ಮೂಡಿಗೆರೆ: ತಾ.ಪಂ. ಸರ್ವ ಸದಸ್ಯರ ಸಾಮಾನ್ಯ ಸಭೆ

Update: 2019-11-20 12:21 GMT

ಮೂಡಿಗೆರೆ: ನ.20: ಇಲ್ಲಿನ  ತಾ.ಪಂ. ಸಭಾಂಗಣದಲ್ಲಿ ಅಧ್ಯಕ್ಷ ಕೆ.ಸಿ.ರತನ್ ಅಧ್ಯಕ್ಷತೆಯಲ್ಲಿ ಬುಧವಾರ ತಾ.ಪಂ. ಸರ್ವ ಸದಸ್ಯರ ಸಾಮಾನ್ಯ ಸಭೆ ನಡೆಯಿತು ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಹಾಗೂ ಅಭಿವೃದ್ಧಿ ಕುರಿತು ಗಂಭೀರ ಚರ್ಚೆ ನಡೆಯಿತು.

ಸಭೆ ಪ್ರಾರಂಭದ ವೇಳೆ ತಾ.ಪಂ. ಅಧ್ಯಕ್ಷ ಕೆ.ಸಿ.ರತನ್ ಅವರು, ತಾಲೂಕಿನಲ್ಲಾದ ಪ್ರವಾಹದ ಬಗ್ಗೆ ಚರ್ಚಿಸಲು ಜಿ.ಪಂ. ಎಇಇ ಮತ್ತು ಎಂಜಿನಿಯರ್‍ಗಳನ್ನು ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ. ಹಾಗಾಗಿ ಜಿ.ಪಂ.ಯ ಅಧಿಕಾರಿಗಳು ಸಭೆ ಆಗಮಿಸಿಲ್ಲವೆಂದು ಸಭೆಗೆ ತಿಳಿಸಿದಾಗ, ಇದಕ್ಕೆ ತಾ.ಪಂ. ಸದಸ್ಯ ರಂಜನ್ ಅಜಿತ್ ಕುಮಾರ್ ಮಾತನಾಡಿ, ತಾಲೂಕಿನಲ್ಲಿರುವ ಎಲ್ಲಾ ಶುದ್ಧಗಂಗ ಘಟಕದ ಉದ್ಘಾಟನೆಯನ್ನು ಕಳೆದ ಅಕ್ಟೋಬರ್ ತಿಂಗಳಲ್ಲಿ ನಡೆಸುತ್ತೇವೆಂದು ಜಿ.ಪಂ. ಎಂಜಿನಿಯರ್‍ಗಳು ಸಭೆಗೆ ಮಾಹಿತಿ ನೀಡಿದ್ದರು. ಕಳೆದ 5 ವರ್ಷದಿಂದ ಶುದ್ಧಗಂಗಾ ಘಟಕ ಉದ್ಘಾಟನೆಗೆ ಶಾಸಕರಿಂದ ದಿನ ನಿಗದಿ ಮಾಡಿಲ್ಲವೆಂದು ಕಾಲ ಹರಣ ಮಾಡಿದ್ದರೆ ಇದನ್ನು ಪ್ರಶ್ನಿಸುತ್ತೇವೆಂದು ಸಭೆಗೆ ತಪ್ಪಿಸಿಕೊಂಡಿದ್ದಾರೆ. ಜಿ.ಪಂ. ಅಧಿಕಾರಿಗಳಿಂದ ಯಾವ ಅಭಿವೃದ್ಧಿ ಕೆಲಸವೂ ಆಗುತ್ತಿಲ್ಲ. ಅವರನ್ನು ವರ್ಗಾವಣೆಗೊಳಿಸಿ. ಈ ಬಗ್ಗೆ ಚರ್ಚಿಸಲು ನ.24ರಂದು ಪುನಃ ಸಭೆ ನಡೆಸಬೆಕೆಂದು ಒತ್ತಾಯಿಸಿದರು. ಇದಕ್ಕೆ ಅಧ್ಯಕ್ಷ ಒಪ್ಪಿಕೊಂಡರು.

ನಂತರ ಅನುಪಾಲನೆ ವರದಿ ಸಲ್ಲಿಸುವ ವೇಳೆ ಪಿಡಬ್ಲೂಡಿ ಇಲಾಖೆ ಅಧಿಕಾರಿ ಸಭೆಗೆ ಆಗಮಿಸಿರಲಿಲ್ಲ. ಅವರ ಬದಲು ಬೇರೆ ಅಧಿಕಾರಿಯನ್ನು ಕಳುಹಿಸಿದ್ದರು. ಇದಕ್ಕೆ ಸದಸ್ಯ ರಂಜನ್ ಅಜಿತ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿ, ಸಭೆ ಕಾಟಾಚಾರಕ್ಕೆ ನಡೆಯುತ್ತಿದೆ. ಯಾವ ಸಭೆಗೂ ಅಧಿಕಾರಿಗಳು ಬರುತ್ತಿಲ್ಲ. ನಾವಿಲ್ಲಿ ಬಂದು ಏನು ಮಾಡುವುದು? ಮೊದಲು ಸಭೆಗೆ ಬರುವ ಅಧಿಕಾರಿಗಳನ್ನು ಕರೆಸಿ ನಂತರ ಸಭೆ ಮುಂದುವರೆಸಿ. ಇಲ್ಲವಾದರೆ ಸಭೆಯನ್ನು ಮುಂದೂಡಿ ಎಂದು ಸಭೆಯಿಂದ ಹೊರ ಹೋಗಲು ಪ್ರಯತ್ನಿಸಿದರು. ನಂತರ ಅಧ್ಯಕ್ಷ ಕೆ.ಸಿ.ರತನ್ ಸಮಾಧಾನ ಪಡಿಸಿ ಸಭೆಗೆ ಹಾಜರಾಗದ ಅಧಿಕಾರಿಗಳನ್ನು ನ.24 ಕ್ಕೆ ಕರೆಸಿ ಸಭೆ ನಡೆಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಆರೋಗ್ಯ ಇಲಾಖೆಯಿಂದ ಎಂಎಲ್‍ಎಚ್‍ಪಿ ಯೋಜನೆಯಿಂದ ತರಬೇತಿ ಪಡೆದ ನರ್ಸ್‍ಗಳನ್ನು ತಾಲೂಕಿನಲ್ಲಿ ಅವಶ್ಯಕತೆ ಇಲ್ಲದ ಸ್ಥಳಕ್ಕೆ ಯಾಕೆ ನಿಯೋಜಿಸಲಾಗಿದೆ ಎಂದು ಎಂಜಿಎಂ ಆಡಳಿತಾಧಿಕಾರಿ ಡಾ.ಅಶ್ವಥ್‍ಬಾಬು ಅವರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಡಾ.ಅಶ್ವಥ್‍ಬಾಬು ಅವರು, ಬಿಎಸ್‍ಇ ನರ್ಸಿಂಗ್ ಮಾಡಿದವರಿಗೆ 6 ತಿಂಗಳು ತರಬೇತಿ ನೀಡಿ, ಪರೀಕ್ಷೆಯಲ್ಲಿ ಪಾಸಾದವರನ್ನು ನೇಮಿಸಿಕೊಳ್ಳಲಾಗುತ್ತದೆ. ಈಗಾಗಲೇ ಬಿದರಹಳ್ಳಿ, ಕೊಲ್ಲಿಬೈಲ್, ಹಳಸೆ, ಗೌಡಹಳ್ಳಿ, ಬೆಟ್ಟದಮನೆ, ಬಡವನದಿಣ್ಣೆ, ಮದುಗುಂಡಿ, ಸೇರಿದಂತೆ ಒಟ್ಟು 29 ಕಡೆ ನರ್ಸ್‍ಗಳನ್ನು ನೇಮಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ತಾ.ಪಂ. ಉಪಾಧ್ಯಕ್ಷೆ ಪ್ರಮೀಳಾ, ಸ್ಥಾಯಿ ಸಮಿತಿ ಅಧ್ಯಕ್ಷ ದೇವರಾಜು, ಸದಸ್ಯರಾದ ಹಿತ್ತಲಮಕ್ಕಿ ರಾಜೇಂದ್ರ, ಭಾರತೀ ರವೀಂದ್ರ, ಮೀನಾಕ್ಷಿ, ಸವಿತಾ ರಮೇಶ್, ಇಒ ವೆಂಕಟೇಶ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. 

ಸಭೆಯಲ್ಲಿ ಕೈಗೊಂಡ ನಿರ್ಣಯ 

ಆರೋಗ್ಯ ಇಲಾಖೆಯಿಂದ ಎಂಎಲ್‍ಎಚ್‍ಪಿ ಯೋಜನೆಯಲ್ಲಿ ನೇಮಕವಾದ 56ರ ಪೈಕಿ ಕೇವಲ 29 ನರ್ಸ್‍ಗಳನ್ನು ತಾಲೂಕಿನಲ್ಲಿ ನೇಮಕ ಮಾಡಲಾಗಿದೆ. ಅದರಲ್ಲೂ ಕೊಟ್ಟಿಗೆಹಾರ, ಕಳಸ, ಸಂಸೆ, ಕುದುರೆಮುಖ ಕಡೆ ಒಬ್ಬರನ್ನೂ ನೇಮಿಸಿಲ್ಲ. ಈ ನೇಮಕಾತಿಯಲ್ಲಿ ಲೋಪ ನಡೆದಿರುವ ಸಂಶಯವಿದ್ದು, ಲೋಕಾಯಕ್ತ ತನಿಖೆಗೆ ಹಾಕಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. 

ಅಧಿಕಾರಿಗಳು ಶಾಸಕರು ಇಬ್ಬರೇ ಇಲ್ಲಿ ಕೆಲಸ ಮಾಡೋದಾ? ಹಿಂದೆ ಬಿ.ಬಿ.ನಿಂಗಯ್ಯ ಶಾಸಕರಾಗಿದ್ದಾಗ, ಎಲ್ಲಾ ಜಿ.ಪಂ, ತಾ.ಪಂ, ಗ್ರಾ.ಪಂ. ಸದಸ್ಯರ ಸಭೆ ಕರೆದು ಅಭಿವೃದ್ಧಿ ಕುರಿತು ಚರ್ಚೆ ನಡೆಸುತ್ತಿದ್ದರು. ಆದರೆ ಈಗಿನ ಶಾಸಕರು ಒಂದೇ ಒಂದು ಸಭೆ ಕರೆದಿಲ್ಲ. ಹೀಗಾದರೆ ಅಭಿವೃದ್ಧಿ ಕೆಲಸ ನಡೆಯುವುದಾದರೂ ಹೇಗೆ?
- ರಂಜನ್ ಅಜಿತ್ ಕುಮಾರ್, ತಾ.ಪಂ. ಸದಸ್ಯ

ತಾಲೂಕಿನ ಸಾರಗೂಡು ಕುಂದೂರು ಭಾಗದಲ್ಲಿರುವ ಅಸ್ಸಾಂನಿಂದ ವಲಸೆ ಬಂದಿರುವ 70 ಮಕ್ಕಳಿಗೆ ಗಂಟಲುಮಾರಿ ಕಾಯಿಲೆ ಹರಡಿದೆ. ಈ ಕಾಯಿಲೆ ಲಸಿಕೆ ಹಾಕಿಸಿಕೊಳ್ಳದ ಮಕ್ಕಳಲ್ಲಿ ಕಂಡು ಬರುತ್ತದೆ. ಹಾಗಾಗಿ ಲಸಿಕೆ ಹಾಕಿಸಿಕೊಳ್ಳಲು ಇಲಾಖೆಯಿಂದ ಕ್ರಮ ಕೈಗೊಳ್ಳಲಾಗಿದೆ.
- ಡಾ.ಅಶ್ವಥ್ ಬಾಬು, ಎಂಜಿಎಂ ಆಸ್ಪತ್ರೆ ಆಡಳಿತಾಧಿಕಾರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News