ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಹೊಣೆ ಜಿಲ್ಲಾ ಉಸ್ತುವಾರಿ ಸಚಿವರ ಹೆಗಲಿಗೆ

Update: 2019-11-20 12:07 GMT

ಬೆಂಗಳೂರು, ನ. 20: ಡಿಸೆಂಬರ್ 5ರಂದು ನಡೆಯಲಿರುವ 15 ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಕನಿಷ್ಟ 8 ಸ್ಥಾನಗಳನ್ನು ಗೆಲ್ಲಲೇಬೇಕು, ಇಲ್ಲವಾದರೆ ಸರಕಾರದ ಭವಿಷ್ಯಕ್ಕೆ ಆತಂಕವಿದೆ. ಹೀಗಾಗಿ ಜಿಲ್ಲಾ ಉಸ್ತುವಾರಿ ಸಚಿವರು ಶ್ರಮವಹಿಸುವ ಮೂಲಕ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ಸಿಎಂ ನಿರ್ದೇಶನ ನೀಡಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಉಪಚುನಾವಣೆ ಪ್ರಚಾರ ಹಾಗೂ ನಿರ್ವಹಣೆ ಸೇರಿ ಇನ್ನಿತರ ವಿಚಾರಗಳ ಬಗ್ಗೆ ಗಂಭೀರ ಸ್ವರೂಪದ ಚರ್ಚೆ ನಡೆಸಲಾಗಿದ್ದು, ಚುನಾವಣೆ ಗೆಲ್ಲುವ ಹೊಣೆಯನ್ನು ಬಿಎಸ್‌ವೈ ಸಚಿವರ ಹೆಗಲಿಗೆ ಹಾಕಿದ್ದಾರೆಂದು ತಿಳಿದು ಬಂದಿದೆ.

ಉಪಚುನಾವಣೆ ನಡೆಯಲಿರುವ ಕ್ಷೇತ್ರಗಳ ಮುಖಂಡರಲ್ಲಿನ ಬಂಡಾಯ ಶಮನ ಮಾಡಬೇಕು. ಜೊತೆಗೆ ಎಲ್ಲರನ್ನು ಒಟ್ಟಿಗೆ ಕೊಂಡೊಯ್ಯುವ ಮೂಲಕ ಪಕ್ಷದ ಗೆಲುವಿಗೆ ಶ್ರಮಿಸಬೇಕೆಂದು ಸೂಚಿಸಿರುವ ಬಿಎಸ್‌ವೈ, ಯಾವುದೇ ಕಾರಣಕ್ಕೂ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಬೇಡಿ ಎಂದು ತಾಕೀತು ಮಾಡಿದ್ದಾರೆಂದು ಮೂಲಗಳು ತಿಳಿಸಿವೆ.

ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವುದು ಸಲೀಸೂ ಅಲ್ಲ, ಸುಲಭವೂ ಅಲ್ಲ. ಹೀಗಾಗಿ ಎಲ್ಲರೂ ಪಕ್ಷದ ಎಲ್ಲ ಮುಖಂಡರ ಬೆಂಬಲದೊಂದಿಗೆ ಅತ್ಯಂತ ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಯಡಿಯೂರಪ್ಪ ಇದೇ ವೇಳೆ ತಾಕೀತು ಮಾಡಿದ್ದಾರೆಂದು ತಿಳಿದು ಬಂದಿದೆ.

ಅನರ್ಹ ಶಾಸಕರನ್ನು ಶತಾಯ-ಗತಾಯ ಸೋಲಿಸಬೇಕೆಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ಶ್ರಮಿಸುತ್ತಿದ್ದಾರೆ. ಉಪಚುನಾವಣೆಯಲ್ಲಿ ಕನಿಷ್ಟ 8 ಸ್ಥಾನ ಗೆಲ್ಲಲ್ಲಿದ್ದರೆ, ಬಿಎಸ್‌ವೈ ನೇತೃತ್ವದ ಬಿಜೆಪಿ ಸರಕಾರ ಅಲ್ಪಮತಕ್ಕೆ ಕುಸಿಯುವ ಭೀತಿ ಹಿನ್ನೆಲೆಯಲ್ಲಿ ಯಡಿಯೂರಪ್ಪ ಉಪಚುನಾವಣೆ ಗೆಲುವಿಗೆ ಸಂಪುಟ ಸಭೆಯಲ್ಲಿ ರಣತಂತ್ರ ಹೆಣೆದಿದ್ದಾರೆಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News