ಹುಳಿಯಾರಿನಲ್ಲಿ ಕನಕದಾಸ ವೃತ್ತ ನಾಮಕರಣ: ಸಿಎಂ ಯಡಿಯೂರಪ್ಪ ಸ್ಪಷ್ಟನೆ

Update: 2019-11-20 15:38 GMT

ಬೆಂಗಳೂರು, ನ.20: ಹುಳಿಯಾರಿನಲ್ಲಿ, ಹುಳಿಯಾರು-ಹೊಸದುರ್ಗ ರಸ್ತೆ ಮೇಲೆ ಇರುವ ವೃತ್ತಕ್ಕೆ ಕನಕ ವೃತ್ತ ಎಂದು ನಾಮಕರಣ ಮಾಡುವ ಬಗ್ಗೆ ಎದ್ದಿರುವ ಗೊಂದಲ ಅನಾವಶ್ಯಕವಾಗಿದ್ದು, ವೃತ್ತಕ್ಕೆ ಕನಕದಾಸರ ಹೆಸರಿಡಲು ಸಚಿವ ಮಾಧುಸ್ವಾಮಿ ಕೂಡ ಯಾವುದೇ ವಿರೋಧ ಮಾಡಿಲ್ಲ. ನಾನೇ ಬೆಳಗ್ಗೆ ಮಾಧುಸ್ವಾಮಿ ಮಾತಿನ ಬಗ್ಗೆ ಎದ್ದ ಗೊಂದಲಕ್ಕೆ ಕ್ಷಮೆ ಕೇಳಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ಈಗ ಕನಕಪೀಠದ ಈಶ್ವರಾನಂದಾಪುರಿ ಸ್ವಾಮೀಜಿಗಳು ಕೂಡ ಮಾಧುಸ್ವಾಮಿಯವರು ಏಕವಚನದಲ್ಲಿ ನಮ್ಮನ್ನು ಸಂಭೋದಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಸಮಯದಲ್ಲಿ ಹುಳಿಯಾರು ಮತ್ತು ಬೇರೆ ಕಡೆ ಇರುವ ಕುರುಬ ಸಮುದಾಯದ ಜನರಿಗೆ ಮತ್ತು ಕನಕದಾಸರ ಭಕ್ತರಿಗೆ ನನ್ನ ಮನವಿ ಏನೆಂದರೆ ಯಾರೂ ಉದ್ವೇಗಕ್ಕೆ ಒಳಗಾಗದಿರಿ. ಮುಂದಿನ ದಿನಗಳಲ್ಲಿ ಚುನಾವಣೆ ಮುಗಿದ ನಂತರ ಸರಕಾರದ ವತಿಯಿಂದ ವೃತ್ತ ನಿರ್ಮಾಣ ಮಾಡಿ ಕನಕದಾಸರ ವೃತ್ತ ಎಂದು ನಾಮಕರಣ ಮಾಡುತ್ತೇನೆಂದು ಹೇಳಿದರು.

ನಾನು ಮೊದಲ ಬಾರಿಗೆ ಸಿಎಂ ಆದಾಗ ಕನಕದಾಸರ ಜಯಂತಿ ಆಚರಿಸುವುದನ್ನು ಜಾರಿಗೆ ತಂದು ಕಾಗಿನೆಲೆ ಕನಕಗುರು ಪೀಠ ಅಭಿವದ್ಧಿಗೆ ಶ್ರಮಿಸಿದ್ದು ನಮ್ಮ ಬಿಜೆಪಿ ಸರಕಾರ. ನನ್ನ ಜೀವನದಲ್ಲಿ ಗುರುಗಳಿಗೆ, ಸಂತರುಗಳಿಗೆ, ದಾಸರಿಗೆ ಮತ್ತು ಶರಣರಿಗೆ ಅತ್ಯಂತ ಗೌರವದಿಂದ ಕಂಡಿದ್ದೇನೆ ಹಾಗೂ ನಡೆದುಕೊಂಡಿದ್ದೇನೆ. ಕನಕ ವೃತ್ತದ ಬಗ್ಗೆ ಎದ್ದ ವಿವಾದಕ್ಕೆ ತೆರೆ ಎಳೆದು ಶಾಂತಿ ಕಾಪಾಡಬೇಕು ಎಂದು ಜನರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಯಾವುದೇ ಪ್ರತಿಭಟನೆ ಮತ್ತು ಬಂದ್ ಆಚರಿಸಬಾರದೆಂದು ಮತ್ತೊಮ್ಮೆ ಮನವಿ ಮಾಡುತ್ತೇನೆಂದು ಸಿಎಂ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News