ನಕಲಿ ಐಎಎಸ್ ಅಧಿಕಾರಿ ಬಂಧನ: ಸ್ವಗ್ರಾಮದ ನಿವಾಸಿಗಳಲ್ಲಿ ಅಚ್ಚರಿ

Update: 2019-11-20 17:51 GMT

ಶಿವಮೊಗ್ಗ, ನ.20: ರಾಮನಗರ ಜಿಲ್ಲೆ ಚನ್ನಪಟ್ಟಣ ಪೊಲೀಸರು ಬಂಧಿಸಿರುವ ತಾಲೂಕಿನ ಬಸವನಗಂಗೂರು ಸಮೀಪದ ಮೋಜಪ್ಪನ ಹೊಸೂರು ಗ್ರಾಮದ ನಿವಾಸಿಯಾದ, ನಕಲಿ ಐಎಎಸ್ ಅಧಿಕಾರಿ ಮುಹಮ್ಮದ್ ಸಲ್ಮಾನ್ (37) ಬಂಧಿಯಾದ ವಿಷಯವು ಆತನ ಸ್ವಗ್ರಾಮದ ನಿವಾಸಿಗಳಲ್ಲಿ ಅಚ್ಚರಿ ಉಂಟು ಮಾಡಿದೆ.

'ಹಲವು ವರ್ಷಗಳ ಹಿಂದೆಯೇ ಈತ ಊರು ಬಿಟ್ಟು ಹೋಗಿದ್ದ. ಆತ ಎಲ್ಲಿದ್ದಾನೆ ಎಂಬ ಮಾಹಿತಿ ಯಾರಿಗೂ ಇರಲಿಲ್ಲ. ಆತನ ಬಗ್ಗೆ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಬಂದ ನಂತರವಷ್ಟೆ ಗ್ರಾಮಸ್ಥರಿಗೆ ಮಾಹಿತಿ ಗೊತ್ತಾಯಿತು. ಕಳೆದೆರೆಡು ದಿನಗಳಿಂದ ಈತನ ವಿಷಯವೇ ಗ್ರಾಮದಲ್ಲಿ ಚರ್ಚೆಯಾಗುತ್ತಿದೆ' ಎಂದು ಗ್ರಾಮಸ್ಥರು ಹೇಳುತ್ತಾರೆ.

ಬಡ ಕುಟುಂಬದ ಸಲ್ಮಾನ್‌ಗೆ ಸಹೋದರರು ಹಾಗೂ ಸಹೋದರಿಯರಿದ್ದಾರೆ. ಜಿಪಂ, ತಾಪಂ, ಗ್ರಾಪಂಗಳಿಂದ ಸರಕಾರದ ಸೌಲಭ್ಯ ಕಲ್ಪಿಸಿಕೊಡುವುದಾಗಿ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಹೇಳುತ್ತಿದ್ದ. ನಿವೇಶನ ಇಲ್ಲದವರಿಗೆ ಸೈಟ್ ಕೊಡಿಸುವುದಾಗಿಯೂ ನಂಬಿಸಿದ್ದ. ಕೆಲವರಿಂದ ಹಣವನ್ನು ಪಡೆದಿದ್ದ. ಸಂಘವೊಂದನ್ನು ರಚಿಸಿಕೊಂಡಿದ್ದ ಎನ್ನಲಾಗಿದೆ.

'ಸರಕಾರಿ ಕಚೇರಿಗಳಿಗೆ ಗ್ರಾಮಸ್ಥರನ್ನು ಕರೆದೊಯ್ದು ಅಧಿಕಾರಿಗಳ ಜೊತೆ ಮಾತನಾಡಿಸಿ, ನಂಬಿಕೆ ಬರುವಂತೆ ಮಾಡುತ್ತಿದ್ದ. ಆಗಲೇ ಬಾಡಿಗೆ ಕಾರಿನಲ್ಲಿ ಓಡಾಡುತ್ತಿದ್ದ. ಅಧಿಕಾರಿಗಳಿಗೂ ಸಮಾಜ ಸೇವಕ ಎಂದು ಪರಿಚಯಿಸಿಕೊಂಡಿದ್ದ. ಎಲ್ಲರಿಂದಲೂ ಸೆಲ್ಯೂಟ್ ಹೊಡಿಸಿಕೊಳ್ಳಬೇಕು. ಸಮಾಜದಲ್ಲಿ ತಾನು ದೊಡ್ಡ ವ್ಯಕ್ತಿ ಎಂದು ಬಿಂಬಿಸಿಕೊಳ್ಳಬೇಕು. ಎಲ್ಲರೂ ತನಗೆ ಗೌರವ ಕೊಡಬೇಕು ಎಂಬ ಹುಂಬುತನ ಆತನಲ್ಲಿತ್ತು. ಹಣ ಕೊಟ್ಟ ನಾಗರಿಕರು ಬೆನ್ನು ಬಿದ್ದಾಗ, ಊರು ತೊರೆದಿದ್ದ. ನಂತರ ಆತ ಮರಳಿ ಬಂದಿರಲಿಲ್ಲ. ಎಲ್ಲಿದ್ದಾನೆಂಬುವುದು ಯಾರಿಗೂ ಗೊತ್ತಿರಲಿಲ್ಲ' ಎಂದು ಮೋಜಪ್ಪನ ಹೊಸೂರು ಗ್ರಾಮಸ್ಥರೊಬ್ಬರು ಹೇಳುತ್ತಾರೆ.

ಕೊನೆಗೂ ಸೆರೆಯಾದ: 2016ರಲ್ಲಿ ಬೆಂಗಳೂರಿಗೆ ಬಂದಿದ್ದ ಮುಹಮ್ಮದ್ ಸಲ್ಮಾನ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಲಕ್ಕೇನಹಳ್ಳಿ ಸೊಂಡೆಕೊಪ್ಪ ರಸ್ತೆಯ ಮನೆಯೊಂದರ ವಾಸವಿದ್ದ. ತಾನು ಆರ್.ಡಿ.ಪಿ.ಐ ಇಲಾಖೆಯ ಐಎಎಸ್ ಅಧಿಕಾರಿ ಎಂದು ನಾಗರಿಕರಿಗೆ ಹೇಳುತ್ತಿದ್ದ. ನೆಲಮಂಗಲದಲ್ಲಿ ಕರ್ನಾಟಕ ರಾಜ್ಯ ಸಮಗ್ರ ಜನಸ್ಪಂದನಾ ವೇದಿಕೆಯ ಕಚೇರಿ ಸ್ಥಾಪಿಸಿದ್ದ. ರಾಜ್ಯ ಘಟಕದ ಅಧ್ಯಕ್ಷ ಎಂದು ಹೇಳಿಕೊಂಡು, ಸರಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸ ಮಾಡಿಸಿಕೊಡುತಿದ್ದ ಎಂದು ಹೇಳಲಾಗುತ್ತಿದೆ.

ಜನರನ್ನು ನಂಬಿಸಲು ಕಾರಿಗೆ ಸರಕಾರಿ ಇಲಾಖೆ ಮಾದರಿಯಲ್ಲಿ ಬೋರ್ಡ್ ಹಾಕಿಕೊಂಡಿದ್ದ. ಗ್‌ನ್‌ಮ್ಯಾನ್ ಓರ್ವರನ್ನು ನೇಮಿಸಿಕೊಂಡಿದ್ದ ಎಂದು ಈತನನ್ನು ಬಂಧಿಸಿದ್ದ ರಾಮನಗರ ಜಿಲ್ಲಾ ಪೊಲೀಸರು ಹೇಳುತ್ತಾರೆ.

ಮೈಸೂರು, ಮಂಡ್ಯ, ತುಮಕೂರು, ರಾಮನಗರ, ಚನ್ನಪಟ್ಟಣ, ಮಾಗಡಿ, ಗಂಗಾವತಿ ಹೀಗೆ ಹಲವಾರು ಕಡೆ ಅಮಾಯಕ ಸಾರ್ವಜನಿಕರನ್ನು ವಂಚಿಸಿದ್ದ. ಆರ್.ಡಿ.ಪಿ.ಐ ಅಧಿಕಾರಿ ಎಂದು ಹೇಳಿಕೊಂಡು ವಿಧಾನಸೌಧ, ಎಂ.ಎಸ್.ಬಿಲ್ಡಿಂಗ್‌ನಲ್ಲಿರುವ ಹಲವು ಇಲಾಖೆಗಳಿಗೆ ಭೇಟಿ ಕೊಟ್ಟು ಅಲ್ಲಿನ ಅಧಿಕಾರಿಗಳಿಂದ ಕೆಲಸ ಕಾರ್ಯಗಳಿಗೆ ಶಿಪಾರಸು ಮಾಡುತ್ತಿದ್ದ. ಉರ್ದು ಶಾಲೆಗಳಿಗೆ ಭೇಟಿ ಕೊಟ್ಟು ಪರಿಶೀಲಿಸುವುದು, ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿ ಮಾಡಿಕೊಡುವ ಭರವಸೆ ನೀಡುತ್ತಿದ್ದ. ಒಂದಿಬ್ಬರಿಗೆ ನಿವೇಶನ ಮಾಡಿಸಿ ಕೊಟ್ಟು ನಂಬಿಕೆ ಹುಟ್ಟಿಸುತ್ತಿದ್ದ ಎಂದು ಪೊಲೀಸರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News