ಎರಡನೆ ಅವಧಿಯ ಪ್ರವಾಹದಿಂದ ರಾಜ್ಯದಲ್ಲಿ ಎಷ್ಟು ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿದೆ ಗೊತ್ತೇ ?

Update: 2019-11-18 17:32 GMT

ಬೆಂಗಳೂರು, ನ.18: ರಾಜ್ಯದಲ್ಲಿ ಎರಡನೆ ಅವಧಿಯಲ್ಲಾದ ಭಾರೀ ಮಳೆಯ ಅನಾಹುತದಿಂದ ಸುಮಾರು 2.35 ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿದೆ ಎಂದು ರಾಜ್ಯ ಕೃಷಿ ಇಲಾಖೆ ತಯಾರಿಸಿರುವ ಅಂದಾಜು ವರದಿಯಲ್ಲಿ ಉಲ್ಲೇಖಿಸಿದೆ.

ಕಳೆದ ಆಗಸ್ಟ್‌ನಲ್ಲಿ ರಾಜ್ಯದ ಉತ್ತರ ಕರ್ನಾಟಕ ಭಾಗದಲ್ಲಿ ಭೀಕರ ಪ್ರವಾಹದಿಂದಾಗಿ ಜನಜೀವನ ತತ್ತರಿಸಿ, ಅಪಾರ ಆಸ್ತಿಪಾಸ್ತಿ ನಷ್ಟವಾಗಿತ್ತು. ಅಲ್ಲದೆ, 22 ಜಿಲ್ಲೆಗಳಲ್ಲಿ ಸುಮಾರು ಏಳೂವರೆ ಲಕ್ಷ ಹೆಕ್ಟೇರ್ ಬೆಳೆನಾಶವಾಗಿತ್ತು ಎಂದು ಅಂದಾಜಿಸಲಾಗಿತ್ತು. ಅನಂತರ ಅ.21 ರಿಂದ ನ.8 ರವರೆಗೂ ಧಾರಾಕಾರ ಮಳೆ ಸುರಿದ ಹಿನ್ನೆಲೆಯಲ್ಲಿ 17 ಜಿಲ್ಲೆಗಳು ಪ್ರವಾಹ ಪರಿಸ್ಥಿತಿ ಎದುರಿಸಿದ್ದವು.

ಮೊದಲನೇ ಪ್ರವಾಹದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಅದರಿಂದ ಚೇತರಿಸಿಕೊಳ್ಳಲು ಪಡಿಪಾಟಲು ಪಡುತ್ತಿರುವ ಸಂದರ್ಭದಲ್ಲಿಯೇ ಎರಡನೆ ಬಾರಿ ಉಂಟಾದ ನೆರೆಯಿಂದ ಮತ್ತೊಂದು ಬಾರಿ ಸಂಕಷ್ಟಕ್ಕೀಡಾಗಿದ್ದಾರೆ.

ಎಲ್ಲೆಲ್ಲಿ ಎಷ್ಟು ಹಾನಿ: ಉತ್ತರ ಕರ್ನಾಟಕ ಭಾಗದಲ್ಲಿಯೇ ಅತಿಹೆಚ್ಚು ಬೆಳೆ ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಧಾರವಾಡ 47 ಸಾವಿರ, ಬೆಳಗಾವಿ 38 ಸಾವಿರ, ಗದಗ 86 ಸಾವಿರ, ಹಾವೇರಿ 11 ಸಾವಿರ, ವಿಜಯಪುರ 30 ಸಾವಿರ, ರಾಯಚೂರು 5 ಸಾವಿರ, ಬಾಗಲಕೋಟೆ 6 ಸಾವಿರ, ದಾವಣಗೆರೆ 3 ಸಾವಿರ, ಉತ್ತರ ಕನ್ನಡ ಎರಡು ಸಾವಿರ ಹಾಗೂ ಬಳ್ಳಾರಿ 1.5 ಸಾವಿರ ಹೆಕ್ಟೇರ್ ಬೆಳೆ ನಷ್ಟವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಇನ್ನುಳಿದಂತೆ ದಕ್ಷಿಣ ಭಾಗದ ಚಿತ್ರದುರ್ಗ ಜಿಲ್ಲೆಯಲ್ಲಿ 786, ಮಂಡ್ಯ 330, ಶಿವಮೊಗ್ಗ 492, ಮೈಸೂರು 27, ಉಡುಪಿ 6, ಚಿಕ್ಕಮಗಳೂರು 58 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟ ಸಂಭವಿಸಿದೆ ಎಂದು ಕೃಷಿ ಇಲಾಖೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮುಂಗಾರಿನಲ್ಲಿ 7.54 ಲಕ್ಷ ಹೆಕ್ಟೇರ್ ನಷ್ಟ: ಮುಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿ ಸುರಿದ ಮಳೆಯಿಂದಾಗಿ ಅಂದಾಜು 7,54,191 ಹೆಕ್ಟೇರ್ ಪ್ರದೇಶದ ಬೆಳೆ ನಷ್ಟವಾಗಿದ್ದು, ಅದರಿಂದ ಸುಮಾರು 13,829.24 ಕೋಟಿ ರೂ.ಗಳಷ್ಟು ನಷ್ಟವಾಗಿದೆ ಎಂದು ಆರ್ಥಿಕ ನಷ್ಟದ ಸಮೀಕ್ಷೆಯಲ್ಲಿ ಹೇಳಲಾಗಿದೆ.

ಕೃಷಿ ಇಲಾಖೆಯಿಂದ ಬೆಳೆ ನಷ್ಟಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯತ್ ಮಟ್ಟದ ಅಧಿಕಾರಿಗಳೊಂದಿಗೆ ಸೇರಿ ಕಳೆದ 20 ದಿನಗಳಿಂದ ಮಾಹಿತಿ ಸಂಗ್ರಹ ಮಾಡಲಾಗಿದೆ. ಅದರ ಪ್ರಕಾರ ರಾಜ್ಯದ 17ಜಿಲ್ಲೆಗಳಲ್ಲಿ ಸುಮಾರು 2, 35, 370 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ಗುರುತಿಸಲಾಗಿದೆ. ಇದು ಅಂದಾಜು ವರದಿಯಾಗಿದ್ದು, ಅಧಿಕಾರಿಗಳೊಂದಿಗೆ ಜಂಟಿ ಸಮೀಕ್ಷೆ ನಡೆಸಿದ ಬಳಿಕ ಅಂತಿಮ ವರದಿ ನೀಡಲಾಗುತ್ತದೆ.

-ಬಿ.ವೈ.ಶ್ರೀನಿವಾಸ್, ಕೃಷಿ ಇಲಾಖೆಯ ನಿರ್ದೇಶಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News