ಚಿಕ್ಕಮಗಳೂರು: ಕರ್ತವ್ಯದಲ್ಲಿದ್ದ ವೇಳೆ ವಿಪರೀತ ಚಳಿಗೆ ಎಎಸ್ಸೈ ಮೃತ್ಯು

Update: 2019-11-18 18:02 GMT

ಚಿಕ್ಕಮಗಳೂರು, ನ.18: ತಾಲೂಕಿನ ಬಾಬಾ ಬುಡನ್‍ಗಿರಿಯಲ್ಲಿ ಭದ್ರತಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಮಲ್ಲಂದೂರು ಠಾಣೆಯ ಎಎಸ್ಸೈ ವಿಪರೀತ ಚಳಿಯಿಂದಾಗಿ ಮೃತಪಟ್ಟಿರುವ ಘಟನೆ ರವಿವಾರ ಸಂಜೆ ನಡೆದಿದೆ.

ಮಲ್ಲಂದೂರು ಠಾಣೆಯ ಎಎಸ್ಸೈ ಜಗದೀಶ್ (56) ಚಳಿಯಿಂದಾಗಿ ಕರ್ತವ್ಯದಲ್ಲಿದ್ದಾಗಲೇ ಮೃತಪಟ್ಟ ಪೊಲೀಸ್ ಅಧಿಕಾರಿಯಾಗಿದ್ದು, ಜಗದೀಶ್ ಅವರು ಕಳೆದೊಂದು ವಾರದಿಂದ ಬಾಬಾ ಬುಡನ್‍ಗಿರಿಯಲ್ಲಿ ಭದ್ರತಾ ಕೆಲಸಕ್ಕಾಗಿ ಇತರ ಪೊಲೀಸ್ ಸಿಬ್ಬಂದಿಯೊಂದಿಗೆ ಕರ್ತವ್ಯ ನಿರ್ವಹಿಸುತ್ತಿದ್ದರೆಂದು ತಿಳಿದು ಬಂದಿದೆ. ಮಲ್ಲಂದೂರು ಠಾಣೆಯ ಎಎಸ್ಸೈ ಆಗಿದ್ದ ಅವರನ್ನು ರೂಟಿನ್ ಕರ್ತವ್ಯದಡಿಯಲ್ಲಿ ವಾರದಹಿಂದೆ ಬಿ.ಬಿ.ಹಿಲ್ಸ್ ನಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಇತ್ತೀಚೆಗಷ್ಟೆ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು ಕೊಂಚ ಸುಧಾರಿಸಿಕೊಂಡು ಕರ್ತವ್ಯಕ್ಕೆ ಹಾಜರಾಗಿದ್ದರು. ಇದೇ ಸಂದರ್ಭದಲ್ಲಿ ರೂಟಿನ್ ಕರ್ತವ್ಯದ ನಿಮಿತ್ತ ಅವರನ್ನು ಗಿರಿಗೆ ಭದ್ರತಾ ಕೆಲಸಕ್ಕೆ ಕಳಿಸಲಾಗಿತ್ತೆನ್ನಲಾಗಿದೆ.

ಬಾಬಾ ಬುಡನ್‍ಗಿರಿ ವ್ಯಾಪ್ತಿಯಲ್ಲಿ ಕಳೆದೊಂದು ತಿಂಗಳಿನಿಂದ ಭಾರೀ ಚಳಿ ಹಾಗೂ ಮಂಜಿನ ವಾತಾವರಣವಿದ್ದು, ಜಗದೀಶ್ ಅವರು ಚಳಿಯನ್ನು ತಡೆದುಕೊಳ್ಳಲಾಗುತ್ತಿಲ್ಲ ಎಂದು ಕರ್ತವ್ಯ ನಿರತ ಇತರ ಪೊಲೀಸ್ ಸಿಬ್ಬಂದಿಯೊಂದಿಗೆ ಹೇಳಿಕೊಂಡಿದ್ದರೆನ್ನಲಾಗಿದ್ದು, ರವಿವಾರ ಸಂಜೆ ಭಾರೀ ಚಳಿಯಿಂದ ನಲುಗಿದ್ದ ಅವರು ಕರ್ತವ್ಯ ನಿರ್ವಹಿಸುತ್ತಿದ್ದಾಗಲೇ ಚಳಿಯಿಂದಾಗಿ ಕುಸಿದು ಬಿದ್ದು ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.

ಇಳಿ ವಯಸ್ಸಿನ ಅಧಿಕಾರಿಯಾಗಿದ್ದ ಅವರು ಅನಾರೋಗ್ಯ ಪೀಡಿತರಾಗಿದ್ದರೂ ವಿಪರೀತ ಚಳಿ ಇರುವ ಕಡೆ ಕರ್ತವ್ಯಕ್ಕೆ ನಿಯೋಜಿಸುವ ಮೂಲಕ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಬೇಜವಬ್ದಾರಿತರನ ತೋರಿದ್ದರಿಂದ ಎಎಸ್ಸೈ ಜಗದೀಶ್ ಸಾವನ್ನಪ್ಪುವಂತಾಗಿದೆ ಎಂಬ ಟೀಕೆಗಳು ಇದೀಗ ಪೊಲೀಸ್ ಇಲಾಖೆಯಲ್ಲಿ ಕೇಳಿ ಬರುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News