ಇನ್ನು ಮುಂದೆ ಸದನದ ಬಾವಿಯೊಳಗೆ ಪ್ರತಿಭಟನೆ ನಡೆಸಬಾರದು: ಸ್ಪೀಕರ್ ಎಚ್ಚರಿಕೆ

Update: 2019-11-19 18:07 GMT
PTI

ಹೊಸದಿಲ್ಲಿ, ನ.19: ಇನ್ನು ಮುಂದೆ ಸದಸ್ಯರು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಕೂಡದು. ಪ್ರತಿಭಟನೆ ನಡೆಸಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಮಂಗಳವಾರ ಲೋಕಸಭೆಯಲ್ಲಿ ಸ್ಪೀಕರ್ ಎಚ್ಚರಿಕೆ ನೀಡಿದ್ದಾರೆ.

  ಲೋಕಸಭೆಯಲ್ಲಿ ಸದನದ ಕಲಾಪ ಆರಂಭವಾಗುತ್ತಿದ್ದಂತೆಯೇ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ವಿಪಕ್ಷ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ಆರಂಭಿಸಿದ್ದು ಒಂದು ಹಂತದಲ್ಲಿ ಸದನದ ಬಾವಿಗೆ ನುಗ್ಗಿ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದ್ದಾರೆ. ಸ್ವಸ್ಥಾನಕ್ಕೆ ಮರಳುವಂತೆ ಸ್ಪೀಕರ್ ಓಂಪ್ರಕಾಶ್ ಬಿರ್ಲಾ ಹಲವು ಬಾರಿ ಮನವಿ ಮಾಡಿಕೊಂಡರೂ ಕಾಂಗ್ರೆಸ್ ಸದಸ್ಯರು ಕಿವಿಗೊಡದೆ ಘೋಷಣೆ ಮುಂದುವರಿಸಿದರು.

ಸದಸ್ಯರು ತಮ್ಮ ಸ್ಥಾನಕ್ಕೆ ಮರಳಿದರೆ ಅವರಿಗೆ ಪೂರಕ ಪ್ರಶ್ನೆ ಕೇಳಲು ಅವಕಾಶ ನೀಡುವುದಾಗಿ ಸ್ಪೀಕರ್ ಹೇಳಿದರು. ಆಗಲೂ ವಿಪಕ್ಷ ಸದಸ್ಯರು ಸುಮ್ಮನಾಗಲಿಲ್ಲ.

 ಈ ಹಂತದಲ್ಲಿ ತಾಳ್ಮೆ ಕಳೆದುಕೊಂಡ ಸ್ಪೀಕರ್, ಸದನದ ಇತಿಹಾಸದಲ್ಲಿ ಈ ಹಿಂದೆಯೂ ಬಾವಿಗೆ ನುಗ್ಗಿ ಪ್ರತಿಭಟನೆ ನಡೆಸಿದ ನಿದರ್ಶನ ಇರಬಹುದು. ಆದರೆ ಇವತ್ತಿನ ಬಳಿಕ ಸದನದ ಬಾವಿಗೆ ನುಗ್ಗಿ ಪ್ರತಿಭಟನೆ ನಡೆಸಕೂಡದು. ಇದಕ್ಕೆ ತಪ್ಪಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News