ಸುಳ್ಳಿನ ಇತಿಹಾಸ ಸೃಷ್ಟಿಸುವವರ ಬಗ್ಗೆ ಜನರಲ್ಲಿ ಎಚ್ಚರಿಕೆ ಅಗತ್ಯ: ಮಾಜಿ ಸಚಿವೆ ಮೋಟಮ್ಮ

Update: 2019-11-20 16:49 GMT

ಚಿಕ್ಕಮಗಳೂರು, ನ.20: ಬಿಜೆಪಿ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಆ ಪಕ್ಷದವರು ಮತಿಭ್ರಮಣೆಗೆ ಒಳಗಾದವರಂತೆ ಮಾತನಾಡುತ್ತಿದ್ದಾರೆ. ಜನರನ್ನು ಭ್ರಮಾಲೋಕಕ್ಕೆ ದೂಡುತ್ತಿದ್ದಾರೆ. ಇತಿಹಾಸವನ್ನು ತಿರುಚುತ್ತಾ ಜನರನ್ನು ಒಡೆದು ಆಳುವ ಬ್ರಿಟಿಷರ ಸಂತತಿಯವರಂತೆ ಆಡಳಿತ ನಡೆಸುತ್ತಿದ್ದಾರೆ. ಇಂತಹ ಕಪಟಿಗಳ ದುರಾಡಳಿದ ವಿರುದ್ಧ ಸಾರ್ವಜನಿಕರು ಹೋರಾಟಕ್ಕಿಳಿಯದಿದ್ದಲ್ಲಿ ಜನರ ಬದುಕು ಬೀದಿಗೆ ಬೀಳಲಿದೆ ಎಂದು ಮಾಜಿ ಸಚಿವೆ ಮೋಟಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಾ.ಬಿ.ಆ.ರ್.ಅಂಬೇಡ್ಕರ್ ಒಬ್ಬರೇ ಸಂವಿಧಾನ ರಚಿಸಿಲ್ಲ ಎಂಬ ಸೊತ್ತೋಲೆ ಹೊರಡಿಸುವ ಮೂಲಕ ಶಿಕ್ಷಣ ಇಲಾಖೆ ಸಂವಿಧಾನ ಶಿಲ್ಪಿಯ ತೇಜೋವಧೆ ಮಾಡಿದೆ ಎಂದು ಆರೋಪಿಸಿ ವಿವಿಧ ಪಕ್ಷಗಳು ಹಾಗೂ ದಲಿತ, ರೈತ ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬೃಹತ್ ಧರಣಿ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

ಈ ಜಗತ್ತನ್ನೇ ಕಾಣದ ಮಕ್ಕಳಿಗೆ ಅಂಬೇಡ್ಕರ್ ಇತಿಹಾಸ ತಿರುಚಿ ಅವರೊಬ್ಬರೆ ಸಂವಿಧಾನ ಬರೆದಿಲ್ಲ ಎಂದು ಹೇಳುವ ದುಸ್ಸಾಹಸಕ್ಕೆ ಬಿಜೆಪಿ ಸರಕಾರ ಕೈಹಾಕಿದೆ. ಸುಳ್ಳಿನ ಇತಿಹಾಸ ಸೃಷ್ಟಿಸಲು ಹೊರಟಿರುವವರ ಬಗ್ಗೆ ಜನ ಎಚ್ಚರ ವಹಿಸಬೇಕು. ಶಿಕ್ಷಣ ಇಲಾಖೆ ಸುತ್ತೋಲೆ ಖಂಡಿಸಿ ವಿಧಾನ ಸೌಧ ಚಲೋ, ಡಿಡಿಪಿಐ ಕಚೇರಿಗೆ ಮುತ್ತಿಗೆ, ಶಿಕ್ಷಣ ಸಚಿವರಿಗೆ ಘೆರಾವ್ ಹಾಕುವಂತಹ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಕರೆ ನೀಡಿದ ಅವರು, ಸಂವಿಧಾನ ಬರೆದವರು ಅಂಬೇಡ್ಕರ್ ಎಂಬುದು ಜಗಜ್ಜಾಹೀರಾಗಿದೆ. ಬಿಜೆಪಿಯ ಸಂವಿಧಾನ ವಿರೋಧಿ ನೀತಿಯ ವಿರುದ್ಧ ಜನರೂ ಜಾಗೃತರಾಗುತ್ತಿದ್ದಾರೆ. ಭಾರತಕ್ಕೆ ಸಂವಿಧಾನವೇ ಧರ್ಮಗ್ರಂಥ ದಲಿತರ ಪಾಲಿಗೆ ಅದು ತಾಯಿ, ದೇವರಿಗೆ ಸಮಾನ. ಅಂತಹ ತಾಯಿ, ದೇವರನ್ನು ಉಳಿಸಿಕೊಳ್ಳಲು ದಲಿತರು ಎಂತಹ ಹೋರಾಕ್ಕಾದರೂ ಸೈ, ಕೈಕಟ್ಟಿ ಕೂರು ಪ್ರಶ್ನೆಯೇ ಇಲ್ಲ. ಬಿಜೆಪಿಗೆ ಮುಂದಿನ ದಿನಗಳಲ್ಲಿ ದಲಿತರು ತಕ್ಕ ಶಾಸ್ತಿ ಮಾಡಲು ಕಾದು ಕುಳಿತಿದ್ದಾರೆ ಎಂದು ಅವರು ಎಚ್ಚರಿಕೆ ನೀಡಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಅಂಶುವಂತ್ ಮಾತನಾಡಿ, ಶಿಕ್ಷಣ ಇಲಾಖೆ ಸೊತ್ತೋಲೆ ದೇಶದ ಜನರ ಭಾವನೆ ಕೆರಳಿಸಲು ಸೃಷ್ಟಿಸಿರುವ ಸಂಘಪರಿವಾರದ ಹಿಡನ್ ಅಜೆಂಡಾ ಎಂದು ಆರೋಪಿಸಿ, ದೇಶದಲ್ಲಿ ಅಧಿಕಾರ ನಡೆಸಿದ ಕಾಂಗ್ರೆಸ್ ಸರಕಾರ ಸಂವಿಧಾನಕ್ಕೆ ಕುಂದುಂಟು ಮಾಡುವ ಕೆಲಸವನ್ನು ಎಂದೂ ಮಾಡಿಲ್ಲ. ಅಂಬೇಡ್ಕರ್ ಸಂವಿಧಾನ ಆಶಯಗಳಿಗೆ ತಕ್ಕಂತೆ ಕಾಂಗ್ರೆಸ್ ದೇಶದಲ್ಲಿ ಅಧಿಕಾರ ನಡೆಸಿದೆ. ಆದರೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಸಂವಿಧಾನ ವಿರೋಧಿ ನೀತಿ ಅನುಸರಿಸುತ್ತಿದ್ದು, ಇದರ ಹಿಂದೆ ಆರೆಸ್ಸೆಸ್‍ನ ಹಿಡನ್ ಅಜೆಂಡಾ ಕೆಲಸ ಮಾಡುತ್ತಿದೆ. ಇಂತಹ ಹುನ್ನಾರಗಳ ವಿರುದ್ಧ ಜನರು ದಂಗೆ ಏಳೆಬೇಕೆಂದು ಕರೆ ನೀಡಿದರು.

ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ಮಾತನಾಡಿ, ಸಂವಿಧಾನದ ಹೆಸರಿನಲ್ಲಿ ಮಂತ್ರಿಯಾಗಿರುವ ಸುರೇಶ್ ಕುಮಾರ್ ಓರ್ವ ದಡ್ಡ. ಕೂಡಲೇ ಅವರು ರಾಜೀನಾಮೆ ನೀಡಬೇಕು. ತಮ್ಮ ಸರಕಾರ ಮಾಡಿದ ತಪ್ಪನ್ನು ಮುಚ್ಚಿ ಹಾಕಲು ಒಂದಿಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿ ಸರಕಾರದ ತಪ್ಪಿಲ್ಲ ಎಂದು ನಾಟಕವಾಡುವುದು ಬಿಜೆಪಿಯವರ ನಾಟಕವಾಗಿದೆ. ಇಂತಹ ಕಪಟನಾಟಕದವರನ್ನು ಜನರು ಮನೆಗೆ ಕಳಿಸುವ ದಿನಗಳು ದೂರವಿಲ್ಲ ಎಂದರು.

ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಮಾತನಾಡಿ, ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿರುವ ಶಿಕ್ಷಣ ಇಲಾಖೆ ಆಯುಕ್ತರನ್ನು ವಜಾ ಮಾಡುವುದರೊಂದಿಗೆ ಕಾನೂನು ಕ್ರಮಕೈಗೊಳ್ಳಬೇಕು. ಶಿಕ್ಷಣ ಸಚಿವ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ ಅವರು, ಬಿಜೆಪಿ ಸರಕಾರ ಪದೇ ಪದೇ ಸಂವಿಧಾನ ವಿರೋಧಿ ನಡೆ ಪ್ರದರ್ಶಿಸುತ್ತಾ ಜನರ ನೈಜ ಸಮಸ್ಯೆಗಳನ್ನು ಮರೆ ಮಾಚುತ್ತಿದೆ. ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟು ದೇಶದ ಆರ್ಥಿಕ ದಿವಾಳಿತನದ ಬಗ್ಗೆ ಜನರು ಸೊಲ್ಲೆತ್ತದಂತೆ ಮಾಡುವ ಹುನ್ನಾರ ಇದಾಗಿದ್ದು, ಇದೆಲ್ಲವೂ ಜನರಿಗೆ ಅರ್ಥವಾಗದಿರುವ ವಿಚಾರವಲ್ಲ. ಇಂತಹ ನಾಟಕವನ್ನು ಬಿಜೆಪಿಯವರು ಕೈಬಿಡದಿದ್ದಲ್ಲಿ ಹೋರಾಟಗಳು ಹೆಚ್ಚಲಿವೆ ಎಂದು ಎಚ್ಚರಿಸಿದರು.

ಕಾಂಗ್ರೆಸ್ ಮುಖಂಡ ಎಂ.ಎಲ್.ಮೂರ್ತಿ, ಸಿಪಿಐನ ರೇಣುಕಾರಾಧ್ಯ, ಡಿಎಸ್‍ಎಸ್ ವಸಂತ್‍ಕುಮಾರ್, ಬಿ.ಅಮ್ಜದ್, ಮಾಜಿ ಎಂಎಲ್ಸಿ ಗಾಯತ್ರಿ ಶಾಂತೇಗೌಡ, ಕರವೇ ಜಗದೀಶ್, ಪಿ.ಸಿ.ರಾಜೇಗೌಡ, ಉಮೇಶ್‍ಕುಮಾರ್, ಅಣ್ಣಯ್ಯ ಮತ್ತಿತರರು ಮಾತನಾಡಿದರು. 

ಕಾಂಗ್ರೆಸ್, ಜೆಡಿಎಸ್, ಸಿಪಿಐ, ಬಿಎಸ್ಪಿ, ದಸಂಸ ಸಂಘಟನೆಯ ವಿವಿಧ ಬಣಗಳು, ಕನ್ನಡ ಪರ ಸಂಘಟನೆಗಳು, ಕರ್ನಾಟಕ ರಾಜ್ಯ ರೈತಸಂಘ ಸೇರಿದಂತೆ ಹತ್ತಾರು ಪಕ್ಷ, ಸಂಘಟನೆಗಳ ನೂರಾರು ಕಾರ್ಯಕರ್ತರು ನಗರದ ತಾಲೂಕು ಕಚೇರಿ ಆವರಣದಿಂದ ಮೆರವಣಿಗೆ ಹೊರಟು ಹನುಮಂತಪ್ಪ ವೃತ್ತ, ಎಂಜಿ ರಸ್ತೆಯ ಮೂಲಕ ಆಝಾದ್ ಪಾರ್ಕ್ ವೃತ್ತ ತಲುಪಿ ಅಲ್ಲಿ ಬಹಿರಂಗ ಸಭೆ ನಡೆಸಿದರು. ಈ ವೇಳೆ ಬಿಜೆಪಿ ಮತ್ತು ಸಂಘಪರಿವಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಧರಣಿಯಲ್ಲಿ ವಿವಿಧ ಪಕ್ಷಗಳು, ಸಂಘಟನೆಗಳ ಸ್ಥಳೀಯ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

ಅಂಬೇಡ್ಕರ್ ಅವರನ್ನು ಪ್ರಪಂಚದ ಮಹಾಜ್ಞಾನಿ ಎಂದು ವಿಶ್ವ ಸಂಸ್ಥೆ ಗುರುತಿಸಿದೆ. ಆದರೆ, ಧರ್ಮ, ಜಾತಿ ಕಲ್ಮಶವನ್ನು ತಲೆಯಲ್ಲಿ ತುಂಬಿಕೊಂಡಿರುವ ಮನಸ್ಥಿತಿಯ ಜನ ಅವರನ್ನು ಕುಚೋದ್ಯ ಮಾಡುತ್ತಿದ್ದಾರೆ.  ತಾನು ಸಚಿವನಾಗಿದ್ದಾಗ ಇಂತಹ ಪ್ರಮಾದ ಆಗಿರುವುದಕ್ಕೆ ಸುರೇಶ್ ಕುಮಾರ್ ರಾಜೀನಾಮೆ ನೀಡುವ ಬದಲು ಆತ್ಮ ವಂಚನೆ ಮಾಡಿಕೊಂಡಿದ್ದಾರೆ. ಅವರಿಗೆ ನೈತಿಕತೆ ಇದ್ದಲ್ಲಿ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.
- ಬಿ.ಬಿ.ನಿಂಗಯ್ಯ, ಮಾಜಿ ಸಚಿವ, ಜೆಡಿಎಸ್ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News