ನ.23 ರಂದು ವೈ.ಕೆ.ರಾಮಯ್ಯ ಕೃಷಿಕ, ಕೃಷಿ ವಿಜ್ಞಾನಿ ಪ್ರಶಸ್ತಿ ಪ್ರದಾನ

Update: 2019-11-20 17:42 GMT

ತುಮಕೂರು,ನ.20:ಕರ್ನಾಟಕ ಸಂಘ ಮಂಡ್ಯ ವತಿಯಿಂದ ನವೆಂಬರ್ 23 ರ ಶನಿವಾರ ಸಂಜೆ 4:30 ಗಂಟೆಗೆ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಬಹುಮುಖ ವ್ಯಕ್ತಿತ್ವದ ರಾಜಕಾರಣಿ ವೈ.ಕೆ.ರಾಮಯ್ಯ ಕೃಷಿ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಕುರಿತ ಸಿರಿಗೆ ಸೆರೆ ನಾಟಕದ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ವೈ.ಕೆ.ರಾಮಯ್ಯ ಅವರು ಕೃಷಿಕರಾಗಿ, ನೀರಾವರಿ ತಜ್ಞರಾಗಿ ಹೆಸರು ಮಾಡಿದವರು. ಅವರ ಹೆಸರಿನಲ್ಲಿ ತುಮಕೂರು ಜಿಲ್ಲೆಯ ವೈ.ಕೆ.ಆರ್ ಅಭಿಮಾನಿಗಳು ಮೂರು ಲಕ್ಷ ರೂಗಳ ದತ್ತಿ ನಿಧಿ ನೀಡಿದ್ದು, ಇದರಲ್ಲಿ ರೇಷ್ಮೆ ಕೃಷಿಕರಿಗೆ,ಕೃಷಿ ವಿಜ್ಞಾನಿಗಳಿಗೆ ಕಳೆದ ಎಂಟು ವರ್ಷಗಳಿಂದ ಪ್ರಶಸ್ತಿ ನೀಡುತ್ತಾ ಬಂದಿದ್ದು, ಈ ವರ್ಷದ ಪ್ರಶಸ್ತಿ ಸಮಾರಂಭವನ್ನು ತುಮಕೂರು ಜಿಲ್ಲೆಯಲ್ಲಿ ಆಯೋಜಿಸಲಾಗಿದೆ ಎಂದರು.

ಪ್ರಸಕ್ತ ಸಾಲಿನಲ್ಲಿ ಹಿರಿಯ ನ್ಯಾಯವಾದಿಗಳಾದ ಪ್ರೊ.ಹೆಚ್.ಎಸ್.ಶೇಷಾದ್ರಿ ಅವರಿಗೆ ವಿಶೇಷ ಪ್ರಶಸ್ತಿ ನೀಡಿಲಾಗಿದೆ. ಬೆಂಗಳೂರು ಕೃಷಿ ವಿವಿಯ ಕುಲಪತಿಗಳಾದ ಡಾ.ಎಸ್.ರಾಜೇಂದ್ರಪ್ರಸಾದ್ ಮತ್ತು ಸಹಜ ಬೇಸಾಯ ಶಾಲೆಯ ಮುಖ್ಯಸ್ಥ ಡಾ.ಹೆಚ್.ಮಂಜುನಾಥ್ ಅವರುಗಳಿಗೆ ಕೃಷಿ ವಿಜ್ಞಾನಿ ಪ್ರಶಸ್ತಿ ನೀಡಲಾಗುತ್ತಿದ್ದು, ತುಮಕೂರು ತಾಲೂಕು ಹುಲಿಯಾಪುರದ ರೇಷ್ಮೆ ಕೃಷಿಕ ಸೋಮಶೇಖರ್ ಅವರಿಗೆ ವೈ.ಕೆ.ಆರ್.ಕೃಷಿಕ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಎಲ್ಲಾ ಪ್ರಶಸ್ತಿಗಳು ತಲಾ 10 ಸಾವಿರ ರೂ.ಗಳ ನಗದು ಹಾಗೂ ಪಾರಿತೋಷಕವನ್ನು ಒಳಗೊಂಡಿವೆ ಎಂದು ಪ್ರೊ.ಜಯಪ್ರಕಾಶ್‍ಗೌಡ ವಿವರ ನೀಡಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪಟ್ಟನಾಯಕನಹಳ್ಳಿಯ ಶ್ರೀಗುರುಗುಂಡ ಬ್ರಹ್ಮೇಶ್ವರಮಠದ ಪೀಠಾಧ್ಯಕ್ಷರಾದ ಶ್ರೀಶ್ರೀ ನಂಜಾವಧೂತ ಸ್ವಾಮೀಜಿಗಳು ವಹಿಸಲಿದ್ದು, ವೈ.ಕೆ.ಆರ್.ಕೃಷಿಕ, ಕೃಷಿ ವಿಜ್ಞಾನಿ ಪ್ರಶಸ್ತಿಗಳನ್ನು ಕರ್ನಾಟಕ ಸರಕಾರದ ಕಾನೂನು ಮತ್ತು ಸಂಸದೀಯ ವ್ಯವಹಾರ, ಸಣ್ಣ ನೀರಾವರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ಪ್ರದಾನ ಮಾಡುವರು. ಕಾರ್ಯಕ್ರಮದ ಉದ್ಘಾಟನೆಯನ್ನು ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಡಿ.ಸಿ.ಗೌರಿಶಂಕರ್ ನೆರವೇರಿಸುವರು, ಅಧ್ಯಕ್ಷತೆಯನ್ನು ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ವಹಿಸುವರು.

ವಿಧಾನಪರಿಷತ್ ಸದಸ್ಯ ಚೌಡರೆಡ್ಡಿ ತೂಪಲ್ಲಿ,ಜಿಲ್ಲಾಧಿಕಾರಿ ಡಾ.ಕೆ.ರಾಕೇಶಕುಮಾರ್,ಅದಾಯ ತೆರಿಗೆ ಇಲಾಖೆಯ ಆಯುಕ್ತರಾದ ಜಯರಾಮ್ ರಾಯಪುರ, ಜಿ.ಪಂ.ಮಾಜಿ ಅಧ್ಯಕ್ಷ ಎಚ್.ನಿಂಗಯ್ಯ,ಸಹಕಾರ ಸಂಘಗಳ ಹೆಚ್ಚುವರಿ ನಿರ್ದೇಶಕ ಎನ್.ಆರ್.ರಂಗಯ್ಯ, ಜಿಲ್ಲಾ ಕಸಾಪ ಅಧ್ಯಕ್ಷೆ ಬಾ.ಹ.ರಮಾಕುಮಾರಿ,ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ನರಸಿಂಹರಾಜು ಮತ್ತಿತರರು ಉಪಸ್ಥಿತರಿರುವರು. ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಕುರಿತು ಐಆರ್‍ಎಸ್ ಅಧಿಕಾರಿ ಜಯರಾಮ್ ರಾಯಪುರ ರಚಿಸಿ,ಬೀದರ್‍ನ ಉಮೇಶ್ ಪಾಟೀಲ್ ನಿರ್ದೇಶಿಸಿರುವ “ಸಿರಿಗೆ ಸೆರೆ” ಎಂಬ ಐತಿಹಾಸಿಕ ನಾಟಕದ ಪ್ರದರ್ಶನ ನಡೆಯಲಿದೆ ಎಂದು ಪ್ರೊ.ಜಯಪ್ರಕಾಶ್‍ಗೌಡ  ತಿಳಿಸಿದರು.

ವೈ.ಕೆ.ರಾಮಯ್ಯನವರ ಆಶಯವನ್ನು ಈಡೇರಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು,ವೈ.ಕೆ.ಆರ್.ಅಭಿಮಾನಿಗಳು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ನರಸಿಂಹರಾಜು, ಕಲಾಶ್ರೀ ಡಾ.ಲಕ್ಷ್ಮಣದಾಸ್, ಪ್ರೊ.ವೆಂಕಟೇಶ್,ಸಿ.ವಿಶ್ವನಾಥ್, ಬಿ.ಮರುಳಯ್ಯ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News