ಕವಿ ಡಾ.ಲಕ್ಷ್ಮಣಗೆ ವಿಭಾ ಸಾಹಿತ್ಯ ಪ್ರಶಸ್ತಿ

Update: 2019-11-20 16:01 GMT

ಬೆಂಗಳೂರು, ನ.20: ಪ್ರಸ್ತುತ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಯು ಬೆಳಗಾವಿಯ ಕವಿ ಡಾ.ಲಕ್ಷ್ಮಣ ವಿ.ಎ ಅವರ ‘ಅಪ್ಪನ ಅಂಗಿ’ ಎಂಬ ಕವನ ಸಂಕಲನದ ಹಸ್ತಪ್ರತಿಗೆ ದೊರೆತಿದೆ.

ಹಿರಿಯ ಕವಯತ್ರಿ ಪ್ರತಿಭಾ ನಂದಕುಮಾರ ಹಾಗೂ ಕವಿ ಸುಬ್ಬು ಹೊಲೆಯಾರ್ ಅವರು ಅಂತಿಮ ಸುತ್ತಿನ ಆಯ್ಕೆ ತೀರ್ಪುಗಾರರಾಗಿದ್ದರು. ಈ ಪುರಸ್ಕಾರವು ಹತ್ತು ಸಾವಿರ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಈ ಪ್ರಶಸ್ತಿ ಪ್ರದಾನ ಸಮಾರಂಭವು ಶೀರ್ಘದಲ್ಲಿಯೇ ನೆರವೇರಲಿದೆ.

ಕವಿ ಪರಿಚಯ: ವಿಭಾ ಸಾಹಿತ್ಯ ಪ್ರಶಸ್ತಿ-2019ಗೆ ಭಾಜನರಾಗಿರುವ ಕವಿ ಡಾ.ಲಕ್ಷ್ಮಣ ವಿ.ಎ ಅವರು ಪ್ರಸ್ತುತ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ವೈದ್ಯಕೀಯ ವೃತ್ತಿಯಲ್ಲಿದ್ದಾರೆ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಮೋಳೆ ಗ್ರಾಮದಲ್ಲಿ 1977ರಲ್ಲಿ ಜನಿಸಿದ ಇವರ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಮೋಳೆಯಲ್ಲಾಗಿದ್ದು, ಧಾರವಾಡದ ಕರ್ನಾಟಕ ಸೈನ್ಸ್ ಕಾಲೇಜಿನಲ್ಲಿ ಪಿಯುಸಿ ಮುಗಿಸಿದ ಅವರು, ಮಹಾಗಣಪತಿ ಆಯುರ್ವೇದ ಮಹಾವಿದ್ಯಾಲಯದಲ್ಲಿ ತಮ್ಮ ವೈದ್ಯಕೀಯ ಪದವಿ ಗಳಿಸಿದರು. ನಂತರ ಮೈಸೂರು ವಿ.ವಿಯಿಂದ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮದಲ್ಲಿ ಡಿಪ್ಲಮೋ ಮತ್ತು ಡಿಪ್ಲಮೋ ಇನ್ ಫಾರ್ಮಸಿಯನ್ನು ತುಮಕೂರಿನ ಕೊರಟಗೆರೆಯಲ್ಲಿ ಪಡೆದರು.

ಕವಿ ಡಾ.ಲಕ್ಷ್ಮಣ ಅವರು ಪ್ರಕಟಿಸಿದ ಪ್ರಥಮ ಕವನ ಸಂಕಲನ ‘ಎಲೆಕ್ಟ್ರಿಕ್ ಬೇಲಿ ಮತ್ತು ಪಾರಿವಾಳ’ವು ಕಣವಿ ಕಾವ್ಯ ಪ್ರಶಸ್ತಿ ಹಾಗೂ ಮುಂಬೈ ನೇಸರು ಕಾವ್ಯ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News