ಭಾರತೀಯ ನೌಕಾ ಪಡೆಯ ಮಿಗ್ ಜೆಟ್ ಗೋವಾದಲ್ಲಿ ಪತನ

Update: 2019-11-16 18:29 GMT
Photo: ANI

ಹೊಸದಿಲ್ಲಿ, ನ. 16: ಭಾರತೀಯ ನೌಕಾ ಪಡೆಗೆ ಸೇರಿದ ಯುದ್ಧ ವಿಮಾನ ಮಿಗ್-29 ಕೆ ಗೋವಾದ ಡಾಬೋಲಿಮ್‌ನಿಂದ ನಿತ್ಯದಂತೆ ಶನಿವಾರ ತರಬೇತು ಹಾರಾಟ ಆರಂಭಿಸಿದ ಸ್ವಲ್ಪ ಸಮಯದ ಬಳಿಕ ಪತನಗೊಂಡಿದೆ.

ಯುದ್ಧ ವಿಮಾನದ ಪೈಲೆಟ್‌ಗಳಾದ ಕ್ಯಾಪ್ಟನ್ ಎಂ. ಶೋಖಂಡ್ ಹಾಗೂ ಲೆಫ್ಟಿನೆಂಟ್ ಕಮಾಂಡರ್ ದೀಪಕ್ ಯಾದವ್ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ.  

ಗೋವಾದ ಡಾಬೋಲಿಮ್‌ನ ಐಎನ್‌ಎಸ್ ಹಂಸಾ ವಾಯು ನೆಲೆಯಿಂದ ಬೆಳಗ್ಗೆ 11.45ಕ್ಕೆ ಹಾರಾಟ ಆರಂಭಿಸಿದ ಎರಡು ಆಸನಗಳ ಯುದ್ಧ ವಿಮಾನ ಮಿಗ್-29 ಕೆಗೆ ಹಕ್ಕಿಗಳ ಗುಂಪು ಢಿಕ್ಕಿ ಹೊಡೆಯಿತು. ಇದರಿಂದ ಎಡ ಎಂಜಿನ್‌ಗೆ ಬೆಂಕಿ ಹತ್ತಿಕೊಂಡು ಉರಿಯಿತು ಹಾಗೂ ಬಲ ಎಂಜಿನ್‌ಗೆ ಬೆಂಕಿ ಹತ್ತಿಕೊಂಡಿತು ಎಂದು ಹೇಳಿಕೆ ತಿಳಿಸಿದೆ. ಬೆಂಕಿ ಹತ್ತಿಕೊಂಡ ಯುದ್ಧ ವಿಮಾನವನ್ನು ಜನಸಂದಣಿಯಿಂದ ದೂರ ಇರುವ ಪ್ರದೇಶಕ್ಕೆ ಕೊಂಡೊಯ್ಯಲು ಪೈಲಟ್‌ಗಳು ಸಪಲರಾದರು. ತೆರೆದ ಸ್ಥಳದಲ್ಲಿ ಯುದ್ಧ ವಿಮಾನ ಪತನಗೊಂಡಿತು ಎಂದು ಹೇಳಿಕೆ ತಿಳಿಸಿದೆ.

ಈ ಘಟನೆ ಬಗ್ಗೆ ನೌಕಾ ಪಡೆಯಿಂದ ತನಿಖೆಗೆ ಆದೇಶಿಸಲಾಗಿದೆ. ಮಿಗ್ ತೆರೆದ ಪ್ರದೇಶದಲ್ಲಿ ಪತನವಾಗಿರುವುದರಿಂದ ಯಾವುದೇ ಜೀವಹಾನಿ ಅಥವಾ ಸೊತ್ತು ಹಾನಿ ಉಂಟಾಗಿಲ್ಲ ಎಂದು ನೌಕಾ ಪಡೆ ತಿಳಿಸಿದೆ.

 ಪೈಲಟ್‌ಗಳು ಜನಸಂದಣಿ ಇಲ್ಲದ ಪ್ರದೇಶಕ್ಕೆ ಮಿಗ್ ಅನ್ನು ಕೊಂಡೊಯ್ದಿರುವುದು ಹಾಗೂ ಅವರಿಬ್ಬರು ಜೀವಕ್ಕೆ ಅಪಾಯವಿಲ್ಲದೆ ಪಾರಾಗಿರುವುದು ತೃಪ್ತಿಕರ ವಿಚಾರ. ನಾನು ಅವರ ಉತ್ತಮ ಆರೋಗ್ಯಕ್ಕೆ ಪ್ರಾರ್ಥಿಸುತ್ತೇನೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News