ಕುರುಬ ಸಮುದಾಯಕ್ಕೆ ಸಿದ್ದರಾಮಯ್ಯ ಕೊಡುಗೆ ಏನು ?: ಬಹಿರಂಗ ಚರ್ಚೆಗೆ ಎಂಟಿಬಿ ನಾಗರಾಜ್ ಪಂಥಾಹ್ವಾನ

Update: 2019-11-18 14:35 GMT

ಬೆಂಗಳೂರು, ನ.18: ಕುರುಬ ಸಮುದಾಯಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಡುಗೆ ಏನು? ಎಂದು ಹೇಳಲಿ. ಈ ಬಗ್ಗೆ ಮಾಧ್ಯಮಗಳ ಎದುರೇ ನಾನು ಅವರೊಂದಿಗೆ ಬಹಿರಂಗ ಚರ್ಚೆ ನಡೆಸಲು ಸಿದ್ಧವಾಗಿದ್ದೇನೆ ಎಂದು ಹೊಸಕೋಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಪಂಥಾಹ್ವಾನ ನೀಡಿದ್ದಾರೆ.

ಸೋಮವಾರ ಹೊಸಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್.ಡಿ.ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಆರು ಮಂದಿ ಗೌಡರನ್ನು, ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಎಂಟು ಮಂದಿ ಗೌಡರನ್ನು, ವೀರೇಂದ್ರ ಪಾಟೀಲ್ ಮುಖ್ಯಮಂತ್ರಿಯಾಗಿದ್ದಾಗ ಐದು ಜನ ಲಿಂಗಾಯತರನ್ನು ಸಚಿವರನ್ನಾಗಿ ಮಾಡಿದ್ದರು ಎಂದರು.

ಆದರೆ, 2013ರಲ್ಲಿ ಕುರುಬ ಸಮುದಾಯದಿಂದ ನಾವು 13 ಮಂದಿ ಶಾಸಕರು ಆಯ್ಕೆಯಾಗಿದ್ದರೂ ಸಿದ್ದರಾಮಯ್ಯ ತಮ್ಮ ಐದು ವರ್ಷದ ಆಡಳಿತಾವಧಿಯಲ್ಲಿ ಒಬ್ಬರನ್ನೂ ಸಚಿವರನ್ನಾಗಿ ಮಾಡಿಲ್ಲ. ಇಡೀ ಸಮಾಜಕ್ಕೆ ಇದರ ನೋವಿದೆ. ನಮ್ಮ ಸಮಾಜಕ್ಕೆ ಒಂದು ವೈದ್ಯಕೀಯ ಕಾಲೇಜಾಗಲಿ, ಒಂದು ಇಂಜಿನಿಯರಿಂಗ್ ಕಾಲೇಜ್ ಆಗಲಿ ಮಾಡಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕುರುಬ ಸಮುದಾಯವನ್ನು ಪ್ರವರ್ಗ-1ಕ್ಕೆ ಸೇರಿಸಿದರೆ ಶೈಕ್ಷಣಿಕವಾಗಿ ಅನುಕೂಲವಾಗುತ್ತದೆ ಎಂದರೆ ಸೇರಿಸಿಲ್ಲ. ಉತ್ತರ ಕರ್ನಾಟಕ ಭಾಗದವರು ಕುರುಬರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಎಂದು ಹೋರಾಟಗಳನ್ನು ಮಾಡಿದರು. ಅದನ್ನು ಶಿಫಾರಸ್ಸು ಮಾಡಿಲ್ಲ. ಕುರುಬ ಸಮುದಾಯಕ್ಕೆ ಸಿದ್ದರಾಮಯ್ಯ ಕೊಟ್ಟಿರುವ ಕೊಡುಗೆ ಏನು ಎಂಬುದನ್ನು ಹೇಳಲಿ ಎಂದು ಎಂಟಿಬಿ ನಾಗರಾಜ್ ಸವಾಲು ಹಾಕಿದರು.

ಕುರುಬ ಸಮುದಾಯವನ್ನು ಸಿದ್ದರಾಮಯ್ಯ ನಿರ್ಲಕ್ಷ್ಯ ಮಾಡಿದ್ದಾರೆ. ಸಮಾಜದ ಮುಖವಾಡ ಹಾಕಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. ದ್ವಿತೀಯ ಸಾಲಿನ ನಾಯಕತ್ವವನ್ನು ಬೆಳೆಸಲಿಲ್ಲ. ಆತನೇ ಬೆಳೆಯಬೇಕು. ನಾವು ಯಾವಾಗಲೂ ಹೋಗಿ ಅವರ ಮನೆ ಬಾಗಿಲು ಕಾಯಬೇಕು ಎಂಬುದು ಆತನ ಮನಸ್ಥಿತಿ ಎಂದು ಅವರು ಕಿಡಿಗಾರಿದರು. ಸಿದ್ದರಾಮಯ್ಯ ನನ್ನ ವಿರುದ್ಧ ಪ್ರಚಾರ ಮಾಡಿದರೆ ನನಗೇನು ಭಯವಿಲ್ಲ. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ 36 ಸಾವಿರ ಮತಗಳ ಅಂತರದಿಂದ ಸಿದ್ದರಾಮಯ್ಯ ಸೋಲು ಅನುಭವಿಸಿದ್ದಾರೆ. ಬಾದಾಮಿ ಕ್ಷೇತ್ರದಲ್ಲಿ ಇನ್ನು 600-800 ಮತಗಳ ಕೊರತೆಯಾಗಿದ್ದರೆ, ಅಲ್ಲಿಯೂ ಪರಾಭವಗೊಳ್ಳುತ್ತಿದ್ದರು ಎಂದು ಎಂಟಿಬಿ ನಾಗರಾಜ್ ಹೇಳಿದರು.

ಕಾಂಗ್ರೆಸ್ ಪಕ್ಷದಲ್ಲಿದ್ದಾಗ ನಾವು ಪಕ್ಷಕ್ಕೆ ನಿಷ್ಠರಾಗಿದ್ದೆವು. ಆಗ ಸಿದ್ದರಾಮಯ್ಯ ನಮ್ಮ ಸಮಾಜದ ಒಬ್ಬ ನಾಯಕ, ನಮಗೂ ನಾಯಕ ಆಗಿದ್ದರು. ನಾನು ಅವರನ್ನು ಬೆಂಬಲಿಸುತ್ತಿದ್ದೆ. ಅವರ ಮೇಲೆ ಅಪಾರವಾದ ಪ್ರೀತಿ ಇತ್ತು. ಆದರೆ, ಆತ ನಮ್ಮ ಸಮುದಾಯಕ್ಕೆ ಏನನ್ನೂ ಮಾಡಿಲ್ಲ ಎಂಬ ಬೇಸರವಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಮೈತ್ರಿ ಸರಕಾರದ ಆಡಳಿತದಲ್ಲಿ ಪಾರದರ್ಶಕತೆ, ಪ್ರಾಮಾಣಿಕತೆ ಇರಲಿಲ್ಲ. ಅದರಿಂದ ಬೇಸತ್ತು ನಾನು ರಾಜೀನಾಮೆ ಕೊಟ್ಟಿದ್ದೇನೆ. ಚುನಾವಣೆಯ ಫಲಿತಾಂಶ ಬಂದ ಬಳಿಕ ನನ್ನ ವಿರೋಧಿಗಳಿಗೆ ಉತ್ತರ ಸಿಗುತ್ತದೆ. ಕ್ಷೇತ್ರದ ಮತದಾರರು ನನ್ನ ಬಗ್ಗೆ ತೀರ್ಮಾನ ಮಾಡುತ್ತಾರೆ ಎಂದು ನಾಗರಾಜ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News