ತಂದೆಗಾಗಿ ಮಗಳು, ತಮ್ಮನಿಗಾಗಿ ಅಣ್ಣ, ಪತಿಗಾಗಿ ಪತ್ನಿ ನಾಮಪತ್ರ..!

Update: 2019-11-18 13:43 GMT
ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಕೆ.ಗೋಪಾಲಯ್ಯ

ಬೆಂಗಳೂರು, ನ.18: ಉಪಚುನಾವಣಾ ಅಖಾಡ ಘಟಾನುಘಟಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯಿಂದ ರಂಗೇರುತ್ತಿದ್ದರೆ, ಮತ್ತೊಂದೆಡೆ ತಂದೆಗಾಗಿ ಮಗಳು, ತಮ್ಮನಿಗಾಗಿ ಅಣ್ಣ, ಪತಿಗಾಗಿ ಪತ್ನಿ ನಾಮಪತ್ರ ಸಲ್ಲಿಕೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಹೀರೇಕೆರೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಿ.ಸಿ.ಪಾಟೀಲ್ ಹಾಗೂ ಅವರ ಪುತ್ರಿ ಸೃಷ್ಟಿ ಪಾಟೀಲ್ ಪಕ್ಷೇತರ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಕೆ ಮಾಡಿದ್ದಾರೆ. ಅತ್ತ ಗೋಕಾಕ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಲಖನ್ ಜಾರಕಿಹೊಳಿ ಹಾಗೂ ಶಾಸಕ ಸತೀಶ್ ಜಾರಕಿಹೊಳಿ ನಾಮಪತ್ರ ಸಲ್ಲಿಸಿದ್ದಾರೆ.

ಮತ್ತೊಂದೆಡೆ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಕೆ.ಗೋಪಾಲಯ್ಯ ಅವರೊಂದಿಗೆ ಅವರ ಪತ್ನಿ ಹೇಮಲತಾ ಗೋಪಾಲಯ್ಯ ಅವರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿರುವುದು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.

ಈಗಾಗಲೇ ಗೋಕಾಕ್ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿಯಿಂದ ರಮೇಶ್, ಕಾಂಗ್ರೆಸ್‌ನಿಂದ ಲಖನ್ ಹಾಗೂ ಸತೀಶ್ ಸೇರಿ ಮೂವರು ಒಂದೇ ಕ್ಷೇತ್ರದಲ್ಲಿ ಉಪಚುನಾವಣಾ ಅಖಾಡಕ್ಕಿಳಿದಿದ್ದು, ಜಾರಕಿಹೊಳಿ ಕುಟುಂಬದ ಮೂವರು ಸಹೋದರರು ನಾಮಪತ್ರ ಸಲ್ಲಿಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಒಂದು ವೇಳೆ ಅಧಿಕೃತ ಅಭ್ಯರ್ಥಿಗಳ ಅವರ ನಾಮಪತ್ರ ತಿರಸ್ಕೃತವಾದರೆ, ಮುನ್ನಚ್ಚರಿಕೆ ಕ್ರಮವಾಗಿ ಬಿ.ಸಿ.ಪಾಟೀಲ್ ಪುತ್ರಿ ಸೃಷ್ಟಿ ಪಾಟೀಲ್, ಲಖನ್ ಜಾರಕಿಹೊಳಿ ಅಣ್ಣ ಶಾಸಕ ಸತೀಶ್ ಜಾರಕಿಹೊಳಿ ಹಾಗೂ ಕೆ.ಗೋಪಾಲಯ್ಯ ಅವರ ಪತ್ನಿ ಹೇಮಲತಾ ಗೋಪಾಲಯ್ಯ ನಾಮಪತ್ರ ಸಲ್ಲಿಸಿದ್ದಾರೆಂದು ಗೊತ್ತಾಗಿದೆ.

‘ನಮ್ಮ ತಂದೆ ಬಿ.ಸಿ.ಪಾಟೀಲ್ ಅವರೇ ಬಿಜೆಪಿಯ ಅಧಿಕೃತ ಅಭ್ಯರ್ಥಿ. ಒಂದು ವೇಳೆ ತಾಂತ್ರಿಕ ಕಾರಣಗಳಿಗಾಗಿ ಅವರ ನಾಮಪತ್ರ ತಿರಸ್ಕೃತವಾದರೆ, ಎಂಬ ಮುನ್ನಚ್ಚರಿಕೆ ಹಿನ್ನೆಲೆಯಲ್ಲಿ ತಾನೂ ನಾಮಪತ್ರ ಸಲ್ಲಿಸಿದ್ದೇನೆ. ಏನೇ ಆದರೂ, ನಮ್ಮ ತಂದೆಯೇ ಅಭ್ಯರ್ಥಿ’

-ಸೃಷ್ಟಿ ಪಾಟೀಲ್, ಅನರ್ಹ ಶಾಸಕ ಬಿ.ಸಿ.ಪಾಟೀಲ್ ಪುತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News