ಹೊಸಕೋಟೆಯಲ್ಲಿ ಶಿಕಾರಿಪುರಕ್ಕಿಂತಲೂ ಹೆಚ್ಚು ಅಭಿವೃದ್ಧಿ ಮಾಡುತ್ತೇನೆ: ಯಡಿಯೂರಪ್ಪ

Update: 2019-11-18 11:58 GMT

ಬೆಂಗಳೂರು, ನ.18: ಪ್ರಾಮಾಣಿಕತೆ ಹಾಗೂ ಅಭಿವೃದ್ಧಿಗೆ ಮತ್ತೊಂದು ಹೆಸರು ಎಂಟಿಬಿ ನಾಗರಾಜ್. ಹೊಸಕೋಟೆ ವಿಧಾನಸಭಾ ಕ್ಷೇತ್ರ ಇಡೀ ರಾಜ್ಯಕ್ಕೆ ಮಾದರಿಯಾಗಬೇಕು. ನನ್ನ ಮತ ಕ್ಷೇತ್ರ ಶಿಕಾರಿಪುರಕ್ಕಿಂತಲೂ ಹೊಸಕೋಟೆಯನ್ನು ಹೆಚ್ಚು ಅಭಿವೃದ್ಧಿಪಡಿಸುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದಾರೆ.

ಸೋಮವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಪರವಾಗಿ ಅವರು ಮತ ಯಾಚಿಸಿ ಮಾತನಾಡಿದರು.

ಹೊಸಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಕಾವೇರಿ ನೀರು ಪೂರೈಸಬೇಕು. ಈ ಯಡಿಯೂರಪ್ಪ ಕೊಟ್ಟ ಮಾತನ್ನು ತಪ್ಪಲ್ಲ. ಎಂಟಿಬಿ ನಾಗರಾಜ್ ಗೆಲುವು, ಬಿಜೆಪಿ ಪಕ್ಷದ ಗೆಲುವು. ರಾಜ್ಯದ 224 ಕ್ಷೇತ್ರಗಳ ಪೈಕಿ ಈ ಕ್ಷೇತ್ರವನ್ನು ಹೆಚ್ಚು ಅಭಿವೃದ್ಧಿಪಡಿಸುವ ಜವಾಬ್ದಾರಿ ನನ್ನದು ಎಂದು ಯಡಿಯೂರಪ್ಪ ಹೇಳಿದರು.

ಈ ಚುನಾವಣೆಯಲ್ಲಿ ಗೆದ್ದ 24 ಗಂಟೆಯೊಳಗೆ ನಾಗರಾಜ್ ಸಚಿವರಾಗುತ್ತಾರೆ. ಎಂಟಿಬಿಯನ್ನು ಎದುರಿಸುವ ಸವಾಲನ್ನು ಹಾಕುತ್ತಿದ್ದಾರೆ. ಆದುದರಿಂದ, ಕಾರ್ಯಕರ್ತರು ಮೈ ಮರೆಯದೇ ಮನೆ ಮನೆಗೆ ತೆರಳಿ ಮತ ಯಾಚನೆ ಮಾಡಿ. ಡಿಸೆಂಬರ್ 5ರಂದು ಎಲ್ಲರೂ ಬಂದು ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್‌ಗೆ ಮತ ಹಾಕುವಂತೆ ಮಾಡುವ ಸಂಕಲ್ಪ ಇಂದು ತೆಗೆದುಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ನಮ್ಮ ಸರಕಾರ ಹಾಗೂ ನಮ್ಮ ಅಭ್ಯರ್ಥಿಗಳ ಪರವಾಗಿ ಬಾಯಿಗೆ ಬಂದಂತೆ ಮಾತನಾಡುವ ವಿರೋಧ ಪಕ್ಷದವರು, ಅಧಿಕಾರದಲ್ಲಿದ್ದಾಗ ಇಷ್ಟು ದಿನ ಯಾಕೆ ಹೊಸಕೋಟೆಗೆ ಕಾವೇರಿ ನೀರು ಕೊಡಲು ಸಾಧ್ಯವಾಗಿಲ್ಲ. ಎಂಟಿಬಿ ಈ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿ ಪಥದತ್ತ ತೆಗೆದುಕೊಂಡು ಹೋಗುತ್ತಾರೆ. ಇದೇ ವೇಳೆ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ವಿರುದ್ಧ ವಾಗ್ದಾಳಿ ನಡೆಸಿದ ಯಡಿಯೂರಪ್ಪ, ಕೆಲವರು ಇಲ್ಲಿ ರಾಜಕೀಯ ದೊಂಬರಾಟ ಮಾಡುತ್ತಿದ್ದಾರೆ. ಇದ್ದಕ್ಕಿದ್ದಂತೆ ಯಾರು ಯಾರೋ ಬೆಂಬಲ ಕೊಡುತ್ತಿದ್ದಾರೆ ಎಂದು ಪರೋಕ್ಷವಾಗಿ ಶರತ್ ಬಚ್ಚೇಗೌಡಗೆ ಬೆಂಬಲ ನೀಡಿರುವ ಜೆಡಿಎಸ್ ಕ್ರಮವನ್ನು ಟೀಕಿಸಿದರು.

ಎಂಟಿಬಿ ನಾಗರಾಜ್ ಗೆಲುವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಪಕ್ಷಕ್ಕೆ ದ್ರೋಹ ಮಾಡಿದವರನ್ನು ಈಗಾಗಲೇ ಉಚ್ಛಾಟನೆ ಮಾಡಲಾಗಿದೆ. ನಾಗರಾಜ್‌ರನ್ನು ಕನಿಷ್ಠ 25 ಸಾವಿರ ಮತಗಳ ಅಂತರದಿಂದ ಗೆಲ್ಲಿಸುವ ಮೂಲಕ ಅವರಿಗೆ ತಿರುಗೇಟು ನೀಡಬೇಕು. ಎಲ್ಲ ಕಾರ್ಯಕರ್ತರು ಈ ನಿಟ್ಟಿನಲ್ಲಿ ಶಕ್ತಿ ಮೀರಿ ಕೆಲಸ ಮಾಡಬೇಕು ಎಂದು ಅವರು ಕರೆ ನೀಡಿದರು.

ನಾನು ಸಿಎಂ ಆಗಲು ಎಂಟಿಬಿ ಕಾರಣ

ಎಂಟಿಬಿ ನಾಗರಾಜ್ ರಾಜೀನಾಮೆ ಕೊಡದೇ ಇದ್ದಿದ್ದರೆ ಇವತ್ತು ನಾನು ಇಲ್ಲಿ ಮುಖ್ಯಮಂತ್ರಿಯಾಗಿ ಬರಲು ಆಗುತ್ತಿರಲಿಲ್ಲ. ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲು ಸಾಧ್ಯವಾಗುತ್ತಿರಲಿಲ್ಲ. ಸಚಿವರಾಗಿದ್ದರೂ ಭ್ರಷ್ಟ ಸಮ್ಮಿಶ್ರ ಸರಕಾರ ಬೇಡವೆಂದು ರಾಜೀನಾಮೆ ಕೊಟ್ಟು ಹೊರಗೆ ಬಂದರು.

-ಯಡಿಯೂರಪ್ಪ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News