ಎಂಟಿಬಿ ನಾಗರಾಜ್‌ ರಂತಹ ಪ್ರಾಮಾಣಿಕರು ಮತ್ತೊಬ್ಬರಿಲ್ಲ: ಸಿಎಂ ಯಡಿಯೂರಪ್ಪ

Update: 2019-11-17 12:03 GMT

ಬೆಂಗಳೂರು, ನ. 17: ಹೊಸಕೋಟೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎಂಟಿಬಿ ನಾಗರಾಜ್ ಅವರಂತಹ ಪ್ರಾಮಾಣಿಕರು ಮತ್ತೊಬ್ಬರಿಲ್ಲ. ಅವರ ವಿರುದ್ಧ ಕಾಂಗ್ರೆಸ್ ಇಲ್ಲ-ಸಲ್ಲದ ಆರೋಪ ಮಾಡುತ್ತಿದ್ದು, ಏನೇ ಆದರೂ ಅವರು ಗೆಲುವು ನಿಶ್ಚಿತ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಭವಿಷ್ಯ ನುಡಿದರು.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 17 ಮಂದಿ ಶಾಸಕರ ರಾಜೀನಾಮೆ ವಿಚಾರದಲ್ಲಿ ಎಂಟಿಬಿ ನಾಗರಾಜ್ ಪ್ರಮುಖ ಪಾತ್ರ ವಹಿಸಿದ್ದಾರೆ. ಇದೀಗ ಹೊಸಕೋಟೆ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ ಎಂದು ಹೇಳಿದರು.

ಶರತ್ ಬಚ್ಚೇಗೌಡ ಉಚ್ಛಾಟನೆ: ಹೊಸಕೋಟೆ ಕ್ಷೇತ್ರದಲ್ಲಿ ಎಂಟಿಬಿ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಶರತ್ ಬಚ್ಚೇಗೌಡ ಯಾವುದೇ ಕಾರಣಕ್ಕೂ ಗೆಲ್ಲಲು ಸಾಧ್ಯವಿಲ್ಲ. ಅವರ ಸೋಲು ನಿಶ್ಚಿತ ಎಂದ ಯಡಿಯೂರಪ್ಪ, ಶರತ್ ಬಚ್ಚೇಗೌಡ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗುವುದು ಎಂದರು

ಪಕ್ಷದ ಶಿಸ್ತು ಉಲ್ಲಂಘಿಸಿ ಸ್ಪರ್ಧೆಗೆ ಇಳಿದಿರುವ ಶರತ್ ಬಚ್ಚೇಗೌಡ ಅವರಿಗೆ ನೀಡಿರುವ ವಸತಿ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕು ಎಂದು ಸೂಚಿಸಿದ ಯಡಿಯೂರಪ್ಪ, ನಾಳೆ(ನ.18) ಹೊಸಕೋಟೆ ಕ್ಷೇತ್ರದಲ್ಲಿ ಬೃಹತ್ ಸಮಾವೇಶ ನಡೆಸಲಿದ್ದು, ನಾನೂ ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತೇನೆ ಎಂದರು.

ಹದಿನೈದು ಕ್ಷೇತ್ರಗಳಲ್ಲಿಯೂ ಅನರ್ಹ ಅಭ್ಯರ್ಥಿಗಳನ್ನು ಗೆಲ್ಲಿಸಲು ಎಲ್ಲ ಪ್ರಯತ್ನ ಮಾಡಲಾಗುವುದು. ನೂರಕ್ಕೆ ನೂರರಷ್ಟು ಎಲ್ಲರೂ ಗೆಲ್ಲುವ ವಿಶ್ವಾಸವಿದೆ. ಆದರೆ, ಕೆಲವರು ಸೋಲಿಸುವ ಮಾತನಾಡುತ್ತಿದ್ದು, ಇದರ ಬಗ್ಗೆ ನಾನು ಏನೂ ಹೇಳುವುದಿಲ್ಲ. ಮತದಾರರು ಉತ್ತರ ಅವರಿಗೆ ನೀಡಲಿದ್ದಾರೆಂದು ತಿರುಗೇಟು ನೀಡಿದರು.

ಕಾಂಗ್ರೆಸ್ ದೂರಿಗೆ ಕಿಮ್ಮತ್ತಿಲ್ಲ: ‘ನನ್ನ ವಿರುದ್ಧ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ನೀಡಿರುವ ದೂರಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ವಿಪಕ್ಷ ನಾಯಕ ಸಿದ್ದರಾಮಯ್ಯ ಆ್ಯಂಡ್ ಕಂಪೆನಿಗೆ ಇಂಥ ದೂರು ನೀಡುವುದನ್ನು ಬಿಟ್ಟರೆ ಅವರಿಗೆ ಬೇರೆ ಕೆಲಸವೇ ಇಲ್ಲ. ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿ ಮಂತ್ರಿ ಮಾಡುತ್ತೇವೆಂದು ಹೇಳುವುದರಲ್ಲಿ ತಪ್ಪೇನಿದೆ ಎಂದು ಬಿಎಸ್‌ವೈ ಪ್ರಶ್ನಿಸಿದರು.

ಉಪಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳು ಗೆದ್ದರೆ ಮಂತ್ರಿ ಮಾಡುತ್ತೇವೆ ಎಂದು ಹೇಳುವುದರಲ್ಲಿ ತಪ್ಪೇನು ಇಲ್ಲ. ಚುನಾವಣೆ ಪ್ರಚಾರದಲ್ಲಿಯೂ ಇದನ್ನೇ ಹೇಳುತ್ತೇವೆ. ಬಿಜೆಪಿ ಅಭ್ಯರ್ಥಿಗಳು ನೂರಕ್ಕೂ ನೂರು ಗೆಲ್ಲಲಿದ್ದಾರೆ. ಪ್ರಚಾರ ಮಾಡುವುದನ್ನು ಅಡ್ಡಿಪಡಿಸಲು ಆಯೋಗಕ್ಕೆ ಸಾಧ್ಯವಿಲ್ಲ ಎಂದು ಯಡಿಯೂರಪ್ಪ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News