ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಇಸ್ರೇಲಿ ಕಾಲನಿಗಳಿಗೆ ಅಮೆರಿಕ ಬೆಂಬಲ

Update: 2019-11-19 16:34 GMT
 photo: AFP

ವಾಶಿಂಗ್ಟನ್, ನ. 19: ತಾನು ಆಕ್ರಮಿಸಿಕೊಂಡಿರುವ ಪಶ್ಚಿಮ ದಂಡೆಯಲ್ಲಿ ಯಹೂದಿಯರ ಕಾಲನಿಗಳನ್ನು ನಿರ್ಮಿಸುವ ಹಕ್ಕು ತನಗಿದೆ ಎಂಬ ಇಸ್ರೇಲ್‌ನ ನಿಲುವನ್ನು ಅಮೆರಿಕ ಸೋಮವಾರ ಬೆಂಬಲಿಸಿದೆ ಹಾಗೂ ಈ ಮೂಲಕ ಯಹೂದಿ ಕಾಲನಿಗಳ ನಿರ್ಮಾಣವು ‘ಅಂತರ್‌ರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿಲ್ಲ’ ಎಂಬ ತನ್ನ ನಾಲ್ಕು ದಶಕಗಳ ನಿಲುವಿಗೆ ಅಮೆರಿಕ ಬೆನ್ನು ಹಾಕಿದೆ.

ಅಮೆರಿಕದ ಈ ನಿಲುವಿನಿಂದಾಗಿ ಇಸ್ರೇಲ್-ಫೆಲೆಸ್ತೀನ್ ಶಾಂತಿಯ ಸಾಧ್ಯತೆ ಮತ್ತಷ್ಟು ದೂರವಾಗಿದೆ.

ಅಮೆರಿಕದ ಹೊಸ ನಿಲುವನ್ನು ಆ ದೇಶದ ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊ ಘೋಷಿಸಿದ್ದಾರೆ. ಇದು ಈ ವರ್ಷ ಇಸ್ರೇಲ್‌ನಲ್ಲಿ ಎರಡು ಬಾರಿ ನಡೆದ ಚುನಾವಣೆಗಳಲ್ಲಿಯೂ ಅಸಮರ್ಪಕ ಜನಾದೇಶವನ್ನು ಪಡೆದು ಅಧಿಕಾರದಲ್ಲಿ ಉಳಿಯಲು ಪರದಾಡುತ್ತಿರುವ ಪ್ರಧಾನಿ ಬೆಂಜಮಿನ್ ನೆತನ್ಯಾಹುಗೆ ವರದಾನವಾಗಿ ಬಂದಿದೆ ಹಾಗೂ ಫೆಲೆಸ್ತೀನಿಯರಿಗೆ ತೀವ್ರ ಹಿನ್ನಡೆಯಾಗಿದೆ.

ಅದೂ ಅಲ್ಲದೆ, ಇಸ್ರೇಲ್-ಫೆಲೆಸ್ತೀನ್ ಸಂಘರ್ಷವನ್ನು ಪರಿಹರಿಸುವುದಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಆಶಯದಂತೆ ಎರಡು ವರ್ಷಗಳಿಂದ ರೂಪುಗೊಳ್ಳುತ್ತಿರುವ ಶಾಂತಿ ಯೋಜನೆಗೂ ಇದು ದೊಡ್ಡ ಹೊಡೆತವಾಗಿದೆ.

‘‘ಇಸ್ರೇಲಿ ನಾಗರಿಕ ಕಾಲನಿಗಳ ನಿರ್ಮಾಣವು ಅಂತರ್‌ರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ಇಲ್ಲ ಎನ್ನುವುದು ಸರಿಯಲ್ಲ’’ ಎಂದು ವಿದೇಶಾಂಗ ಇಲಾಖೆ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪಾಂಪಿಯೊ ಹೇಳಿದರು.

ಪಶ್ಚಿಮ ದಂಡೆಯನ್ನು ಇಸ್ರೇಲ್ 1967ರಲ್ಲಿ ಆಕ್ರಮಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News