'ಸ್ವಘೋಷಿತ ದೇವಮಾನವ ನಿತ್ಯಾನಂದನ ಆಶ್ರಮದಲ್ಲಿ ಪುತ್ರಿಯರು ದಿಗ್ಬಂಧನದಲ್ಲಿ'

Update: 2019-11-19 07:57 GMT
Photo: www.ndtv.com

ಅಹ್ಮದಾಬಾದ್: ವಿವಾದಿತ ಸ್ವಘೋಷಿತ ದೇವಮಾನವ ನಿತ್ಯಾನಂದನ ಆಶ್ರಮದಲ್ಲಿ ತಮ್ಮ ಇಬ್ಬರು ಪುತ್ರಿಯರನ್ನು ದಿಗ್ಬಂಧನದಲ್ಲಿರಿಸಲಾಗಿದೆಯೆಂದು ಆರೋಪಿಸಿ ಹಾಗೂ ಅವರ ಬಿಡುಗಡೆಗೆ ಕೋರಿ ಗುಜರಾತ್ ರಾಜ್ಯದ ದಂಪತಿ ಹೈಕೋರ್ಟಿನ ಕದ ತಟ್ಟಿದ್ದಾರೆ.

ತಮ್ಮ ಏಳರಿಂದ 15 ವರ್ಷ ವಯಸ್ಸಿನ ನಾಲ್ಕು ಮಂದಿ ಪುತ್ರಿಯರನ್ನು ನಿತ್ಯಾನಂದ ಬೆಂಗಳೂರಿನಲ್ಲಿ ನಡೆಸುವ ಶಿಕ್ಷಣ ಸಂಸ್ಥೆಗೆ 2013ರಲ್ಲಿ ದಾಖಲಿಸಿದ್ದಾಗಿ ಜನಾರ್ದನ ಶರ್ಮ ಮತ್ತವರ ಪತ್ನಿ ತಮ್ಮ ಅಪೀಲಿನಲ್ಲಿ ತಿಳಿಸಿದ್ದಾರೆ.

ಈ ವರ್ಷ ಅವರ ಪುತ್ರಿಯರನ್ನು ಬೆಂಗಳೂರಿನಿಂದ ಅಹ್ಮದಾಬಾದ್ ನಗರದ ಡೆಲ್ಲಿ ಪಬ್ಲಿಕ್ ಸ್ಕೂಲ್ ಆವರಣದಲ್ಲಿರುವ ಯೋಗಿನಿ ಸರ್ವಜ್ಞಪೀಠಂ ಎಂಬ ನಿತ್ಯಾನಂದ ಧ್ಯಾನಪೀಠಂನ ಇನ್ನೊಂದು ಶಾಖೆಗೆ ಕಳುಹಿಸಲಾಗಿದೆ ಎಂದು ತಿಳಿದು ಅವರು ತಮ್ಮ ಪುತ್ರಿಯರನ್ನು ಭೇಟಿಯಾಗಲು ಯತ್ನಿಸಿದ್ದರೂ ಅಲ್ಲಿನ ಅಧಿಕಾರಿಗಳು ಆಸ್ಪದ ನೀಡಿಲ್ಲ ಎಂದು ಆರೋಪಿಸಲಾಗಿದೆ.

ಕೊನೆಗೆ ಪೊಲೀಸರ ಸಹಾಯದಿಂದ ಶರ್ಮ ದಂಪತಿ  ಸಂಸ್ಥೆ ಪ್ರವೇಶಿಸಿ ತಮ್ಮ ಇಬ್ಬರು ಪುತ್ರಿಯರನ್ನು ತಮ್ಮೊಂದಿಗೆ ಕರೆದೊಯ್ಯಲು ಸಫಲರಾದರೂ ಅವರ ಹಿರಿಯ ಪುತ್ರಿಯರಾದ ಲೋಪಮುದ್ರ ಜನಾರ್ದನ ಶರ್ಮ (21)  ಹಾಗೂ ನಂದಿತಾ (18) ಅವರ ಜತೆಗೆ ಬರಲು ನಿರಾಕರಿಸಿದ್ದಾರೆಂದು ಹೇಳಲಾಗಿದೆ.

ತಮ್ಮ ಇಬ್ಬರು ಕಿರಿಯ  ಪುತ್ರಿಯರನ್ನು ಎರಡು ವಾರಗಳ ಕಾಲ ಅಕ್ರಮ ದಿಗ್ಬಂಧನದಲ್ಲಿರಿಸಿ ನಿದ್ದೆ ಮಾಡಲೂ ಬಿಟ್ಟಿರಲಿಲ್ಲವೆಂದೂ  ಅವರು ಆರೋಪಿಸಿದ್ದಾರೆ.

ಇಬ್ಬರು ಹಿರಿಯ ಪುತ್ರಿಯರನ್ನು ಹಾಜರುಪಡಿಸಿ ಅವರನ್ನು ತಮ್ಮ ವಶಕ್ಕೆ ಒಪ್ಪಿಸಲು ಸಂಸ್ಥೆಗೆ ಸೂಚಿಸುವಂತೆ ದಂಪತಿ ತಮ್ಮ  ಅಪೀಲಿನಲ್ಲಿ ಕೋರಿದ್ದಾರಲ್ಲದೆ ಸಂಸ್ಥೆಯಲ್ಲಿರುವ ಇತರ ಅಪ್ರಾಪ್ತರ ಕುರಿತಂತೆಯೂ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News