ಶಾಸಕ ತನ್ವೀರ್ ಸೇಠ್ ಮೇಲಿನ ಹಲ್ಲೆಗೂ ಎಸ್‍ಡಿಪಿಐ ಪಕ್ಷಕ್ಕೂ ಸಂಬಂಧವಿಲ್ಲ: ಅಬ್ದುಲ್ ಮಜೀದ್

Update: 2019-11-20 16:38 GMT

ಮೈಸೂರು,ನ.20: ಶಾಸಕ ತನ್ವೀರ್ ಸೇಠ್ ರವರ ಮೇಲೆ ನಡೆದಿರುವ ಹಲ್ಲೆ ವೈಯುಕ್ತಿಕವಾಗಿದ್ದು, ಆ ವಿದ್ವಂಸಕ ಕೃತ್ಯಕ್ಕೂ ಎಸ್‍ಡಿಪಿಐ ಪಕ್ಷಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಇದಕ್ಕೆ ಪಕ್ಷ ಹೊಣೆಯಾಗುವುದಿಲ್ಲ ಎಂದು ಎಸ್ ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಸ್ಪಷ್ಟಪಡಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಆತ ಈಗಾಗಲೇ ಕಾಂಗ್ರೆಸ್, ಜೆಡಿಎಸ್ ಸಕ್ರಿಯ ಕಾರ್ಯಕರ್ತನಾಗಿದ್ದು, ಈಚೆಗೆ ನಡೆದ ಚುನಾವಣೆಯಲ್ಲಿ ಪಕ್ಷದ ಪ್ರಚಾರಕನಾಗಿ ಕಾರ್ಯನಿರ್ವಹಿಸಿದ್ದ, ಆದ್ದರಿಂದ ತಮ್ಮ ಪಕ್ಷ ಕಾರ್ಯಕರ್ತನಾಗಿದ್ದರೂ ಸಹ ಆತ ಮಾಡಿರುವ ಕೃತ್ಯಕ್ಕೆ ಪಕ್ಷ ಜವಾಬ್ದಾರಿಯಾಗಿರುವುದಿಲ್ಲ ಎಂದು ತಿಳಿಸಿದರು.

ನಾನೆಂದಿಗೂ ದ್ವೇಷ, ಅಸೂಯೆ, ವೈಷಮ್ಯದ ರಾಜಕಾರಣ ಮಾಡುವುದಿಲ್ಲ, ಒಂದೊಮ್ಮೆ ಅಂತಹ ಸಂದರ್ಭ ಬಂದರೆ ರಾಜಕೀಯದಿಂದಲೇ ನಿವೃತ್ತನಾಗುವೆ ಎಂದ ಅವರು, ಈ ಹಿಂದೆ ಶಾಸಕ ತನ್ವೀರ್ ಸೇಠ್ ನೊಂದಿಗೆ ಚುನಾವಣೆಯಲ್ಲಿ ಸೆಣೆಸಿದ್ದೆ ಆದರೆ ಇಂದಿಗೂ ಅವರೊಂದಿಗೆ ನಾನು ಸೌಹಾರ್ದದಿಂದ ಇದ್ದೇನೆ ಎಂದರು.

ಇದೊಂದು ವೈಯಕ್ತಿಕ ದಾಳಿಯಾಗಿದ್ದು ಇದನ್ನು ನಿಷ್ಪಕ್ಷಪಾತವಾಗಿ ತನಿಖೆ ನಂತರವೇ ಸತ್ಯಾಂಶ ಹೊರ ಬರಬೇಕಾಗಿದ್ದು, ಈ ನಿಟ್ಟಿನಲ್ಲಿ ಸೂಕ್ತ ತನಿಖೆ ನಡೆಸಬೇಕೆಂದು ಪೊಲೀಸ್ ಆಯುಕ್ತರಿಗೆ ಮನವಿ ಮಾಡಿರುವುದಾಗಿ ತಿಳಿಸಿದರು.

ಈ ವಿಷಯ ರಾಜಕೀಯ ಬಣ್ಣ ಪಡೆದಿದ್ದು, ಪದೇ ಪದೇ ಪಕ್ಷವನ್ನು ಬಿಂಬಿಸುತ್ತಿರುವುದು ಖೇಧಕರ, ಅಲ್ಲದೇ ಹದಿನೈದು ರಾಜ್ಯಗಳಲ್ಲಿ ಪಕ್ಷ ಸಕ್ರಿಯವಾಗಿದ್ದು, ಇದನ್ನು ಸಹಿಸದ ಕೆಲವರು ಪಕ್ಷ ವಿರುದ್ಧ ಸುಳ್ಳು ಆರೋಪ ಮೂಲಕ ಅಪಪ್ರಚಾರ ಮಾಡುತ್ತಿದ್ದು ಇದರಿಂದ ಹುಣಸೂರು ಉಪಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದರು.

1925ರಿಂದಲೇ ದ್ವೇಷ, ಅಸೂಯೆ ಹಾಗೂ ಮತೀಯ ಗಲಭೆಯನ್ನು ಪ್ರಚೋಧಿಸುವ ಮೂಲಕ ಬಿಜೆಪಿ ಅಧಿಕಾರ ಹಿಡಿಯುತ್ತಿದ್ದು, ಒಂದೊಮ್ಮೆ ನಿಷೇಧಿಸಬೇಕಿದ್ದರೆ ದೇಶದಲ್ಲಿ ಮೊದಲು ಬಿಜೆಪಿಯನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಹುಣಸೂರು ವಿಧಾನಸಭಾ ಕ್ಷೇತ್ರದ ಪಕ್ಷದ ಅಭ್ಯರ್ಥಿ ದೇವನೂರು ಪುಟ್ಟನಂಜಯ್ಯ, ರಾಜ್ಯ ಕಾರ್ಯದರ್ಶಿ ಕುಮಾರಸ್ವಾಮಿ, ರಾಜ್ಯ ಸಮಿತಿ ಸದಸ್ಯ ಅಬ್ರಾರ್ ಅಹಮದ್  ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News