ಜೆಡಿಎಸ್ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

Update: 2019-11-18 17:19 GMT

ಬೆಂಗಳೂರು, ನ.18: ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯ ಬೆಂಬಲಿಗರು, ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರಿಗೆ ಬಿಜೆಪಿ ನಿಯೋಗ ದೂರು ನೀಡಿದೆ.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಿ.ಎಲ್.ದೇವರಾಜ ಬೆಂಬಲಿಗರು, ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ನಾಮಪತ್ರ ಸಲ್ಲಿಸಲು ತಹಶೀಲ್ದಾರ್ ಕಚೇರಿಗೆ ಬಂದಾಗ ಚಪ್ಪಲಿಯಲ್ಲಿ ಹೊಡೆದು ದೈಹಿಕ ಹಿಂಸೆ ಮಾಡಿದ್ದಾರೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ನೇತೃತ್ವದ ನಿಯೋಗವು ದೂರು ಸಲ್ಲಿಸಿತು.

ಬಿಜೆಪಿ ಅಭ್ಯರ್ಥಿ ಜೊತೆಗೆ ಆಗಮಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಮೇಲೂ ಹಲ್ಲೆಗೆ ಪ್ರಯತ್ನ ಮಾಡಲಾಗಿದ್ದು, ಇವು ಅತ್ಯಂತ ಖಂಡನೀಯ ಸಂಗತಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಚುನಾವಣೆಗೆ ಸ್ಪರ್ಧಿಸುವ ಅಧಿಕಾರವಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ವಸ್ತು ಸ್ಥಿತಿ ಹೀಗಿರುವಾಗ ಚುನಾವಣಾ ಪ್ರಚಾರದ ಸಮಯದಲ್ಲಿ, ಮತದಾರರನ್ನು ಸಂಪರ್ಕಿಸುವಾಗ ಹಾಗೂ ಬಹಿರಂಗ ಸಭೆಗಳಲ್ಲಿ ಗೂಂಡಾಗಳಿಂದ ದಾಂಧಲೆ ಮಾಡಿಸುವ ಎಲ್ಲ ಸಾಧ್ಯತೆ ಇದ್ದು, ಇದಕ್ಕೆ ಸೂಕ್ತ ಬಂದೋಬಸ್ತ್ ಹಾಗೂ ರಕ್ಷಣೆಯನ್ನು ಕೊಡಬೇಕೆಂದು ಬಿಜೆಪಿ ಅಭ್ಯರ್ಥಿ ಹೇಳಿದ್ದಾರೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಈ ಕೃತ್ಯದಲ್ಲಿ ಪಾಲ್ಗೊಂಡ ಎಲ್ಲರಿಗೂ ಸೂಕ್ತ ಶಿಕ್ಷೆಗೆ ನಿರ್ದೇಶನ ನೀಡಬೇಕು ಎಂದು ಬಿಜೆಪಿ ನಿಯೋಗ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News