ತನ್ವೀರ್ ಸೇಠ್ ಮೇಲಿನ ಹಲ್ಲೆಗೂ ಎಸ್‌ಡಿಪಿಐಗೂ ಸಂಬಂಧವಿಲ್ಲ: ಪಕ್ಷದ ರಾಜ್ಯಾಧ್ಯಕ್ಷ ಇಲ್ಯಾಸ್ ತುಂಬೆ

Update: 2019-11-18 13:47 GMT
ಇಲ್ಯಾಸ್ ಮುಹಮ್ಮದ್ ತುಂಬೆ

ಬೆಂಗಳೂರು, ನ. 18: ನಿನ್ನೆ ರಾತ್ರಿ ಮೈಸೂರಿನ ವಿವಾಹ ಕಾರ್ಯಕ್ರಮದಲ್ಲಿ ಶಾಸಕ, ತನ್ವೀರ್ ಸೇಠ್ ಮೇಲೆ ನಡೆದ ಹಲ್ಲೆಯು ಅತ್ಯಂತ ಖಂಡನೀಯ ಹಾಗೂ ಅಕ್ಷಮ್ಯ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ತಿಳಿಸಿದ್ದಾರೆ.

ಜನಪ್ರತಿನಿಧಿಯ ಮೇಲೆ ಸಾರ್ವಜನಿಕರ ಸಮ್ಮುಖದಲ್ಲೆ ದಾಳಿ ಮಾಡುತ್ತಿರುವುದು ಘಟನೆಯ ಭೀಕರತೆಯನ್ನು ಎತ್ತಿ ತೋರಿಸುತ್ತದೆ. ಇಂತಹ ಕೃತ್ಯಗಳು ಸಮಾಜದಲ್ಲಿ ಅಶಾಂತಿ, ಆತಂಕಗಳನ್ನು ಸೃಷ್ಟಿಸುತ್ತದೆ. ದಾಳಿಕೋರನನ್ನು ಬಂಧಿಸಿರುವ ಪೊಲೀಸರು, ಘಟನೆಯ ಬಗ್ಗೆ ಸೂಕ್ತ ತನಿಖೆ ಕೈಗೊಂಡು ಘಟನೆ ಹಿಂದಿರುವ ನೈಜ ಕಾರಣಗಳನ್ನು ಬಹಿರಂಗ ಪಡಿಸಿ, ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದ್ದಾರೆ.

ಅದೇ ರೀತಿ ಈ ಘಟನೆಯನ್ನು ಎಸ್‌ಡಿಪಿಐ ಪಕ್ಷದ ಜತೆಗೆ ತಳುಕು ಹಾಕುವ ಕೆಲ ಮಾಧ್ಯಮಗಳ ಕುತ್ಸಿತ ಪ್ರಯತ್ನ ಸರಿಯಲ್ಲ. ಈ ಘಟನೆಗೂ ಎಸ್‌ಡಿಪಿಐಗೂ ಯಾವುದೇ ರೀತಿಯ ಸಂಬಂಧವಿಲ್ಲ. ಚುನಾವಣಾ ಕಾರ್ಯಕ್ರಮ ಅಥವಾ ಪ್ರಚಾರ ಸಂದರ್ಭಗಳಲ್ಲಿ ಪ್ರತಿಯೊಂದು ಪಕ್ಷಗಳಲ್ಲೂ ಸಾರ್ವಜನಿಕರು ಭಾಗವಹಿಸುತ್ತಾರೆ. ಅಷ್ಟಕ್ಕೆ ಅವರು ಎಂದೆಂದೂ ಪಕ್ಷಗಳ ಕಾರ್ಯಕರ್ತರು ಅನ್ನಬೇಕಿಲ್ಲ. ಅವರು ಮಾಡಿದ ಪ್ರತಿಯೊಂದು ಕೃತ್ಯಗಳಿಗೆ ಪಕ್ಷಗಳು ಹೊಣೆಯಲ್ಲ. ಸಮಾಜಘಾತಕ ಕೆಲಸವನ್ನು ಯಾರು ಮಾಡಿದರೂ ಅದು ಶಿಕ್ಷಾರ್ಹ ಹಾಗೂ ಒಪ್ಪಲು ಸಾಧ್ಯವಿಲ್ಲ ಎಂದು ಇಲ್ಯಾಸ್ ತುಂಬೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News