ಅತ್ಯಾಚಾರ ಸಂತ್ರಸ್ತೆಯ ಹೇಳಿಕೆ ನಂಬಲರ್ಹವಾಗಿದ್ದರೆ ಶಿಕ್ಷೆ ನೀಡಲು ವೈದ್ಯಕೀಯ ವರದಿ ಬೇಕಿಲ್ಲ: ಹೈಕೋರ್ಟ್

Update: 2019-11-17 15:56 GMT

ಬೆಂಗಳೂರು, ನ.17: ವೈದ್ಯರು ನೀಡುವ ವರದಿಗಿಂತಲೂ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆ ಹೇಳಿಕೆ ನಂಬಲು ಅರ್ಹವಾಗಿದ್ದರೆ, ಆರೋಪಿಗೆ ಶಿಕ್ಷೆ ವಿಧಿಸಬಹುದು ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. 

ಅತ್ಯಾಚಾರ ಪ್ರಕರಣವೊಂದರಲ್ಲಿ ಆರೋಪಿಯನ್ನು ಖುಲಾಸೆಗೊಳಿಸಿದ್ದ ಚಿಕ್ಕಮಗಳೂರಿನ ಪ್ರಧಾನ ಸೆಷನ್ಸ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸರಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಇತ್ತೀಚೆಗೆ ಮಾನ್ಯ ಮಾಡಿರುವ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ಈ ಆದೇಶ ನೀಡಿದೆ. ವೈದ್ಯರು ನೀಡಿರುವ ವರದಿಯಲ್ಲಿ ಅತ್ಯಾಚಾರ ನಡೆದಿರುವುದಕ್ಕೆ ಸಾಕ್ಷವಿಲ್ಲ ಎಂಬ ಕಾರಣ ನೀಡಿ ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಎಸ್.ರಾಜು ಎಂಬಾತನನ್ನು ಖುಲಾಸೆಗೊಳಿಸಿದ್ದ ಅಧೀನ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿತು.

ಪ್ರಕರಣದಲ್ಲಿ ರಾಜು ದೋಷಿ ಎಂದು ಪರಿಗಣಿಸಿ 7 ವರ್ಷ ಕಠಿಣ ಶಿಕ್ಷೆ ಹಾಗೂ 2 ಲಕ್ಷ ರೂ.ದಂಡ ವಿಧಿಸಿದೆ. ದಂಡದ ಮೊತ್ತವನ್ನು ಪರಿಹಾರವಾಗಿ ಪಾವತಿಸಬೇಕು. ತಪ್ಪಿದಲ್ಲಿ, ಹೆಚ್ಚುವರಿ 1 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಎಂದು ತೀರ್ಪಿನಲ್ಲಿ ಹೈಕೋರ್ಟ್ ನಿರ್ದೇಶಿಸಿದೆ.

ಏನಿದು ತೀರ್ಪು: ವೈದ್ಯರು ನೀಡಿದ ವರದಿಯಲ್ಲಿ ಬಲವಂತದ ಲೈಂಗಿಕ ಕ್ರಿಯೆ ನಡೆದ ಬಗ್ಗೆ ಕುರುಹು ಸಿಕ್ಕಿಲ್ಲ ಎಂಬುದಾಗಿ ಹೇಳಿಲ್ಲ. ಬದಲಾಗಿ ಪ್ರಾದೇಶಿಕ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಆಧರಿಸಿ ವೈದ್ಯರು ವರದಿ ನೀಡಿದ್ದಾರೆ. ಜಪ್ತಿ ಮಾಡಿದ್ದ ಸಂತ್ರಸ್ತೆ ಮತ್ತು ಆರೋಪಿ ಉಡುಪುಗಳ ಬಗ್ಗೆ ವರದಿಯಲ್ಲಿ ಸೂಚಿಸಿಲ್ಲ. ಸಂತ್ರಸ್ತೆ ಮತ್ತು ಆರೋಪಿ ಕುಟುಂಬದ ಮಧ್ಯೆ ವೈರತ್ವವಿದೆ ಎಂಬುದಕ್ಕೆ ಸೂಕ್ತ ಸಾಕ್ಷಾಧಾರಗಳಿಲ್ಲ. ಕುಟುಂಬದ ಘನತೆಗೆ ಕಳಂಕ ತಂದುಕೊಳ್ಳುವ ಜತೆಗೆ ಯಾವ ಪಾಲಕರೂ ಮಗಳ ಮೇಲೆ ಅತ್ಯಾಚಾರವಾಗಿದೆ ಎಂದು ಸುಳ್ಳು ದೂರು ದಾಖಲಿಸಲು ಮುಂದಾಗುವುದಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಸದರಿ ಪ್ರಕರಣದಲ್ಲಿ ಸಂತ್ರಸ್ತೆಯ ಸಾಕ್ಷ ಅತ್ಯಂತ ಸ್ಪಷ್ಟವಾಗಿದ್ದು, ಕೋರ್ಟ್ ವಿಶ್ವಾಸವನ್ನು ಪ್ರೇರೇಪಿಸುತ್ತಿದೆ ಎಂದು ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News