ಅನರ್ಹ ಶಾಸಕ ನಾಮಪತ್ರ ಸಲ್ಲಿಸಲು ತೆರಳುತ್ತಿದ್ದಾಗ ಚಪ್ಪಲಿ ತೂರಾಟ

Update: 2019-11-18 15:04 GMT

ಮಂಡ್ಯ, ನ.18: ಜಿಲ್ಲೆಯ ಕೆ.ಆರ್.ಪೇಟೆ ವಿಧಾನಸಭೆ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಅನರ್ಹ ಶಾಸಕ ಕೆ.ಸಿ.ನಾರಾಯಣಗೌಡ ಸೋಮವಾರ ನಾಮಪತ್ರ ಸಲ್ಲಿಸಲು ತೆರಳುತ್ತಿದ್ದ ವೇಳೆ ಜೆಡಿಎಸ್ ಕಾರ್ಯಕರ್ತರೆನ್ನಲಾದ ಕೆಲವರು ಚಪ್ಪಲಿ ಎಸೆದ ಘಟನೆ ನಡೆಯಿತು.

ಸಚಿವ ಮಾಧುಸ್ವಾಮಿ, ಪತ್ನಿ ದೇವಕಿ ಮತ್ತು ಬಿಜೆಪಿ ಮುಖಂಡರ ಜತೆ ಮೆರವಣಿಗೆಯಲ್ಲಿ ನಾಮಪತ್ರ ಸಲ್ಲಿಸಲು ನಾರಾಯಣಗೌಡ ತಾಲೂಕು ಕಚೇರಿಗೆ ಮೆರವಣಿಗೆಯಲ್ಲಿ ತೆರಳುತ್ತಿದ್ದಾಗ ಜೆಡಿಎಸ್‍ನ ಕೆಲವರು ಚಪ್ಪಲಿ ತೂರಿ ಆಕ್ರೋಶ ವ್ಯಕ್ತಪಡಿಸಿದರು ಎನ್ನಲಾಗಿದೆ. ಆಕ್ರೋಶಗೊಂಡ ನಾರಾಯಣಗೌಡ ಜೆಡಿಎಸ್ ಕಾರ್ಯಕರ್ತರ ಬಳಿಗೆ ತೆರಳಲು ಯತ್ನಿಸಿದರು. ಆದರೆ, ಪೊಲೀಸರು ಅವರನ್ನು ತಡೆದು ತಾಲೂಕು ಕಚೇರಿ ಒಳಗೆ ಕರೆದೊಯ್ದರು.

ನಾಮಪತ್ರ ಸಲ್ಲಿಸಿ ಹೊರಬಂದ ನಾರಾಯಣಗೌಡರನ್ನು ಪೊಲೀಸರು ಕಾರಿನಲ್ಲಿ ಕರೆದೊಯ್ದರು. ಈ ವೇಳೆಯೂ ಜೆಡಿಎಸ್ ಕಾರ್ಯಕರ್ತರು ಚಪ್ಪಲಿ ಮತ್ತು ಜೆಡಿಎಸ್ ಬಾವುಟಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದರು ಎಂದು ತಿಳಿದುಬಂದಿದೆ.

ಪರಿಣಾಮ ಎದುರಿಸಬೇಕಾಗುತ್ತದೆ: ನಾರಾಯಣಗೌಡ
ನನಗೆ ಜೆಡಿಎಸ್ ಕಾರ್ಯಕರ್ತರು ಚಪ್ಪಲಿಯಲ್ಲಿ ಹೊಡೆದಿದ್ದಾರೆ. ಸಚಿವ ಮಾಧುಸ್ವಾಮಿ ಅವರ ಮೇಲೂ ಹಲ್ಲೆ ನಡೆಸಿದ್ದಾರೆ. ಇದರ ಪರಿಣಾಮವನ್ನು ಜೆಡಿಎಸ್ ಅಭ್ಯರ್ಥಿ ದೇವರಾಜು ಅನುಭವಿಸಬೇಕಾಗುತ್ತದೆ ಎಂದು ನಾರಾಯಣಗೌಡ ಕಿಡಿಕಾರಿದರು.

ಚಪ್ಪಲಿಯಲ್ಲಿ ಹೊಡೆಯಲು, ಹಲ್ಲೆ ನಡೆಸಲು ನೀವು ಯಾರು ? ರಾಜಕಾರಣವನ್ನು ರಾಜಕಾರಣದ ರೀತಿ ಮಾಡಿ. ನಾನೇನು ರಾಜಕೀಯ ಮಾಡಲು ಬಂದಿಲ್ಲ. ತಾಲೂಕು ಅಭಿವೃದ್ದಿ ಮಾಡಲು ಬಂದಿದ್ದೀನಿ. ರಾಜಕೀಯ ಮಾಡಿ ನಾನು ಆಸ್ತಿ ಮಾಡಲು ಬಂದಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಜೆಡಿಎಸ್‍ಗೆ ಆ ಸಂಸ್ಕೃತಿ ಇಲ್ಲ: ರೇವಣ್ಣ
ಜೆಡಿಎಸ್‍ಗೆ ಆ ಸಂಸ್ಕೃತಿ ಇಲ್ಲ. ಜನಸ್ತೋಮ ನೋಡಿ ನಾರಾಯಣಗೌಡ ಡ್ರಾಮಾ ಮಾಡುತ್ತಿದ್ದಾರೆ. ಅವರು ಪಕ್ಷ ಬಿಟ್ಟಾಗಲೂ ನಮ್ಮ ಕಾರ್ಯಕರ್ತರು ಆ ರೀತಿ ನಡೆದುಕೊಂಡಿಲ್ಲ. ಜನರ ಅನುಕಂಪ ಗಿಟ್ಟಿಸಲು ನಾಟಕ ಆಡುತ್ತಿದ್ದಾರೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಟೀಕಿಸಿದರು.

ಕುಮಾರಸ್ವಾಮಿ ಸರಕಾರದ 26 ಸಾವಿರ ಕೋಟಿ ಸಾಲ ಮನ್ನಾವೇ ಉಪಚುನಾವಣೆಯಲ್ಲಿ ಜೆಡಿಎಸ್‍ಗೆ ಶ್ರೀರಕ್ಷೆ. ಚುನಾವಣೆಯಲ್ಲಿ ಬುದ್ದಿ ಕಲಿಸಬೇಕೆಂದು ನಮ್ಮ ಕಾರ್ಯಕರ್ತರು ಸೈಲೆಂಟಾಗಿದ್ದಾರೆ. ನಾರಾಯಣಗೌಡ ರಾಜಕೀಯ ನಿವೃತ್ತಿ ಪಡೆದು ಬಾಂಬೆಗೆ ಹೋದರೆ ಒಳ್ಳೆಯದು ಎಂದು ಅವರು ವ್ಯಂಗ್ಯವಾಡಿದರು.

“ಕಳೆದ ನಾಲ್ಕು ತಿಂಗಳಿನಿಂದ ಆತನ ಮೇಲೆ ಯಾರೂ ಹಲ್ಲೆ ಮಾಡಿಲ್ಲ. ಇನ್ನು ನಮ್ಮ ಕಾರ್ಯಕರ್ತರು ಈಗ ಮಾಡುತ್ತಾರಾ ? ಆತನ ಮೇಲೆ ಹಲ್ಲೆ ನಡೆಸಲು ನಾಲ್ಕು ತಿಂಗಳು ಬೇಕಾ? ಇದು ಪೊಲಿಟಿಕಲ್ ಗಿಮಿಕ್ ಅಷ್ಟೆ.”
-ಬಿ.ಎಲ್.ದೇವರಾಜು, ಜೆಡಿಎಸ್ ಅಭ್ಯರ್ಥಿ

ಜೆಡಿಎಸ್ ಬಾವುಟವನ್ನು ಎಸೆದಿದ್ದು ಬಿಟ್ಟರೆ, ಯಾರೂ ನನ್ನ ಮೇಲೆ ಹಲ್ಲೆ ಮಾಡಲಿಲ್ಲ. 15-20 ಸಾವಿರ ಜನ ಸೇರಿದಾಗ ಘರ್ಷಣೆ ಆಗುತ್ತೆ, ಮೂರೂ ಪಕ್ಷಗಳು ಒಟ್ಟಿಗೆ ನಾಮಪತ್ರ ಸಲ್ಲಿಸುವಾಗ ಇದು ಸ್ವಾಭಾವಿಕ.
-ಮಾಧುಸ್ವಾಮಿ, ಕಾನೂನು ಸಚಿವ

ರಾಜ್ಯದಲ್ಲಿ ಉಪಚುನಾವಣೆ ನಡೆಯುತ್ತಿರುವ ಎಲ್ಲಾ ಕಡೆ ಪ್ರಚಾರಕ್ಕೆ ಹೋಗುತ್ತೇನೆ. ಜೆಡಿಎಸ್ ಅಭ್ಯರ್ಥಿ ದೇವರಾಜು ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಅಂತಹ ಸಾಮಾನ್ಯ ಕಾರ್ಯಕರ್ತನನ್ನು ಪಕ್ಷ ಗುರುತಿಸಿದೆ.”
-ನಿಖಿಲ್‍ ಕುಮಾರಸ್ವಾಮಿ, ಜೆಡಿಎಸ್ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News