ಮೊದಲೇ ಗಾಂಧಿ-ಅಂಬೇಡ್ಕರ್ ರನ್ನು ಮುಖಾಮುಖಿಯಾಗಿ ನೋಡಿದ್ದರೆ ಬಿಜೆಪಿ ಅಧಿಕಾರಕ್ಕೆ ಬರುತ್ತಿರಲಿಲ್ಲ

Update: 2019-11-18 03:47 GMT

ಮೈಸೂರು,ನ.17: ಐವತ್ತು ವರ್ಷಗಳ ಹಿಂದೆಯೇ ಅಂಬೇಡ್ಕರ್ ಮತ್ತು ಗಾಂಧಿಯನ್ನು ಮುಖಾಮುಖಿಯಾಗಿ ನೋಡಿದ್ದರೆ ಇಂದು ರಾಜ್ಯದಲ್ಲಿ ಯಡಿಯೂರಪ್ಪ ಮತ್ತು ಕೇಂದ್ರದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿರಲಿಲ್ಲ ಎಂದು ಪ್ರಗತಿಪರ ಚಿಂತಕ ಪ್ರೊ.ಎಚ್.ಗೋವಿಂದಯ್ಯ ಅಭಿಪ್ರಾಯಪಟ್ಟರು.

ನಗರದ ರಂಗಾಯಣದ ಶ್ರೀರಂಗ ವೇದಿಕೆಯಲ್ಲಿ ರವಿವಾರ ದೇಸಿರಂಗ ಸಾಂಸ್ಕೃತಿಕ ಸಂಸ್ಥೆ ಆಯೋಜಿಸಿದ್ದ “ಮಹಾತ್ಮಾ ಗಾಂಧಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಮುಖಾಮುಖಿ ಏಕೆ? ಮತ್ತು ಬೇಕೆ? ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗಾಂಧಿ ಮತ್ತು ಅಂಬೇಡ್ಕರ್ ಅವರನ್ನು ಈ ಹಿಂದೆಯೇ ಮುಖಾಮುಖಿಯಾಗಿಸಬೇಕಿತ್ತು. ಅದರೊಟ್ಟಿಗೆ ದಲಿತರು, ರೈತರು, ಪ್ರಗತಿಪರರು ಸೇರಿದಂತೆ ನಾವೆಲ್ಲರೂ ಮುಖಾಮುಖಿಯಾಗಬೇಕಿತ್ತು. ಆದರೆ ಆ ಕೆಲಸ ಅಗಲಿಲ್ಲ, ಆದ್ದರಿಂದ ಇಂದು ಇಂತಹ ಕೆಟ್ಟ ಸರ್ಕಾರವನ್ನು ನೋಡುವ ಪರಿಸ್ಥಿತಿ ಬಂದೊದಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಗಾಂಧಿ ಮತ್ತು ಅಂಬೇಡ್ಕರ್ ನಡುವೆ ಸಮನ್ವಯತೆ ಸಾಧಿಸಲು ಸಾಧ್ಯವಿಲ್ಲ. ಏಕೆಂದರೆ ಇಬ್ಬರದೂ ವಿಭಿನ್ನ ವ್ಯಕ್ತಿತ್ವ. ಒಂದು ಮನೆಯಲ್ಲಿ ಇಬ್ಬರು ಇರಲು ಸಾಧ್ಯವಿಲ್ಲ. ಬೇರೆ ಬೇರೆ ಇದ್ದು ಅನ್ಯೋನ್ಯವಾಗಿರಬಹುದಷ್ಟೆ ಎಂದು ಹೇಳಿದರು.

ಗಾಂಧಿ ಮತ್ತು ಅಂಬೇಡ್ಕರ್ ಇಬ್ಬರನ್ನು ಮುಖಾಮುಖಿಗೊಳಿಸದೆ ಮಹಾಪರಾಧ ಮಾಡಿದ್ದೇವೆ. ಗಾಂಧಿ ಮತ್ತು ಅಂಬೇಡ್ಕರ್ ಸುತ್ತ ಅನುಮಾನದ ಹುತ್ತ ಬೆಳೆದಿದೆ. ಆದರೆ ಈ ಇಬ್ಬರೂ ನಾಯಕರು ದೇಶ ಮತ್ತು ಜಗತ್ತಿನ ಮಾನವರ ದಿಕ್ಕು ದೆಸೆಯನ್ನು ಬದಲಾಯಿಸಿದವರು. ಇವರ ಮಾತುಗಳನ್ನು ಆರೋಗ್ಯಪೂರ್ಣ ಸ್ಥಿಮಿತದಿಂದ ನೋಡಬೇಕಿತ್ತು ಎಂದು ಹೇಳಿದರು.

80ರ ದಶಕದಲ್ಲೇ ಗಾಂಧಿ ಮತ್ತು ಅಂಬೇಡ್ಕರ್ ರ ಬಗ್ಗೆ ಅರೋಗ್ಯಪೂರ್ಣ ಚರ್ಚೆಯಾಗಬೇಕಿತ್ತು. ಆದರೆ ಅದು ಸಾಧ್ಯವಾಗದ ಪರಿಣಾಮ ಇಂದು ಗಾಂಧಿ ಕೊಂದವರಿಗೆ ಬಹುಮತ ಬಂದಿದೆ. ಅವರೆಲ್ಲರನ್ನು ನಾವು ಮಾನ್ಯಮಾಡಿದ್ದೇವೆ. ಇದಕ್ಕಿಂತ ದೊಡ್ಡ ಅಪರಾದ ಬೇಕೇ ಎಂದು ಪ್ರಶ್ನಿಸಿದರು.

78ರ ದಶಕದಲ್ಲಿ ಇಬ್ಬರು ಬಿಜೆಪಿ ಸಂಸದರನ್ನು ಹೊಂದಿದ್ದ ಜನಸಂಘ ಇಂದು ವಿರೋಧ ಪಕ್ಷವೆ ಇಲ್ಲದಂತಹ ವಾತಾವರಣ ಸೃಷ್ಟಿ ಮಾಡಿದೆ. ಇದಕ್ಕೆ ನಾವುಗಳೇ ಕಾರಣ, ಅಂದು ಅಂಬೇಡ್ಕರ್ ಮತ್ತು ಗಾಂಧಿಯನ್ನು ಒಟ್ಟಿಗೆ ಕೊಂಡೊಯ್ಯುವ ಕೆಲಸ ಮಾಡಬೇಕಿತ್ತು. ದಲಿತ ಚಳುವಳಿ ರೂಪುಗೊಂಡು ಹೋರಾಟದ ಮುನ್ನಲೆಗೆ ಬಂದಾಗ ಕೆಲವರು ಬಹಿರಂಗವಾಗಿ ಗಾಂಧಿಯನ್ನು ವಿರೋಧಿಸಿದರು. ಇದನ್ನು ಬಂಡವಾಳ ಮಾಡಿಕೊಂಡ ಬಿಜೆಪಿ ಹಂತ ಹಂತವಾಗಿ ಬೆಳೆಯಿತು. ಕಾಂಗ್ರೆಸ್ ಮುಕ್ತ ಭಾರತ ಮಾಡಬೇಕು ಎಂದು ಹೇಳುವುದು ಸುಳ್ಳು, ಅವರ ಉದ್ದೇಶ ಗಾಂಧಿ ಮುಕ್ತ ಭಾರತ ಮಾಡಬೇಕು ಎಂಬುದು ಎಂದು ಹೇಳಿದರು.

ಗಾಂಧಿ ದ್ವೇಷ ಮಾಡುತ್ತಲೇ ಉಚ್ರಾಯ ಕಾಲಕ್ಕೆ ಬಿಎಸ್ಪಿ ಬಂತು. ಗಾಂಧಿ ಮತ್ತು ಅಂಬೇಡ್ಕರ್ ಅವರನ್ನು ಅವರು ಸಮಾನವಾಗಿ ಕಂಡಿದ್ದರೆ ಇಂದು ನರೇಂದ್ರ ಮೊದಿ ಪ್ರಧಾನಿಯಾಗುತ್ತಿರಲಿಲ್ಲ, ಮಾಯಾವತಿ ಪ್ರಧಾನಿಯಾಗುತ್ತಿದ್ದರು ಎಂದು ಹೇಳಿದರು. 

ಹಿರಿಯ ಪತ್ರಕರ್ತ ಕೃಷ್ಣಪ್ರಸಾದ್ ಮಾತನಾಡಿ, ಮಹಾತ್ಮಾ ಗಾಂಧಿ ಮತ್ತು ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ನಮ್ಮ ಸ್ಮೃತಿಪಟದಲಿಂದ ಅಳಿಸಿ ಹಾಕುವ ಹುನ್ನಾರ ನಡೆಯುತ್ತಿದೆ. ಗಾಂಧಿ ಭಕ್ತರು ಮತ್ತು ಅಂಬೇಡ್ಕರ್ ಭಕ್ತರು ಇಬ್ಬರಲ್ಲಿ ಯಾರು ಒಳ್ಳೆಯವರು ಎಂಬುದಕ್ಕೆ ಚರ್ಚೆ ವಾಗ-ವಿವಾದದಲ್ಲಿ ತೊಡಗಿದ್ದಾರೆ. ಮೂಲಭೂತವಾಗಿಗಳು ಈ ಇಬ್ಬರನ್ನು ಇತಿಹಾಸದಿಂದ ಅಳಿಸಿ ಹಾಕಲು ಹುನ್ನಾರ ನಡೆಸುತಿದ್ದಾರೆ ಇಂತಹ ಸೂಕ್ಷ್ಮ ವಿಚಾರವನ್ನು ಅರಿತು ಇಬ್ಬರಿಗೂ ಸಮಾನ ಸ್ಥಾನ ನೀಡಿ ಉಳಿಸಲು ಚಿಂತನೆ ಮಾಡಬೇಕಿದೆ ಎಂದು ಹೇಳಿದರು.

ಚಿಂತಕ ಜಗದೀಶ್ ಕೊಪ್ಪ ಮಾತನಾಡಿ, ಅಂಬೇಡ್ಕರ್ ಮತ್ತು ಗಾಂಧೀಜಿ ಅವರನ್ನು ಜತೆಗೂಡಿಸಿಕೊಮಡು ಹೋರಾಟ ಮಾಡಿದರೆ ಮಾತ್ರ ನಮಗೆ ಭವಿಷ್ಯವಿದೆ ಎಂದು ಹೇಳಿದರು. 

ಗಾಂಧಿಯನ್ನು ಕೊಂದವರನ್ನು ಮಹಾತ್ಮ ಪಟ್ಟಕೆಕ ಏರಿಸಲಾಗುತ್ತಿದೆ. ಬ್ರಿಟಿಷರಿಗೆ 13 ಸಲ ಕ್ಷಮಾಪಣ ಪತ್ರ ಬರೆದ ಸಾವರ್ಕರ್ ಗೆ ಭಾರತ ರತ್ನ ಕೊಡಬೇಕು ಎಂಬ ಕೂಗು ಎದ್ದಿದೆ. ನಾವು ನಮ್ಮ ಚಿಂತನೆಯ ಮಾದರಿಯನ್ನು ಬದಲಿಸಬೇಕಿದೆ. ಚರಿತ್ರೆಯ ಮರುವ್ಯಾಖ್ಯಾನ ನಡೆಸುವ ಅಗತ್ಯವಿದೆ ಎಂದು ಹೇಳಿದರು.

ಗಾಂಧಿ ಮತ್ತು ಅಂಬೇಡ್ಕರ್ ಚಿಂತನೆಯ ಒಳನೋಟಗಳು ಕುರಿತು ಚಿಂತಕ ಜಗದೀಶ್ ಕೊಪ್ಪ ವಿಚಾರ ಮಂಡನೆ ಮಾಡಿದರು. ಗಾಂಧಿ ಮತ್ತು ಅಂಬೇಡ್ಕರ್ ವಿಚಾರಧಾರೆಯಲ್ಲಿರುವ ಧ್ವಂದ್ವಗಳು ಕುರಿತು ಡಾ.ನಾಗರಾಜಯ್ಯ ವಡ್ಡಗೆರೆ ಮಾತನಾಡಿದರು. ಚಿಂತಕ ಪ್ರೊ.ಮಹಾದೇವ ಶಂಕನಪುರ ಭಾರತದ ಸಾಮಾಜಿಕ ವ್ಯವಸ್ಥೆಗೆ ಪೂರಕವೇ ಕುರಿತು ವಿಚಾರ ಮಂಡಿಸಿದರು. ದೇಸಿರಂಗದ ಕೃಷ್ಣ ಜನಮನ ಉಪಸ್ಥಿತರಿದ್ದರು. ಡಾ.ದಿನಮಣಿ ನಿರೂಪಿಸಿದರು.

ಅಯೋಧ್ಯೆ ಮತ್ತು ಕಾಶ್ಮೀರ ವಿಚಾರದಲ್ಲಿ ಬಿಜೆಪಿ ಬಹಳ ವ್ಯವಸ್ಥಿತವಾಗಿ ನಡೆದುಕೊಂಡಿದೆ. ಸಂವಿಧಾನ ಬದಲಾವಣೆಗೆ ಕೈ ಹಾಕಿದೆ. ಸಂವಿಧಾನಕ್ಕೆ ಗಂಡಾಂತರ ಕಾದಿದ್ದು, ದಿನಗಳನ್ನು ಲೆಕ್ಕಹಾಕಬೇಕಿದೆ. 
-ಪ್ರೊ.ಎಚ್.ಗೋವಿಂದಯ್ಯ, ಪ್ರಗತಿಪರ ಚಿಂತಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News