ಕಾಂಗ್ರೆಸ್-ಜೆಡಿಎಸ್ ಉದ್ದೇಶ ಒಂದೇ, ಆದರೆ ಅವರ ದಾರಿ ನಮ್ಮ ದಾರಿ ಒಂದಲ್ಲ: ಸಿದ್ದರಾಮಯ್ಯ

Update: 2019-11-20 16:23 GMT

ಮೈಸೂರು,ನ.20: ಸಚಿವ ಶ್ರೀರಾಮುಲು ವೆರಿ ವೆರಿ ವೆರಿ ಪಾಪ್ಯುಲರ್  ಲೀಡರ್. ನಾನು ಅಷ್ಟು ಪಾಪ್ಯುಲರ್ ಅಲ್ಲ. ಅವರು ಯಾರ ಮೇಲಾದರೂ ತೊಡೆ ತಟ್ಟುತ್ತಾರೆ ನಮಗೆ ಆ ರೀತಿ ತಟ್ಟಲು ಸಾಧ್ಯವಿಲ್ಲ ಎನ್ನುವ ಮೂಲಕ  ಸಚಿವ ಶ್ರೀರಾಮುಲು ಸವಾಲು ವಿಚಾರಕ್ಕೆ ಪ್ರತಿಕ್ರಿಯಿಸಿ ಶ್ರೀರಾಮುಲು ಹೇಳಿಕೆಗೆ ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ನಗರದ ತಮ್ಮ ನಿವಾಸದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಸೋಲುವ ಕಡೆ ಕಾಂಗ್ರೆಸ್‍ಗೆ ಬೆಂಬಲ ನೀಡುವುದಾಗಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ನಮ್ಮ ಉದ್ದೇಶ ಅನರ್ಹರು ಸೋಲಬೇಕು. ಸಮ್ಮಿಶ್ರ ಸರ್ಕಾರ ಬೀಳಲು ಇವರೇ ಕಾರಣ. ಅದಕ್ಕಾಗಿ ಅವರು ಸೋಲಬೇಕು. ಈ ಮೂಲಕ ರಾಜ್ಯಾದ್ಯಂತ ಒಂದು ಸಂದೇಶ ರವಾನೆಯಾಗಬೇಕು. ಪಕ್ಷಾಂತರಿಗಳ ವಿರೋಧಿ ಸಂದೇಶ ರವಾನೆಯಾಗಬೇಕು. ಈ ವಿಚಾರವಾಗಿ ಕಾಂಗ್ರೆಸ್ ಜೆಡಿಎಸ್ ಇಬ್ಬರ ಉದ್ದೇಶ ಒಂದೇ. ಆದರೆ ಅವರ ದಾರಿ ನಮ್ಮ ದಾರಿ ಒಂದಲ್ಲ ಎಂದು ಸ್ಪಷ್ಟಪಡಿಸಿದರು.

ಉಪಚುನಾವಣೆ ಗಲಾಟೆಯಲ್ಲಿ ರಾಜ್ಯ ಸರ್ಕಾರ ನೆರೆ ಸಂತ್ರಸ್ಥರನ್ನು ಮರೆತಿದ್ದಾರೆ. ರಾಜ್ಯದ ಜನ ಸಂಕಷ್ಟದಲ್ಲಿದ್ದಾರೆ. ಯಾವ ಜಿಲ್ಲಾ ಮಂತ್ರಿಗಳು ಸ್ಪಂದಿಸುತ್ತಿಲ್ಲ. ಜನರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಕೇಂದ್ರ ಸರ್ಕಾರಕ್ಕೂ ಜವಾಬ್ದಾರಿ ಇಲ್ಲ ರಾಜ್ಯ ಸರ್ಕಾರಕ್ಕೂ ಜವಾಬ್ದಾರಿ ಇಲ್ಲ. ಯಡಿಯೂರಪ್ಪ ಹಣ ತರಲು ವಿಫಲರಾಗಿದ್ದಾರೆ. ಪ್ರಧಾನಿ ಕರ್ನಾಟಕದ ಕಡೆ ತಿರುಗಿ ನೋಡಿಲ್ಲ ಇವರು ಜನ ವಿರೋಧಿ ಪ್ರಧಾನಿ ಎಂದು ವಾಗ್ದಾಳಿ ನಡೆಸಿದರು.

ಸಚಿವ ಮಾಧುಸ್ವಾಮಿ ವಿವಾದಾತ್ಮಕ  ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಎಲ್ಲರಿಗೂ ಒಂದು ಸಂಸ್ಕೃತಿ ಇರಬೇಕು. ಬಿಜೆಪಿಯ ಯಾವ ನಾಯಕರಿಗೂ ಒಳ್ಳೆಯ ಸಂಸ್ಕೃತಿ ಇಲ್ಲ. ಅವರದು ಪ್ಯಾಸಿಸ್ಟ್ ಪಕ್ಷ.  ನೈಜ ಮಾತುಗಳನ್ನು ಆಡಲ್ಲ. ಸುಳ್ಳನ್ನೇ ಪ್ರಸಾರ ಮಾಡೋದು ಅವರ ಕೆಲಸ. ಸತ್ಯವನ್ನು ಸುಳ್ಳು ಮಾಡೋದು, ಸುಳ್ಳನ್ನು ಸತ್ಯ ಮಾಡೋದು ಅವರು. ಇದು ಹಿಟ್ಲರ್ ಮನಸ್ಥಿತಿ ಎಂದರು.  ಬಿಜೆಪಿ, ಜೆಡಿಎಸ್ ಅವರ ಟಾರ್ಗೆಟ್ ನಾನೇ ಮತ್ತು ಅನರ್ಹರ ಟಾರ್ಗೆಟ್ ಸಹ ನಾನೇ. ಇದನ್ನು ನೋಡಿದರೆ ಅವರಿಗೆಲ್ಲಾ ನನ್ನ ಮೇಲೆ ಭಯ ಇರಬೇಕು ಎಂದು ಲೇವಡಿಯಾಡಿದರು.

ನಾನು ಕಾಂಗ್ರೆಸ್‍ನಲ್ಲಿ ಏಕಾಂಗಿಯಲ್ಲ. ಕಾಂಗ್ರೆಸ್ ಪಕ್ಷ ಯಾವತ್ತೂ ಯಾರನ್ನೂ ಏಕಾಂಗಿ ಮಾಡಲ್ಲ. ಯಡಿಯೂರಪ್ಪರಿಗೆ ನಾನು ಏಕಾಂಗಿ ಆಗಬೇಕು ಅನಿಸಿರಬಹುದು. ಆದರೆ ಅವರ ಆಸೆ ಈಡೇರುವುದಿಲ್ಲ ಎಂದರು.

ಇಂದಿನಿಂದ ನಾನು ಚುನಾವಣಾ ಪ್ರಚಾರ ಆರಂಭಿಸುತ್ತಿದ್ದೇನೆ. ನಾವು 15 ಕ್ಷೇತ್ರದಲ್ಲೂ ಗೆಲ್ಲುವ ವಿಶ್ವಾಸವಿದೆ. 12 ಕ್ಷೇತ್ರ ನಮ್ಮ ಪಕ್ಷದವರೇ ಇದ್ದರು. ಅವರು ಪಕ್ಷಕ್ಕೆ ದ್ರೋಹ ಮಾಡಿ ಹೋದರು. ಮಹಾರಾಷ್ಟ್ರ ಹರಿಯಾಣದಲ್ಲಿ  ಪಕ್ಷಾಂತರಿಗಳಿಗೆ ಪಾಠ ಕಲಿಸಿದ್ದಾರೆ. ಇಲ್ಲೂ ಜನ ಪಕ್ಷಾಂತರ ಸಹಿಸಲ್ಲ. ಅವರನ್ನು ಸೋಲಿಸುತ್ತಾರೆ. ಅವರೆಲ್ಲಾ ಅನರ್ಹ ಶಾಸಕ ಹಣೆಪಟ್ಟಿ ಹೊತ್ತಿದ್ದಾರೆ. ಅವರು ಅನರ್ಹರೇ ಇದು ನಾನು ಹೇಳಿದ್ದಲ್ಲ. ಸುಪ್ರೀಂಕೋರ್ಟ್ ಹೇಳಿದೆ ಅವರು ಅನರ್ಹರು ಅಂತ. ಸುಪ್ರೀಂಕೋರ್ಟ್ ಸ್ಪೀಕರ್ ಆದೇಶ ಎತ್ತಿ ಹಿಡಿದಿದೆ. ಅನರ್ಹರನ್ನು ರಾಜ್ಯದ ಜನ ಸೋಲಿಸುತ್ತಾರೆ ಎಂದರು.

ಈ ಸಂದರ್ಭ ಶಾಸಕಿ ಸೌಮ್ಯಾರೆಡ್ಡಿ, ಕೆಪಿಸಿಸಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಮತ್ತಿತರರು ಮಾಜಿ ಸಿಎಂ ಸಿದ್ದರಾಮಯ್ಯ ಜೊತೆಗಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News