ದೇವಸ್ಥಾನದ ಅಕ್ರಮ ಕಟ್ಟಡ ತೆರವುಗೊಳಿಸಿ: ಹೈಕೋರ್ಟ್

Update: 2019-11-18 17:26 GMT

ಬೆಂಗಳೂರು, ನ.18: ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದ ಟೀಚರ್ಸ್ ಕಾಲನಿಯ ಸಾರ್ವಜನಿಕ ಪಾರ್ಕ್ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿರುವ ದೇವಸ್ಥಾನದ ಕಟ್ಟಡವನ್ನು 2 ವಾರದಲ್ಲಿ ತೆರವುಗೊಳಿಸಲು ಹೈಕೋರ್ಟ್ ಆದೇಶಿಸಿದೆ. ಈ ಕುರಿತು ಸ್ಥಳೀಯ ನಿವಾಸಿಯೊಬ್ಬರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಹಾಗೂ ನ್ಯಾ. ಪ್ರದೀಪ್ ಸಿಂಗ್ ಯೆರೂರು ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಜಮಖಂಡಿ ನಗರಸಭೆ ಆಯುಕ್ತರಿಗೆ ಈ ಆದೇಶ ನೀಡಿದೆ.

ಜಮಖಂಡಿ ನಗರಸಭೆಯ ಅಧಿಕಾರಿಗಳು ಸಲ್ಲಿಸಿದ ಅಫಿಡವಿಟ್‌ನಲ್ಲಿ ಪಾರ್ಕ್‌ನಲ್ಲಿ ಹನುಮನ ದೇವಾಲಯ ಇದೆ ಎಂದು ಹೇಳಲಾಗಿದೆ. ಇದರಿಂದ, ಸಾರ್ವಜನಿಕ ಪಾರ್ಕ್‌ನಲ್ಲಿ ಅಕ್ರಮವಾಗಿ ದೇವಸ್ಥಾನ ಕಟ್ಟಡ ನಿರ್ಮಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಕಾನೂನು ರೀತಿ ಅದನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿತು.

ಅರ್ಜಿದಾರರ ಪರ ವಾದಿಸಿದ ವಕೀಲ ಜೆ.ಡಿ.ಕಾಶಿನಾಥ ಅವರು, ನ.12ರಂದು ದೇವಸ್ಥಾನದ ಕಟ್ಟಡ ತೆರವುಗೊಳಿಸಲಾಗಿತ್ತು. ಆದರೆ, ಪುನಹ ಕಟ್ಟಡವನ್ನು ನಿರ್ಮಿಸಲಾಗಿದೆ. ಈ ವಿಚಾರವಾಗಿ ಕೆಲವರು ನಗರಸಭೆ ಆಯುಕ್ತರೊಂದಿಗೆ ಗಲಾಟೆ ನಡೆಸಿದ್ದಾರೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಆಗ, ಪೊಲೀಸ್ ರಕ್ಷಣೆಯಲ್ಲಿ ತೆರವು ಕಾರ್ಯಾಚರಣೆ ನಡೆಸುವಂತೆ ಹಾಗೂ ಕಟ್ಟಡ ಪುನಃ ನಿರ್ಮಾಣವಾಗದಂತೆ ನಗರಸಭೆ ಆಯುಕ್ತರು ನೋಡಿಕೊಳ್ಳಬೇಕು. ಕೋರ್ಟ್ ಆದೇಶದ ಅನುಪಾಲನಾ ವರದಿಯನ್ನು ಡಿ.6ಕ್ಕೆ ಸಲ್ಲಿಸಿವಂತೆ ನಿರ್ದೇಶನ ನೀಡಿದ ನ್ಯಾಯಪೀಠ, ಅರ್ಜಿಯ ವಿಚಾರಣೆಯನ್ನು ಡಿ.9ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News