48 ಗಂಟೆ ಏನನ್ನೂ ಹೇಳಲು ಸಾಧ್ಯವಿಲ್ಲ: ತನ್ವೀರ್ ಸೇಠ್ ಆರೋಗ್ಯ ಸ್ಥಿತಿ ಬಗ್ಗೆ ವೈದ್ಯರು ಹೇಳಿದ್ದು ಹೀಗೆ..

Update: 2019-11-18 14:37 GMT

ಮೈಸೂರು,ನ.18: ಮಾಜಿ ಸಚಿವ ಹಾಗೂ ಶಾಸಕ ತನ್ವೀರ್ ಸೇಠ್ ಅವರ ಮೇಲೆ ಸಾರ್ವಜನಿಕ ಸ್ಥಳದಲ್ಲಿಯೇ ಯುವಕನೊಬ್ಬ ಮಾರಣಾಂತಿಕ  ಹಲ್ಲೆ ನಡೆಸಿದ್ದು, ಗಂಭೀರ ಗಾಯಗೊಂಡ ಅವರನ್ನು ತಕ್ಷಣ ನಗರದ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

ಫರ್ಹಾನ್ (24) ವರ್ಷ ಹಲ್ಲೆ ನಡೆಸಿದ ಯುವಕನಾಗಿದ್ದು, ಈತ ಗೌಸಿಯಾನಗರ ನಿವಾಸಿ ಎಂದು ಹೇಳಲಾಗಿದೆ.

ನರಸಿಂಹರಾಜ ಕ್ಷೇತ್ರ ವ್ಯಾಪ್ತಿಯ ಪಂಜಿನ ಕವಾಯಿತು ಮೈದಾನದ ಹಿಂಭಾಗವಿರುವ ಬಾಲಭವನದ ಬಳಿಯ ಕಲ್ಯಾಣ ಮಂಟಪವೊಂದರಲ್ಲಿ ರವಿವಾರ ತಮ್ಮ ಸಂಬಂಧಿಕರೊಬ್ಬರ ಬೀಗರ ಔತಣದಲ್ಲಿ ಭಾಗವಹಿಸಿ ರಾತ್ರಿ 11.30 ಗಂಟೆ ಸಮಯದಲ್ಲಿ ಸಂಗೀತ ಕಾರ್ಯಕ್ರಮವನ್ನು ನೋಡುತ್ತಿದ್ದಾಗ ಪಕ್ಕದಿಂದ ಹಾದು ಬಂದ ಫರ್ಹಾನ್ ಚೂರಿಯಿಂದ ಏಕಾಏಕಿ ತನ್ವೀರ್ ಸೇಠ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ತಕ್ಷಣ ಅಲ್ಲಿದ್ದ ಸಾರ್ವಜನಿಕರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಶಾಸಕ ತನ್ವೀರ್ ಸೇಠ್ ಕುತ್ತಿಗೆಯ ಭಾಗಕ್ಕೆ ಬಲವಾಗಿ ಪೆಟ್ಟು ಬಿದ್ದು ಎರಡು ಇಂಚು ಆಳಕ್ಕೆ ಹೊಕ್ಕಿ ಕುತ್ತಿಗೆಯ ನರ ತುಂಡಾಗಿದೆ ಎಂದು ತಿಳಿದು ಬಂದಿದೆ. ಅಧಿಕ ರಕ್ತದೊತ್ತಡ ಇರುವುದರಿಂದ ತೀವ್ರವಾಗಿ ರಕ್ತಸ್ರಾವವಾಗುತ್ತಿದ್ದು, ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹಲ್ಲೆಯ ಬಳಿಕ ತನ್ವೀರ್ ಸೇಠ್, ತಮ್ಮ ಕರ್ಚೀಫ್‍ನಿಂದ ರಕ್ತವನ್ನು ಅದುಮಿ ಹಿಡಿದುಕೊಂಡು ಕಾರು ಹತ್ತಿ ಆಸ್ಪತ್ರೆಗೆ ತೆರಳುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹಲ್ಲೆ ನಡೆಸಿದ ವ್ಯಕ್ತಿಯನ್ನು ನರಸಿಂಹರಾಜ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಆಸ್ಪತ್ರೆಗೆ ದೌಡಾಯಿಸಿದ ಅಭಿಮಾನಿಗಳು: ತಮ್ಮ ನೆಚ್ಚಿನ ನಾಯಕ ಶಾಸಕ ತನ್ವೀರ್ ಸೇಠ್‍ಗೆ ಹಲ್ಲೆಯಾಗಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ರವಿವಾರ ತಡರಾತ್ರಿಯೇ ಆಸ್ಪತ್ರೆಗೆ ದೌಡಾಯಿಸಿದರು.

ಅಸ್ಪತ್ರೆ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್: ಶಾಸಕ ತನ್ವೀರ್ ಸೇಠ್ ಮೇಲೆ ಹಲ್ಲೆಯಾಗಿ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ಕರೆದುಕೊಂಡು ಬಂದ ತಕ್ಷಣ ಪೊಲೀಸರು ಆಸ್ಪತ್ರೆ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡರು. ಆವೇಶಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಯಾರನ್ನೂ ಆಸ್ಪತ್ರೆ ಒಳಬಿಡದೆ ಮುನ್ನೆಚ್ಚರಿಕೆ ವಹಿಸಿದರು.

ತಕ್ಷಣ ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರು: ಶಾಸಕ ತನ್ವೀರ್ ಸೇಠ್ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನಿಡಲಾಗುತ್ತಿದ್ದು, ಹಲ್ಲೆಯಿಂದ ಕುತ್ತಿಗೆಯ ಭಾಗದಲ್ಲಿ ತೀವ್ರ ರಕ್ತಸ್ರವಾವಾಗುತಿದ್ದನ್ನು ನಿಲ್ಲಿಸಲು ಸೋಮವಾರ ಬೆಳಗ್ಗೆ ತಜ್ಞ ವೈದ್ಯರು ಸುಮಾರು ಎರಡು ಗಂಟೆಗಳ ಶಸ್ತ್ರ ಚಿಕಿತ್ಸೆ ಮಾಡಿ ರಕ್ತಸ್ರಾವವನ್ನು ನಿಲ್ಲಿಸಿದ್ದಾರೆ ಎನ್ನಲಾಗಿದೆ.

ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ: ಮಾಧ್ಯಮದವರೊಂದಿಗೆ ಕೊಲಂಬಿಯಾ ಏಷಿಯಾ ಆಸ್ಪತ್ರೆಯ ವೈದ್ಯಕೀಯ ಮುಖ್ಯಸ್ಥ ಡಾ.ಉಪೇಂದ್ರ ಶೆಣೈ ಮಾತನಾಡಿ, ತನ್ವೀರ್ ಸೇಠ್ ಅವರಿಗೆ ಗಂಭೀರ ಗಾಯವಾಗಿದೆ. ಆದರೂ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. 48 ಗಂಟೆ ನಾವು ಏನನ್ನೂ ಹೇಳಲು ಸಾಧ್ಯವಿಲ್ಲ. ಕುತ್ತಿಗೆ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿರುವುದರಿಂದ ರಕ್ತನಾಳ, ನರಗಳು ಡ್ಯಾಮೇಜ್ ಆಗಿವೆ. ನರಗಳು ಕುತ್ತಿಗೆ ಭಾಗದ ಮೆದುಳಿಗೆ ಮತ್ತು ಹೃದಯಕ್ಕೆ ಸಂಬಂಧಿಸಿದೆ. ಆದ್ದರಿಂದ ಅವರ ಆರೋಗ್ಯ ಸ್ಥಿತಿ ಸದ್ಯ ಗಂಭೀರವಾಗಿದೆ ಎಂದು ಹೇಳಿದರು.

ಅವರ ಒಳಗಿನ ನರಗಳು, ಸ್ಪೈನಲ್‍ಗೆ ಯಾವ ರೀತಿ ಹಾನಿಯಾಗಿದೆ ಎಂಬುದು ಮುಂದಿನ ಹಂತದ ಚಿಕಿತ್ಸೆಯಲ್ಲಿ ತಿಳಿಯಲಿದೆ. ಸದ್ಯಕ್ಕೆ ರಕ್ತಸ್ರಾವವಾಗುವುದನ್ನು ತಪ್ಪಿಸಲಾಗಿದೆ ಎಂದು ಹೇಳಿದರು.

ಆರೋಪಿಯ ಸುತ್ತ ಅನುಮಾನದ ಹುತ್ತ
ಶಾಸಕ ತನ್ವೀರ್ ಸೇಠ್ ಕೊಲೆಗೆ ಯತ್ನಿಸಿದ ಯುವಕನ ಸುತ್ತ ಅನುಮಾನದ ಹುತ್ತ ಮೂಡಿದ್ದು, ವಿಚಾರಣೆಯ ನಂತರವಷ್ಟೇ ಸತ್ಯಾಸತ್ಯತೆ ಹೊರಬರಬೇಕಿದೆ.

ರವಿವಾರ ರಾತ್ರಿ ತನ್ವೀರ್ ಸೇಠ್ ಕೊಲೆಗೆ ಯತ್ನಿಸಿದ ಫರ್ಹಾನ್ (24) ಎಸ್.ಡಿ.ಪಿ.ಐ ಕಾರ್ಯಕರ್ತ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸುತ್ತಿದ್ದಾರೆ. ಈತ ಎಸ್.ಡಿ.ಪಿ.ಐ ಸಂಘಟನೆಯಲ್ಲಿ ತೊಡಗಿದ್ದು, ಅವರ ಕೈವಾಡದಿಂದಲೇ ಈ ಘಟನೆ ಸಂಭವಿಸಿದೆ ಎಂದು ಆರೋಪಿಸಲಾಗುತ್ತಿದೆ. ಜೊತೆಗೆ ಎಸ್.ಡಿ.ಪಿ.ಐ ಮುಖಂಡರ ಜೊತೆಯಲ್ಲಿ ಅವರ ಪಕ್ಷದ ಶಾಲು ಧರಿಸಿ ನಿಂತಿರುವ ಫೋಟೋ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಮತ್ತೊಂದೆಡೆ, ಆರೋಪಿ ಫರ್ಹಾನ್ ಮರಗೆಲಸ ಮಾಡುತ್ತಿದ್ದು, ಒಮ್ಮೆ ಶಾಸಕ ತನ್ವೀರ್ ಸೇಠ್ ಬಳಿ ಉದ್ಯೋಗ ಕೊಡಿಸುವಂತೆ ಕೇಳಿದ್ದ ಎನ್ನಲಾಗಿದೆ. ಇದಕ್ಕೆ ಸ್ಪಂದಿಸದ ತನ್ವೀರ್ ಸೇಠ್ ಅವರ ಕೊಲೆಗೆ ಯತ್ನಿಸಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. 

ತನ್ವೀರ್ ಸೇಠ್ ಆರೋಗ್ಯ ವಿಚಾರಿಸಿದ ಗಣ್ಯರು: ಶಾಸಕ ತನ್ವೀರ್ ಸೇಠ್ ಅವರ ಕೊಲೆ ಯತ್ನ ನಡೆದಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಗಣ್ಯರ ದಂಡು ಆಗಮಿಸಿದ್ದು, ಆರೋಗ್ಯ ವಿಚಾರಿಸುತ್ತಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ರಾತ್ರಿಯೇ ಮಾಜಿ ಸಚಿವ ಯು.ಟಿ.ಖಾದರ್ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬದವರಿಗೆ ಧೈರ್ಯ ತುಂಬಿದರು. ನಂತರ ವೈದ್ಯರಿಂದ ತನ್ವೀರ್ ಸೇಠ್ ಆರೋಗ್ಯ ವಿಚಾರಿಸಿದರು.

ಸೋಮವಾರ ಬೆಳಗ್ಗೆ, ವಿಧಾನಪರಿಷತ್ ಸದಸ್ಯ ಸಂದೇಶ್ ನಾಗರಾಜ್, ಸಂಸದ ಪ್ರತಾಪ್ ಸಿಂಹ, ಮಾಜಿ ಸಂಸದ ಆರ್.ಧ್ರುವನಾರಾಯಣ್, ಮೈಸೂರು ಮೇಯರ್ ಪುಷ್ಪಲತಾ ಜಗನ್ನಾಥ್, ಮಾಜಿ ರಾಜ್ಯಸಭಾ ಉಪಸಭಾಪತಿ ರೆಹಮಾನ್ ಖಾನ್. ವಿಧಾನಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ, ಮಾಜಿ ಸಚಿವರಾದ ಚಲುವರಾಯಸ್ವಾಮಿ, ನರೇಂದ್ರಸ್ವಾಮಿ ಸೇರಿದಂತೆ ಹಲವರು ಆಗಮಿಸಿ ಆರೋಗ್ಯ ವಿಚಾರಿಸಿದರು.

ಉಸ್ತುವಾರಿ ಸಚಿವ ವಿ.ಸೋಮಣ್ಣ ಭೇಟಿ: ವಿಷಯ ತಿಳಿಯುತ್ತಿದ್ದಂತೆ ಇಂದು ಸಂಜೆ ವಸತಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಆಸ್ಪತ್ರೆಗೆ ಭೇಟಿ ನೀಡಿ ತೀವ್ರ ನಿಗಾ ಘಟಕದಲ್ಲಿರುವ ಶಾಸಕ ತನ್ವೀರ್ ಸೇಠ್ ಅವರ ಆರೋಗ್ಯ ವಿಚಾರಿಸಿದರು.

ತನ್ವೀರ್ ಸೇಠ್ ಅವರ ಪತ್ನಿಯೊಂದಿಗೆ ಮಾತನಾಡಿದ ಅವರು ಧೈರ್ಯದಿಂದ ಇರುವಂತೆ ಹೇಳಿದರು. ನಂತರ ವೈದ್ಯರಿಂದ ತನ್ವೀರ್ ಸೇಠ್ ಆರೋಗ್ಯದ ಬಗ್ಗೆ ಮಾಹಿತಿ ಪಡೆದರು.

ಆಸ್ಪತ್ರೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಅಭಿಮಾನಿಗಳು: ಶಾಸಕ ತನ್ವೀರ್ ಸೇಠ್ ಬೇಗ ಗುಣಮುಖರಾಗಲಿ ಎಂದು ಅವರ ಅಭಿಮಾನಿಗಳು ಮತ್ತು ಹಿತೈಷಿಗಳು ಆಸ್ಪತ್ರೆ ಆವರಣದಲ್ಲೇ ಪ್ರಾರ್ಥನೆ ಸಲ್ಲಿಸಿದರು.

ಹಲವರು ವಶಕ್ಕೆ: ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ
ಶಾಸಕ ತನ್ವೀರ್ ಸೇಠ್ ಮೇಲೆ ಹಲ್ಲೆ ನಡೆಸಿರುವ ವ್ಯಕ್ತಿ ಫರ್ಹಾನ್ ನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಘಟನೆ ಸಂಬಂಧ ಹಲವರ ಮೇಲೆ ಅನುಮಾನವಿದ್ದು ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ತಿಳಿಸಿದರು.

ಆಸ್ಪತ್ರೆ ಆವರಣದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತನ್ವೀರ್ ಸೇಠ್ ಕೊಲೆಗೆ ಯತ್ನಿಸಿರುವ ಆರೋಪಿ ಫರ್ಹಾನ್ ಗೌಸಿಯಾಗರದ ನಿವಾಸಿ. ಈತ ಯಾಕಾಗಿ ಈ ಕೆಲಸ ಮಾಡಿದ ಎಂಬ ಮಾಹಿತಿ ಕಲೆ ಹಾಕಲಾಗುತ್ತಿದೆ. ಘಟನೆಗೆ ಸಂಬಂಧ ಪಟ್ಟಂತೆ ಹಲವು ಸಂಘಟನೆಗಳ ಮೇಲೆ ಅನುಮಾನವಿದೆ. ಎಲ್ಲಾ ಆಯಾಮಗಳಲ್ಲು ತನಿಖೆ ಚುರುಕುಗೊಳಿಸಲಾಗಿದೆ. ಯಾವುದೇ ಅನುಮಾನಗಳನ್ನು ತಳ್ಳಿಹಾಕುವಂತಿಲ್ಲ, ತನಿಖೆ ಸೋರಿಕೆ ಹಿನ್ನೆಲೆಯಲ್ಲ ಹೆಚ್ಚಿನ ಮಾಹಿತಿಯನ್ನು ನೀಡಲು ಸಾಧ್ಯವಿಲ್ಲ. ಈಗಾಗಲೇ ಹಲವರನ್ನು ವಶಕ್ಕೆ ಪಡೆದು ಈ ಘಟನೆ ಹಿಂದೆ ಯಾರಿದ್ದಾರೆ ಎಂದು ತನಿಖೆ ನಡೆಸಲಾಗುತ್ತಿದೆ. ವಿಚಾರಣೆ ನಂತರ ಸಂಪೂರ್ಣ ಮಾಹಿತಿ ನೀಡಲಾಗುವುದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News