ಜೆಡಿಎಸ್ ಪಕ್ಷದ ಫೇಸ್‌ಬುಕ್ ಪೇಜ್ ರದ್ದುಗೊಳಿಸುವಂತೆ ಬಿಜೆಪಿ ದೂರು

Update: 2019-11-20 16:09 GMT

ಬೆಂಗಳೂರು, ನ.20: ಜೆಡಿಎಸ್ ಪಕ್ಷದ ಅಧಿಕೃತ ಫೇಸ್‌ಬುಕ್ ಪೇಜ್ ಅನ್ನು ರದ್ದುಗೊಳಿಸಬೇಕು ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಮುಖ್ಯ ಚುನಾವಣಾಧಿಕಾರಿಗೆ ಬಿಜೆಪಿ ಪಕ್ಷದ ಚುನಾವಣಾ ಸಮಿತಿಯ ರಾಜ್ಯ ಸಂಚಾಲಕ ದತ್ತಗುರು ಹೆಗಡೆ ಹಾಗೂ ಕಾನೂನು ವಿಭಾಗದ ರಾಜ್ಯ ಸಂಚಾಲಕ ಹರ್ಷ ಮುತಾಲಿಕ್ ದೂರು ನೀಡಿದ್ದಾರೆ.

ಜೆಡಿಎಸ್ ಪಕ್ಷದ ಅಧಿಕೃತ ಫೇಸ್‌ಬುಕ್ ಪೇಜಿನಲ್ಲಿ ಅದರ ಆಡ್ಮಿನ್ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್‌ಗೆ ಬಿಜೆಪಿ ಪಕ್ಷವು ನಿರಂತರವಾಗಿ ಹಣ ವರ್ಗಾವಣೆ ಮಾಡುತ್ತಿದೆ ಎಂದು ಯಾವುದೇ ಸಾಕ್ಷಾಧಾರಗಳಿಲ್ಲದೇ, ವೈಯಕ್ತಿಕ ವ್ಯಕ್ತಿತ್ವಕ್ಕೆ ಹಾಗೂ ಬಿಜೆಪಿ ಪಕ್ಷಕ್ಕೆ ಧಕ್ಕೆಯನ್ನುಂಟು ಮಾಡುವ ದುರುದ್ದೇಶದಿಂದ ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ ಎಂದು ದೂರಲಾಗಿದೆ.

ಅಲ್ಲದೇ, ಆ.2ರಿಂದ ಪ್ರತಿದಿನ ಎಂಟಿಬಿ ನಾಗರಾಜ್ ಬ್ಯಾಂಕ್ ಖಾತೆಗೆ 90 ಲಕ್ಷ ರೂ.ಗಳನ್ನು ವರ್ಗಾವಣೆ ಮಾಡುತ್ತಿದ್ದಾರೆ ಎಂದು ಯಾವುದೇ ದಾಖಲೆಗಳಿಲ್ಲದೆ ಅವರ ತೇಜೋವಧೆ ಮಾಡುವ ದುರುದ್ದೇಶದಿಂದ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಫೇಸ್‌ ಬುಕ್‌ನಲ್ಲಿ ಪೋಸ್ಟ್‌ಗಳನ್ನು ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಅಲ್ಲದೇ, ಬಿಜೆಪಿ ಅಭ್ಯರ್ಥಿಗಳಾದ ಕೆ.ಆರ್.ಪೇಟೆಯ ನಾರಾಯಣಗೌಡ, ಮಹಾಲಕ್ಷ್ಮಿ ಲೇಔಟ್‌ನ ಕೆ.ಗೋಪಾಲಯ್ಯ ಮತ್ತು ಹುಣಸೂರು ಕ್ಷೇತ್ರದ ಎಚ್.ವಿಶ್ವನಾಥ್ ಭಾವಚಿತ್ರಗಳಿಗೆ ಚಪ್ಪಲಿ ಹಾರ ಹಾಕಿದ ಭಾವಚಿತ್ರವನ್ನು ಹಾಕಿರುವುದಲ್ಲದೆ, ನಂಬಿಕೆ ದ್ರೋಹಿಗಳ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪೋಸ್ಟ್ ಮಾಡಲಾಗಿದೆ.

ಈ ರೀತಿಯ ಕೃತ್ಯವು ಚುನಾವಣಾ ನೀತಿಸಂಹಿತೆಯ ಉಲ್ಲಂಘನೆಯಾಗಿದೆ. ಆದುದರಿಂದ, ಫೇಸ್‌ಬುಕ್ ಪೇಜ್ ಅನ್ನು ರದ್ದುಗೊಳಿಸಿ, ಈ ಭಾವಚಿತ್ರಗಳನ್ನು ಹಾಕಿರುವವರು ಹಾಗೂ ಅದರ ಅಡ್ಮಿನ್ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
ಯಶವಂತಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ, ತಮ್ಮ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ತಾವು ಒಕ್ಕಲಿಗ ಸಮಾಜಕ್ಕೆ ಸೇರಿದವನು ಹಾಗೂ ಕ್ಷೇತ್ರದ ಎಲ್ಲ ಒಕ್ಕಲಿಗರು ಒಂದಾಗಿ ನನಗೆ ಮತ ಹಾಕಿ ಜಯಶೀಲನನ್ನಾಗಿ ಮಾಡಿ ಎಂದು ಜಾತಿ ಹೆಸರಿನಲ್ಲಿ ಮತಯಾಚನೆ ಮಾಡಿದ್ದು, ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ.

ಜಾತಿ, ಮತ, ಧರ್ಮದ ಹೆಸರಿನಲ್ಲಿ ಸಾರ್ವಜನಿಕವಾಗಿ ಮತ ಯಾಚನೆ ಮಾಡುವುದು ಅಪರಾಧವಾಗಿದ್ದು, ಅಂತಹ ಅಭ್ಯರ್ಥಿಯ ಉಮೇದುವಾರಿಕೆ ಅರ್ಜಿಯನ್ನು ವಜಾ ಮಾಡಿ ಎಂದು ನಿರ್ದೇಶನ ನೀಡಿ, ಜೆಡಿಎಸ್ ಅಭ್ಯರ್ಥಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಅವರು ಕೇಳಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News