ಜೆಎನ್‌ಯು ವಿದ್ಯಾರ್ಥಿಗಳಿಂದ ಸಂಸತ್ತಿಗೆ ರ‍್ಯಾಲಿ

Update: 2019-11-18 18:09 GMT

ಹಾಸ್ಟೆಲ್ ಶುಲ್ಕ ಏರಿಕೆಯನ್ನು ಸಂಪೂರ್ಣವಾಗಿ ಹಿಂದೆಗೆಯುವಂತೆ ಆಗ್ರಹಿಸಿ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ನೂರಾರು ವಿದ್ಯಾರ್ಥಿಗಳು ಚಳಿಗಾಲದ ಅಧಿವೇಶನದ ಮೊದಲನೇ ದಿನವಾದ ಸೋಮವಾರ ಸಂಸತ್ತಿಗೆ ಪ್ರತಿಭಟನಾ ರ್ಯಾಲಿ ನಡೆಸಿದ್ದಾರೆ. ಈ ರ‍್ಯಾಲಿಯನ್ನು ದಿಲ್ಲಿ ಪೊಲೀಸರು ಹಲವು ಕಡೆ ತಡೆದಿದ್ದಾರೆ. ಕೆಲವು ಕಡೆ 100ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. ಇನ್ನು ಕೆಲವು ಕಡೆ ಲಾಠಿ ಪ್ರಹಾರ ನಡೆಸಿದ್ದಾರೆ. ಇದರಿಂದ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಕಳೆದ ಮೂರು ವಾರಗಳಿಂದ ವಿಶ್ವವಿದ್ಯಾನಿಲಯದ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು ತಮ್ಮ ಬೇಡಿಕೆಗಳ ಬಗ್ಗೆ ಸಂಸತ್ತಿನಲ್ಲಿ ಗಮನ ಸೆಳೆಯುವಂತೆ ಆಗ್ರಹಿಸಿ ಪ್ರದರ್ಶನಾ ಫಲಕಗಳನ್ನು ಹಿಡಿದುಕೊಂಡು, ಘೋಷಣೆಗಳನ್ನು ಕೂಗುತ್ತಾ ರ್ಯಾಲಿ ಆರಂಭಿಸಿದ್ದರು. ವಿದ್ಯಾರ್ಥಿಗಳ ರ‍್ಯಾಲಿಯ ಹಿನ್ನೆಲೆಯಲ್ಲಿ ಕ್ಯಾಂಪಸ್‌ನ ಹೊರಗಡೆ 1,200ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿತ್ತು. ಅಲ್ಲದೆ ಸಂಸತ್ತಿನ ಹೊರಭಾಗದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor