್ನು ರೋಗಮುಕ್ತಗೊಳಿಸುವ ಜೊತೆಗೆ ಸ್ವಸ್ಥ ಮನಸ್ಸನ್ನು ನೀಡುತ್ತದೆ ಎಂದರು.

ವ್ಯಕ್ತಿಯೊಬ್ಬರು ಅತಿಯಾದ ರಕ್ತದೊತ್ತಡದಿಂದ ಬಳಲುತ್ತಿದ್ದರು. ಅವರಿಗೆ ಬೈಪಾಸ್ ಸರ್ಜರಿ ಮಾಡಬೇಕಾದ ಅಗತ್ಯವಿತ್ತು. ಅವರಿಗೆ ಸರಳವಾಗಿ ಉಸಿರಾಡುವ ಕ್ರಿಯೆಯನ್ನು ಹೇಳಿಕೊಡುವ ಮೂಲಕ ಕೇವಲ 20 ದಿನದಲ್ಲಿ ಅವರ ರಕ್ತದೊತ್ತಡವನ್ನು ಶೇ.100ರಷ್ಟು ನಿವಾರಿಸಿದೆ. ಇದೊಂದು ನೈಸರ್ಗಿಕ ಬೈಪಾಸ್. ಆದ್ದರಿಂದ ಹೃದಯ ರೋಗ, ಮದುಮೇಹ, ಹೈಪರ್ ಟೆನ್ಷನ್, ಕೊಲೆಸ್ಟ್ರಾಲ್ ಮುಂತಾದ ಯಾವುದೇ ಸಮಸ್ಯೆಯಿಂದ ಬಳಲುತ್ತಿದ್ದರು ಯೋಗದ ಮೂಲಕ ಗುಣಪಡಿಸಬುದು. ಕೇವಲ 2 ಗಂಟೆಯಲ್ಲಿ ಸುಮಾರು 2 ಕೆಜಿಯಷ್ಟು ತೂಕ ಇಳಿಸುವ ಶಕ್ತಿ ಯೋಗಕ್ಕಿದೆ ಎಂದು ಅವರು ವಿವರಿಸಿದರು.

ಕಾರ್ಯಕ್ರಮದಲ್ಲಿ ಹೈದರಾಬಾದ್‍ನ ರಾಮಚಂದ್ರ ಮಿಷನ್‍ನ ಅಧ್ಯಕ್ಷ ಕಮಲೇಶ್ ಡಿ. ಪಾಟೀಲ್ ಮಾತನಾಡಿದರು. ಆಯುಷ್ ಇಲಾಖೆ ಕಾರ್ಯದರ್ಶಿ ವಿದ್ಯಾರಾಜೇಶ್ ಕೋಟೆಚ ಪ್ರಾಸ್ತಾವಿಕ ಭಾಷಣ ಮಾಡಿದರು. ಬೆಂಗಳೂರಿನ ಎಸ್‍ವಿವೈಎಎಸ್‍ಎ ವಿವಿ ಕುಲಪತಿ ಡಾ.ಎಚ್.ಆರ್. ನಾಗೇಂದ್ರ, ಹೆಚ್ಚುವರಿ ಕಾರ್ಯದರ್ಶಿ ಪಿ.ಕೆ. ಪಾಟಕ್, ಡಾ. ಮೀನಾಕ್ಷಿದೇವಿ, ಸಮ್ಮೇಳನದ ಮುಖ್ಯಸ್ಥ ಡಾ. ಬಸವರೆಡ್ಡಿ ಉಪಸ್ಥಿತರಿದ್ದರು.

ಮೈಸೂರು ಆಯುರ್ವೇದ ಕಾಲೇಜಿನ ನಿರ್ದೇಶ ಡಾ.ಲಕ್ಷ್ಮಿನಾರಾಯಣ ಶಣೈ, ಮೈಸೂರು ಜಿಲ್ಲಾ ಆಯುಷ್ ಅಧಿಕಾರಿ ಡಾ.ಸೀತಾಲಕ್ಷ್ಮಿ ಸೇರಿದಂತೆ ಹಲವರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News