ಬಿಜೆಪಿ ಅಭ್ಯರ್ಥಿಗಳನ್ನು ‘ಅನರ್ಹರು’ ಎನ್ನಲು ಸಿದ್ದರಾಮಯ್ಯ ಯಾರು: ಸಿಎಂ ಯಡಿಯೂರಪ್ಪ ಪ್ರಶ್ನೆ

Update: 2019-11-20 12:58 GMT

ಬೆಂಗಳೂರು, ನ. 20: ಉಪಚುನಾವಣೆಯ ಅಖಾಡದಲ್ಲಿರುವ ಬಿಜೆಪಿ ಅಭ್ಯರ್ಥಿಗಳನ್ನು ‘ಅನರ್ಹರು’ ಎನ್ನಲು ವಿಪಕ್ಷ ನಾಯಕ ಸಿದ್ದರಾಮಯ್ಯ ಯಾರು? ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಪ್ರಶ್ನಿಸಿದ್ದಾರೆ.

ಬುಧವಾರ ನಗರದ ಡಾಲರ್ಸ್‌ ಕಾಲನಿಯಲ್ಲಿನ ತನ್ನ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಹೋದಲ್ಲಿ-ಬಂದಲ್ಲಿ ಮನಸೋ ಇಚ್ಛೆ ಮಾತನಾಡುತ್ತಿದ್ದಾರೆ. ಅನರ್ಹರು ಚುನಾವಣೆಗೆ ಸ್ಪರ್ಧಿಸಬಹುದು ಎಂದು ಕೋರ್ಟ್ ತೀರ್ಪು ನೀಡಿದೆ. ಹೀಗಿರುವಾಗ ಅವರನ್ನು ಅನರ್ಹರು ಎನ್ನಲು ಇವರು ಯಾರು ಎಂದು ಕೇಳಿದರು.

ಅನರ್ಹರು ಯಾರು ಎಂದು ಜನ ಡಿ.5ರಂದು ತೀರ್ಮಾನ ಮಾಡಲಿದ್ದಾರೆ. ಬಿಜೆಪಿ ಸರಕಾರ ಉಳಿಯಬೇಕೆಂದು ಆ ಅನರ್ಹರು ತೀರ್ಮಾನ ಮಾಡಿದ್ದಾರೆ. ಅದಕ್ಕೆ ರಾಜ್ಯದ ಜನರು ಅವರನ್ನು ಕಾಪಾಡುತ್ತಾರೆ. ಹದಿನೈದು ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲುವು ನಿಶ್ಚಿತ ಎಂದು ನುಡಿದರು.
ಲೋಕಸಭೆ ಚುನಾವಣೆಯಲ್ಲಿ ನಿಮ್ಮ ಯೋಗ್ಯತೆಗೆ ಒಂದು ಸ್ಥಾನವನ್ನು ಗೆಲ್ಲಲು ಸಾಧ್ಯವಾಗಿಲ್ಲ. ಅಲ್ಲಿ, ಇವರಿಗೆ ಅಧಿಕೃತವಾಗಿ ವಿಪಕ್ಷದ ಸ್ಥಾನವೂ ಸಿಕ್ಕಿಲ್ಲ. ಆದರೂ ಬೊಬ್ಬೆ ಹೊಡೆದುಕೊಂಡು, ತನ್ನ ಬಿಟ್ಟು ಬೇರೆ ಯಾರು ರಾಜಕಾರಣದಲ್ಲಿಲ್ಲ ಎಂದು ಹೊರಟ್ಟಿದ್ದೀರಿ. ನೀವು ಒಬ್ಬಂಟಿ ಎಂಬುದನ್ನು ಮರೆಯಬೇಡಿ ಎಂದು ತಿರುಗೇಟು ನೀಡಿದರು.

‘ಲೋಕಸಭೆ ಚುನಾವಣೆ ವೇಳೆ ಸುಮಲತಾ ಅವರಿಗೆ ನಾವು ಸಹಕಾರ ನೀಡಿದ್ದೇವೆ. ಇದೀಗ ಅವರು ಕೆ.ಆರ್.ಪೇಟೆ ಉಪ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗೆ ಬೆಂಬಲ ನೀಡುವ ವಿಶ್ವಾಸವಿದೆ. ಶೀಘ್ರದಲ್ಲೆ ಅವರೊಂದಿಗೆ ನಾನು ಮಾತನಾಡುವೆ’
-ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News