ಜೆಡಿಎಸ್, 'ಕೈ' ಅಭ್ಯರ್ಥಿಗಳ ನಾಮಪತ್ರ ಹಿಂಪಡೆಯಲು ಬಿಎಸ್‌ವೈ ಒತ್ತಡ: ವಿ.ಎಸ್.ಉಗ್ರಪ್ಪ

Update: 2019-11-21 12:56 GMT

ಬೆಂಗಳೂರು, ನ. 21: ಜೆಡಿಎಸ್, ಕಾಂಗ್ರೆಸ್ ಹಾಗೂ ಪಕ್ಷೇತರ ಅಭ್ಯರ್ಥಿಗಳ ನಾಮಪತ್ರ ಹಿಂಪಡೆಯಲು ಮುಖ್ಯಮಂತ್ರಿ ಯಡಿಯೂರಪ್ಪ ಒತ್ತಡ ಹೇರುತ್ತಿದ್ದಾರೆ. ರಾಜ್ಯದಲ್ಲಿ ಚುನಾವಣಾ ಆಯೋಗ ಜೀವಂತವಾಗಿದೆಯೇ ಎಂದು ಪ್ರಶ್ನೆ ಉದ್ಭವಿಸಿದೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿಎಂ ಬಿಎಸ್‌ವೈ ಪುತ್ರ ಸಂಸದ ಬಿ.ವೈ.ರಾಘವೇಂದ್ರ ಅಭ್ಯರ್ಥಿಯೊಬ್ಬರ ನಾಮಪತ್ರ ಹಿಂಪಡೆಯಲು ಒತ್ತಡ ಹೇರಿರುವುದು ಬಹಿರಂಗವಾಗಿದೆ. ಈ ಬಗ್ಗೆ ಆಯೋಗ ಏನು ಕ್ರಮ ಕೈಗೊಳ್ಳಲಿದೆ ಎಂದು ಪ್ರಶ್ನಿಸಿದರು.

ಹದಿನೈದು ಕ್ಷೇತ್ರಗಳ ಉಪಚುನಾವಣೆಯಲ್ಲಿ ನಾಲ್ಕೈದು ಕ್ಷೇತ್ರಗಳಲ್ಲಿ ಒತ್ತಡ ತಂತ್ರವನ್ನು ಬಿಜೆಪಿ ಅನುಸರಿಸುತ್ತಿದೆ. ಆದರೆ, ಚುನಾವಣಾ ಆಯೋಗ ಜೀವಂತ ಇದೆಯೋ, ಸತ್ತು ಹೋಗಿದೆಯೋ ಅಥವಾ ಬಿಜೆಪಿಯೊಂದಿಗೆ ಶಾಮೀಲಾಗಿದೆಯೋ ಎಂಬ ಸಂಶಯ ಸೃಷ್ಟಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.

ಈ ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸಿದರೆ ಆಯೋಗ ನಿರ್ಜೀವವಾಗಿದ್ದು, ಬಿಜೆಪಿ ಪರ ಕೆಲಸ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದ ಉಗ್ರಪ್ಪ, ಚುನಾವಣಾ ಆಯೋಗ ಕೂಡಲೇ ಬಿಎಸ್‌ವೈ ಮತ್ತವರ ತಂಡದ ವಿರುದ್ಧ ದೂರು ದಾಖಲಿಸಬೇಕು ಎಂದು ಆಗ್ರಹಿಸಿದರು.

ಹಾವೇರಿ ಜಿಲ್ಲೆ ಹಿರೇಕೆರೂರು, ಬೆಂ.ಗ್ರಾಮಾಂತರ ಜಿಲ್ಲೆಯ ಹೊಸಕೋಟೆ, ಬೆಳಗಾವಿ ಜಿಲ್ಲೆಯ ಗೋಕಾಕ್ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ನಾಮಪತ್ರ ಹಿಂಪಡೆಯಲು ಅಭ್ಯರ್ಥಿಗಳಿಗೆ ಒತ್ತಡ ಹೇರಿದ್ದಾರೆ. ಆಯೋಗ ಮೌನವಾಗಿರುವುದು ಏಕೆ ಎಂದು ಕೇಳಿದರು.

‘ಸಾಲ’ ಅಫಿಡವಿಟ್‌ನಲ್ಲಿ ನಮೂದಿಸಿಲ್ಲ ಏಕೆ: ಹೊಸಕೋಟೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಅವರು ಕಾಂಗ್ರೆಸ್ ಪಕ್ಷದ ಮುಖಂಡರಿಗೆ ‘ಸಾಲ’ ನೀಡಿರುವ ಬಗ್ಗೆ ಚುನಾವಣಾ ಅಫಿಡವಿಟ್‌ನಲ್ಲಿ ಏಕೆ ನಮೂದಿಸಿಲ್ಲ ಎಂದು ಉಗ್ರಪ್ಪ ಇದೇ ವೇಳೆ ಪ್ರಶ್ನಿಸಿದರು.

ಅಫಿಡವಿಟ್‌ನಲ್ಲಿ ಸುಳ್ಳು ಮಾಹಿತಿ ನೀಡಿದ್ದು ಅಲ್ಲದೆ, ಮಾಹಿತಿ ಮುಚ್ಚಿಟ್ಟಿದ್ದಾರೆ. ಹೀಗಾಗಿ ಅವರ ವಿರುದ್ಧ ಆಯೋಗ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ ಉಗ್ರಪ್ಪ, ಮತದಾರರಿಗೆ ಎಂಟಿಬಿ ನಾಗರಾಜ್ ಹಣದ ಆಮಿಷವೊಡ್ಡಿದ್ದು, ಈ ಬಗ್ಗೆ ಐಟಿ ಮತ್ತು ಇಡಿ ಏಕೆ ಕ್ರಮ ಕೈಗೊಳ್ಳುವುದಿಲ್ಲ ಎಂದು ಕೇಳಿದರು.

ಕ್ಷಮೆ ಕೋರಿ: ಡಿವೈಎಸ್ಪಿ ಆತ್ಮಹತ್ಯೆ ಪ್ರಕರಣದಲ್ಲಿ ಕೆ.ಜೆ.ಜಾರ್ಜ್ ಅವರ ಪಾತ್ರವಿಲ್ಲ ಎಂದು ಸಿಬಿಐ ತನಿಖಾ ವರದಿಯಲ್ಲಿ ತಿಳಿಸಿದೆ. ಹೀಗಾಗಿ ಕೂಡಲೇ ಸಿಎಂ ಬಿಎಸ್‌ವೈ ಸೇರಿದಂತೆ ಬಿಜೆಪಿ ಮುಖಂಡರ ಕ್ಷಮೆ ಕೋರಬೇಕು ಎಂದು ಉಗ್ರಪ್ಪ ಆಗ್ರಹಿಸಿದರು.

‘ಸಿದ್ದರಾಮಯ್ಯ, ಕೆ.ಎಚ್.ಮುನಿಯಪ್ಪ, ನಂಜೇಗೌಡರಿಗೆ ಸಾಲ ನೀಡಿದ್ದೇನೆ ಎಂದು ಹೊಸಕೋಟೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಹೇಳಿದ್ದಾರೆ. ಅವರು ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಹೀಗಾಗಿ ತಪ್ಪು ಮಾಹಿತಿ ನೀಡಿದ್ದು, ಆಯೋಗ ಅವರ ನಾಮಪತ್ರವನ್ನು ತಿರಸ್ಕರಿಸಬೇಕು. ಸಾಲ ನೀಡಿದ ಬಗ್ಗೆ ಸಿಬಿಐ, ಐಟಿ-ಇಡಿ ತನಿಖೆ ನಡೆಸಬೇಕು’

-ವಿ.ಎಸ್.ಉಗ್ರಪ್ಪ, ಮಾಜಿ ಸಂಸದ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News