ಸಿದ್ದರಾಮಯ್ಯ ಜನಪ್ರಿಯತೆಗೆ ಮಸಿ ಬಳಿಯುವ ಯತ್ನ: ವಿ.ಎಸ್.ಉಗ್ರಪ್ಪ

Update: 2019-11-20 16:13 GMT

ಬೆಂಗಳೂರು, ನ. 20: ಶಾಸಕ ತನ್ವೀರ್ ಸೇಠ್ ಮೇಲಿನ ಹಲ್ಲೆ ಪ್ರಕರಣದಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬುದರ ಸಂಕೇತ. ಸೇಠ್ ಅವರಿಗೆ ರಕ್ಷಣೆ ನೀಡುವುದನ್ನು ಬಿಟ್ಟು ವಿಪಕ್ಷ ನಾಯಕ ಸಿದ್ದರಾಮಯ್ಯನವರ ಜನಪ್ರಿಯತೆಗೆ ಮಸಿ ಬಳಿಯುವ ಪ್ರಯತ್ನವನ್ನು ಸಿಎಂ ಬಿಎಸ್‌ವೈ ಮಾಡುತ್ತಿದ್ದಾರೆಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ದೂರಿದ್ದಾರೆ.

ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ತನ್ವೀರ್ ಸೇಠ್ ಮೇಲೆ ದಾಳಿ ನಡೆಸಿರುವುದನ್ನು ಕಾಂಗ್ರೆಸ್ ಖಂಡಿಸುತ್ತದೆ. ಉತ್ತಮ ಆಡಳಿತ ನೀಡಿದ ಸಿದ್ದರಾಮಯ್ಯರ ವಿರುದ್ಧ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದು ಟೀಕಿಸಿದರು.

ಕ್ಯಾತಮಾರನ ಹಳ್ಳಿಯಲ್ಲಿ ಒಬ್ಬರ ಕೊಲೆ ನಡೆಯಿತು. ಬಿಜೆಪಿಗೆ ಸಂಬಂಧಿಸಿದ ಸುಮಾರು 20 ಜನರ ಮೇಲೆ ದೂರು ದಾಖಲಾಗಿತ್ತು. ಆಗ ಬಿಜೆಪಿಯವರು ವಿದ್ಯಾರ್ಥಿಗಳಿದ್ದಾರೆ, ಹೀಗಾಗಿ ಕೇಸು ಹಿಂಪಡೆಯಬೇಕೆಂದು ಆಗ್ರಹಿಸಿತ್ತು ಎಂದ ಅವರು, ಸಿದ್ದರಾಮಯ್ಯರ ಜನಪ್ರಿಯತೆ ಸಹಿಸದೆ ಅಪಪ್ರಚಾರ ಮಾಡಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಯಡಿಯೂರಪ್ಪ ಸರಕಾರ ‘ಕೋತಿ ತಿಂದು ಮೇಕೆ ಬಾಯಿಗೆ ವರೆಸಿದ ಹಾಗೆ’ ಎಂಬಂತೆ ಹಲ್ಲೆ ಮಾಡಿದ ಯುವಕ ಎಸ್‌ಡಿಪಿಐ ಸಂಘಟನೆಯಲ್ಲಿದ್ದ ಎನ್ನುತ್ತಿದ್ದಾರೆ. ಆದರೆ, ಆತ ಮಂಗಳೂರಿನಲ್ಲಿ ಬಿಜೆಪಿ ಬಾವುಟವನ್ನು ಹಿಡಿದು ಪ್ರಚಾರ ಮಾಡಿದ್ದಾನೆ. ಇದಕ್ಕೆ ಬಿಎಸ್‌ವೈ, ನಳಿನ್‌ ಕುಮಾರ್ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

ಶ್ರೀರಾಮುಲು ಅವರು ಈ ದೇಶದ ಪ್ರಧಾನಿ ಆಗುವವರು. ಅಂತಹ ಮಹಾನ್ ವ್ಯಕ್ತಿ ಸಿದ್ದರಾಮಯ್ಯನವರ ವಿರುದ್ಧ ತೊಡೆ ತಟ್ಟುವ ಮಾತನ್ನಾಡಿದ್ದಾರೆ. ಅವರು ಈ ಹಿಂದೆ ಡಿಸಿಎಂ ಆಗುವ ಮಾತುಗಳನ್ನು ಹಾಡಿದ್ದರು. ಇದೀಗ ಪರಿಶಿಷ್ಟರಿಗೆ ಮೀಸಲಾತಿ ಕಲ್ಪಿಸುವ ಭರವಸೆ ನೀಡಿದ್ದಾರೆ. ಆದರೆ, ಅವರು ಯಾವುದನ್ನು ಮಾಡಲಿಲ್ಲ ಎಂದು ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News