ಸುಳ್ಳಿನ ಸರಮಾಲೆ ಸೃಷ್ಟಿಸಿ ಸರಕಾರದಿಂದ ವಿವಾದಿತ ರಾಜಕೀಯ: ಬಿಎಸ್ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ

Update: 2019-11-20 12:18 GMT

ಮೂಡಿಗೆರೆ: ನ.20: ಮೈಸೂರಿನ ಹುಲಿ ಹಝರತ್ ಟಿಪ್ಪು ಸುಲ್ತಾನ್ ಜಯಂತಿ ವಿಚಾರದಲ್ಲಿ ರಾಜ್ಯ ಸರಕಾರ ವಿವಾದ ಸೃಷ್ಟಿಸಿ ರಾಜಕೀಯ  ಬೇಳೆ ಬೇಯಿಸಿಕೊಳ್ಳುತ್ತಿದೆ ಎಂದು ಬಿಎಸ್‍ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ದೂರಿದರು.

ಅವರು ಬುಧವಾರ ಪಟ್ಟಣದ ಶಾದಿ ಮಹಲ್‍ನಲ್ಲಿ ಬಿಎಸ್‍ಪಿ ಕ್ಷೇತ್ರ ಸಮಿತಿ, ಟಿಪ್ಪುಸುಲ್ತಾನ್ ಜಯಂತಿ ಆಚರಣಾ ಸಮಿತಿ ಹಾಗೂ ವಿವಿಧ ರಾಜಕೀಯ ಪಕ್ಷಗಳು ಮತ್ತು ಮುಸ್ಲಿಂ ಸಂಘಟನೆ ವತಿಯಿಂದ ಏರ್ಪಡಿಸಿದ್ದ ಹಝರತ್ ಟಿಪ್ಪು ಸುಲ್ತಾನ್ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಟಿಪ್ಪು ಸುಲ್ತಾನ್ ಆಡಳಿತ ಕಾಲದಲ್ಲಿ 38 ಸಾವಿರ ಹಿಂದೂ ದೇವಾಲಯವನ್ನು ದ್ವಂಸಗೊಳಿಸಿದ್ದಾರೆಂದು ಬಿಜೆಪಿಯವರು ಡಂಗುರ ಸಾರುತ್ತಿದ್ದಾರೆ. ಟಿಪ್ಪು ಕಾಲದಲ್ಲಿ 38 ಸಾವಿರ ದೇವಸ್ಥಾನಗಳನ್ನು ಆರೆಸ್ಸೆಸ್ ನವರು ಕಟ್ಟಿಸಿದ್ದಾರೆಯೇ ಎಂದು ಪ್ರಶ್ನಿಸಿದರು. 

ಮಂಡ್ಯದ ಶ್ರೀ ರಂಗ, ಕೊಲ್ಲೂರಿನ ಮೂಕಾಂಬಿಕ, ಶೃಂಗೇರಿಯ ಶಾರದಾ ಪೀಠ ಸಹಿತ ನೂರಾರು ದೇವಸ್ಥಾನಗಳನ್ನು ಟಿಪ್ಪು ಸುಲ್ತಾನ್ ಕಟ್ಟಿಸಿದ್ದರು. ಆದರೆ ಅವರ ಆಡಳಿತ ಕಾಲದಲ್ಲಿ ಮಸೀದಿಯನ್ನು ಕಟ್ಟುವ ಪ್ರಯತ್ನವೇ ಮಾಡಿರಲಿಲ್ಲ. ಟಿಪ್ಪು ಸುಲ್ತಾನ್ ಮತಾಂತರ ಮಾಡಿದ್ದರೆ ರಾಜ್ಯದ ಎಲ್ಲಾ ಕಡೆ ಮುಸ್ಲಿಮರೇ ತುಂಬಿ ಹೋಗುತ್ತಿದ್ದರು. ಹಿಂದೂಗಳೆ ಇರುತ್ತಿರಲಿಲ್ಲ. ಟಿಪ್ಪು ಆಡಳಿತ ಕಾಲದಲ್ಲಿ ಮತಾಂತರಗೊಳಿಸಲಾಗಿದೆ ಎಂಬ ಆರೋಪ ಆರೆಸ್ಸೆಸ್ ಮತ್ತು ಬಿಜೆಪಿಯ ಬಹು ದೊಡ್ಡ ಸುಳ್ಳಿನ ಕಂತೆಯಾಗಿದೆ ಎಂದು ಹೇಳಿದರು. 

ಎಸ್‍ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮಹಮ್ಮದ್ ತುಂಬೆ ಮಾತನಾಡಿ, 48 ವರ್ಷ ಬದುಕಿದ್ದ ಟಿಪ್ಪು ಸುಲ್ತಾನ್ 17 ವರ್ಷ ರಾಜನಾಗಿ ಆಡಳಿತ ನಡೆಸಿದ್ದರು. 6 ಮಂದಿ ಬ್ರಾಹ್ಮಣರನ್ನು ತನ್ನ ಆಸ್ತಾನದ ಮಂತ್ರಿಗಳನ್ನಾಗಿ ಮಾಡಿಕೊಂಡಿದ್ದರು. 39 ಸಾವಿರ ಕೆರೆ ಕಟ್ಟೆಗಳನ್ನು ನಿರ್ಮಿಸಿ ರೈತರ ನೀರಾವರಿಗೆ ಒತ್ತು ನೀಡಿದ್ದರು. ತಪ್ಪು ಮಾಡಿದ ಮುಸ್ಲಿಂ, ಹಿಂದೂ, ಕ್ರೈಸ್ತರೆಂಬ ಬೇಧವಿಲ್ಲದಂತೆ ಎಲ್ಲರನ್ನೂ ಶಿಕ್ಷೆಗೊಳಿಸಿದ್ದರು. ಟಿಪ್ಪು ಆಳ್ವಿಕೆ ಉತ್ತಮ ರೀತಿಯಲ್ಲಿದಿದ್ದರಿಂದ ಇಂದಿನ ಕರ್ನಾಟಕ ಬಲಿಷ್ಟ ಕನ್ನಡ ನಾಡಾಗಿ ಎಲ್ಲಾ ವರ್ಗದ ಜನ ಉತ್ತಮ ರೀತಿಯಲ್ಲಿ ಬದುಕುವಂತಾಗಿದೆ ಎಂದು ಹೇಳದರು. 

ಈ ವೇಳೆ ಸಮಾಜ ಸೇವೆಯಲ್ಲಿ ತೊಡಗಿರುವ 7 ಮಂದಿ ಸಮಾಜ ಸೇವಕರನ್ನು ಸನ್ಮಾನಿಸಲಾಯಿತು. ಪ್ರಾರಂಭದಲ್ಲಿ ಪ್ರವಾಸಿ ಮಂದಿರದಿಂದ ಶಾಂತಿ ಮೆರವಣಿಗೆಯಲ್ಲಿ ಶಾದಿ ಮಹಲ್‍ಗೆ ತೆರಳಿದರು. ಜದೀದ್ ಮಸೀದಿ ಧರ್ಮಗುರು ಮೌಲಾನಾ ವಾಜೀದ್‍ ಅಲಿ ಕಿರಾತ್ ಪಠಿಸಿದರು. ಬಿಎಸ್‍ಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಲೋಕವಳ್ಳಿ ರಮೇಶ್ ಅಧ್ಯಕ್ಷತೆ ವಹಿಸಿದ್ದರು. 

ಧರ್ಮಗುರುಗಳಾದ ಮಜೀದ್ ಹಝ್‍ಹರಿ, ಜಮಾಲುದ್ದೀನ್ ಫೈಝಿ, ಮೌಲಾನಾ ಶಫಿಯುಲ್ಲಾ, ಬಿಎಸ್‍ಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಜಾಕೀರ್ ಹುಸೇನ್, ಗಂಗಾಧರ್, ಎಸ್‍ಡಿಪಿಐ ಅಧ್ಯಕ್ಷ ಮಹಮ್ಮದ್ ರಪೀಕ್, ಕಾರ್ಯದರ್ಶಿ ಎಂ.ಎ.ಶರಿಫ್, ಮುಖಂಡರಾದ ಯು.ಬಿ.ಮಂಜಯ್ಯ, ಬಿ.ಎಂ.ಶಂಕರ್, ಅಬ್ರಾರ್ ಬಿದರಹಳ್ಳಿ, ಪಿ.ಕೆ.ಮಂಜುನಾಥ್, ಉಮರಬ್ಬ, ಸಿ.ಕೆ.ಇಬ್ರಾಹಿಂ, ಅಕ್ರಂ ಹಾಜಿ, ಫಿಶ್ ಮೋನು, ಬಿ.ರಾಮು, ಹೊಸಕೆರೆ ರಮೇಶ್, ಎಂ.ಎ.ಹಂಝಾ, ಅಲ್ತಾಫ್ ಬಿಳಗುಳ, ಶ್ರೀಕಾಂತ್, ಎ.ಸಿ.ಅಯೂಬ್, ಬಿನ್ನಡಿ ಪ್ರಭಾಕರ್, ಉದುಸೆ ಮಹೇಶ್, ಸುರೇಶ್, ಬಿಎಸ್‍ಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ದಾಸಪ್ಪ ಮತ್ತಿತರರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News