ಜಮ್ಮು ಕಾಶ್ಮೀರ ನಿರ್ಬಂಧಗಳ ಕುರಿತ ಪ್ರತಿಯೊಂದು ಪ್ರಶ್ನೆಗೂ ಉತ್ತರಿಸಿ: ಸುಪ್ರೀಂ ಕೋರ್ಟ್ ಸೂಚನೆ

Update: 2019-11-21 09:09 GMT

ಹೊಸದಿಲ್ಲಿ, ನ.21: ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿದ ನಂತರ ಹೇರಲಾದ ನಿರ್ಬಂಧಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅಪೀಲುಗಳ ಮೇಲಿನ ವಿಚಾರಣೆಯನ್ನು ಕೈಗೆತ್ತಿಕೊಂಡಿರುವ ಸುಪ್ರೀಂ ಕೋರ್ಟ್, ಅಲ್ಲಿನ ಪರಿಸ್ಥಿತಿಯ ಕುರಿತಂತೆ ಎತ್ತಲಾದ ಪ್ರತಿಯೊಂದು ಪ್ರಶ್ನೆಗೂ  ಜಮ್ಮು ಮತ್ತು ಕಾಶ್ಮೀರದ ಆಡಳಿತ ಉತ್ತರಿಸಬೇಕೆಂದು ಹೇಳಿದೆ.

ನಿರ್ಬಂಧಗಳನ್ನು ಪ್ರಶ್ನಿಸಿ ಅಪೀಲು ಸಲ್ಲಿಸಿದವರು ತಮ್ಮ ವಿಸ್ತೃತ ವಾದವನ್ನು ಮಂಡಿಸಿದ್ದು ಎಲ್ಲದಕ್ಕೂ ಉತ್ತರಿಸಬೇಕೆಂದು ಜಮ್ಮು ಕಾಶ್ಮೀರದ ಆಡಳಿತ ಪರವಾಗಿ ಹಾಜರಾಗಿರುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾಗೆ ಜಸ್ಟಿಸ್ ಎನ್ ವಿ ರಮಣ ನೇತೃತ್ವದ ಪೀಠ ಹೇಳಿದೆ.

ಮೆಹ್ತಾ ಅವರು ಸಲ್ಲಿಸಿರುವ ಪ್ರತಿ ಅಫಿಡವಿಟ್ ತಮಗೆ ಯಾವುದೇ ತೀರ್ಮಾನಕ್ಕೆ ಬರಲು ಸಹಾಯ ಮಾಡುತ್ತಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ``ಈ ಪ್ರಕರಣಕ್ಕೆ ನೀವು ಸೂಕ್ತ ಗಮನ ನೀಡುತ್ತಿಲ್ಲ ಎಂಬ ಭಾವನೆಯನ್ನು ಮೂಡಿಸಬೇಡಿ'' ಎಂದು ಜಸ್ಟಿಸ್ ಆರ್ ಸುಭಾಷ್ ರೆಡ್ಡಿ  ಹಾಗೂ ಜಸ್ಟಿಸ್ ಬಿ ಆರ್ ಗವಾಯಿ ಅವರನ್ನೊಳಗೊಂಡ ಪೀಠ ಹೇಳಿದೆ.

ಅಪೀಲುದಾರರು ಪ್ರಸ್ತುತಪಡಿಸಿರುವ ಹೆಚ್ಚಿನ ಅಂಶಗಳು ಸರಿಯಿಲ್ಲ ಹಾಗೂ ಪ್ರತಿಯೊಂದಕ್ಕೆ ತಮ್ಮ ವಾದ ಮಂಡಿಸುವ ವೇಳೆ ಪ್ರತಿಕ್ರಿಯಿಸುವುದಾಗಿ ಮೆಹ್ತಾ ಹೇಳಿದರು. ಜಮ್ಮು ಕಾಶ್ಮೀರದ ಪರಿಸ್ಥಿತಿ ಪ್ರತಿ ದಿನ ಬದಲಾಗುತ್ತಲಿರುವುದರಿಂದ ತಮ್ಮ ಬಳಿ ಅಲ್ಲಿನ ಸ್ಥಿತಿಗತಿ ವರದಿಯಿದ್ದರೂ ಅದನ್ನು ನ್ಯಾಯಾಲಯಕ್ಕೆ  ಸಲ್ಲಿಸಿಲ್ಲ. ಆದರೆ  ತಮ್ಮ ವಾದ ಮಂಡನೆ ವೇಳೆ ಅಲ್ಲಿನ ನಿಖರ ಪರಿಸ್ಥಿತಿಯನ್ನು ಪ್ರಸ್ತುತ ಪಡಿಸುವುದಾಗಿ ತಿಳಿಸಿದರು.

ಜಮ್ಮು ಕಾಶ್ಮೀರದಲ್ಲಿನ ಕೆಲ ನಾಯಕರ ದಿಗ್ಬಂಧನ ಕುರಿತಾದ ಯಾವ ಪ್ರಕರಣವನ್ನೂ ನ್ಯಾಯಾಲಯ ಕೈಗೆತ್ತಿಕೊಂಡಿಲ್ಲ, ಅಲ್ಲಿನ ನಿರ್ಬಂಧಗಳ ಕುರಿತಂತೆ ಅನುರಾಧ ಭಾಸಿನ್ ಹಾಗೂ ಗುಲಾಂ ನಬಿ ಆಜಾದ್ ಅವರು ಸಲ್ಲಿಸಿರುವ ಅಪೀಲುಗಳನ್ನು ಈಗ ವಿಚಾರಣೆ ನಡೆಸುತ್ತಿದ್ದೇವೆ, ಒಂದು ಹೇಬಿಯಸ್ ಕಾರ್ಪಸ್ ಅಪೀಲು ಬಾಕಿಯಿದೆ ಎಂದು ನ್ಯಾಯಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News