ಬಿಜೆಪಿಯಲ್ಲಿ ಶಮನವಾಗದ ಬಂಡಾಯ: 2 ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳಿಂದ ನಾಮಪತ್ರ ವಾಪಸ್

Update: 2019-11-21 13:47 GMT

ಬೆಳಗಾವಿ, ನ. 21: ಆಡಳಿತಾರೂಢ ಬಿಜೆಪಿ ಸರಕಾರದ ಅಳಿವು-ಉಳಿವು ಹಾಗೂ ವಿಪಕ್ಷ ಕಾಂಗ್ರೆಸ್-ಜೆಡಿಎಸ್‌ಗೆ ತೀವ್ರ ಪ್ರತಿಷ್ಠೆ ಸೃಷ್ಟಿಸಿರುವ ಉಪಚುನಾವಣೆ ಅಖಾಡ ರಂಗೇರಿದೆ. ಹೊಸಕೋಟೆ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಯಾಗಿರುವ ಶರತ್ ಬಚ್ಚೇಗೌಡ ಮನವೊಲಿಸುವಲ್ಲಿ ಬಿಜೆಪಿ ವಿಫಲವಾಗಿದೆ.

ಬೆಳಗಾವಿ ಜಿಲ್ಲೆ ಗೋಕಾಕ್ ಕ್ಷೇತ್ರದಲ್ಲಿಯೂ ಬಿಜೆಪಿ ತೊರೆದು ಜೆಡಿಎಸ್‌ನಿಂದ ಸ್ಪರ್ಧಿಸಿರುವ ಅಶೋಕ್ ಪೂಜಾರಿ ಮನವೊಲಿಕೆ ಸಾಧ್ಯವಾಗಿಲ್ಲ. 'ನಾನು ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಅಶೋಕ್ ಪೂಜಾರಿ ಸ್ಪಷ್ಟಪಡಿಸಿದ್ದು, ಬಿಜೆಪಿ ಮುಖಂಡರಿಗೆ ತಲೆನೋವು ತಂದಿಟ್ಟಿದೆ.

ಹಾವೇರಿಯ ಹಿರೇಕೆರೂರು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದ ಕಬ್ಬಿಣ ಕಂತಿನಮಠದ ಶಿವಲಿಂಗ ಶಿವಾಚಾರ್ಯ ಸ್ವಾಮಿ ಕಣದಿಂದ ಹಿಂದೆ ಸರಿದಿದ್ದಾರೆ. ಅದೇ ರೀತಿಯಲ್ಲಿ ಅಥಣಿ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಡಿಸಿಎಂ ಲಕ್ಷ್ಮಣ ಸವದಿ ಆಪ್ತ ಹಾಗೂ ಜಿ.ಪಂ.ಬಿಜೆಪಿ ಸದಸ್ಯ ಗುರಪ್ಪ ದಾಶ್ಯಾಳ ನಾಮಪತ್ರ ಹಿಂಪಡೆದಿದ್ದಾರೆ.

ಹಿರೇಕೆರೂರು ಮತ್ತು ಅಥಣಿ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಕಣದಿಂದ ಹಿಂದೆ ಸರಿದಿದ್ದು, ಬಿಜೆಪಿ ಅಭ್ಯರ್ಥಿಗಳಾದ ಬಿ.ಸಿ.ಪಾಟೀಲ್ ಮತ್ತು ಮಹೇಶ್ ಕುಮಟಳ್ಳಿ ಅವರಿಗೆ ಉಪ ಚುನಾವಣೆಯಲ್ಲಿ ಅನುಕೂಲವಾಗುವ ಸಾಧ್ಯತೆಗಳಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

ಹಿರೇಕೆರೂರು ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಶಿವಲಿಂಗ ಶಿವಾಚಾರ್ಯ ಸ್ವಾಮಿ ಅವರನ್ನು ಸಿಎಂ ಬಿಎಸ್‌ವೈ ಅವರ ಪುತ್ರ ಸಂಸದ ಬಿ.ವೈ.ರಾಘವೇಂದ್ರ ಮನವೊಲಿಕೆ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗ ಸ್ವಾಮೀಜಿ ನಾಮಪತ್ರ ಹಿಂಪಡೆದಿದ್ದು ಮನವೊಲಿಕೆ ಯಶಸ್ವಿಯಾಗಿದೆ ಎಂದು ಹೇಳಲಾಗಿದೆ.

ಹಿಂದೆ ಸರಿದಿದ್ದೇನೆ: ‘ನನ್ನ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೆ. ನನ್ನ ಸ್ಪರ್ಧೆಯ ಹಿಂದೆ ಡಿಸಿಎಂ ಲಕ್ಷ್ಮಣ ಸವದಿ ಕೈವಾಡವಿದೆ ಎಂಬ ಸುದ್ದಿ ಹಬ್ಬಿತ್ತು. ಅದು ಸುಳ್ಳು ಎಂದು ನಿರೂಪಿಸಲು ಮತ್ತು ಸವದಿ ಅವರಿಗೆ ಕೆಟ್ಟ ಹೆಸರು ಬಾರದಿರಲೆಂದು ನಾಮಪತ್ರ ಹಿಂಪಡೆದಿದ್ದೇನೆ’ ಎಂದು ಗುರಪ್ಪ ದಾಸ್ಯಾಳ ಸ್ಪಷ್ಟಣೆ ನೀಡಿದ್ದಾರೆ.

‘ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟಿದ್ದೆ. ಈಗ, ವಾಪಸ್ ಪಕ್ಷಕ್ಕೆ ಸೇರಿಕೊಳ್ಳುತ್ತೇನೆ. ನನಗೆ ಯಾರೂಬ್ಬರು, ಯಾವುದೇ ರೀತಿಯ ಆಮಿಷವೊಡ್ಡಿಲ್ಲ. ನಾನೇ ಈ ಬಗ್ಗೆ ಸ್ವತಃ ನಿರ್ಧಾರ ಕೈಗೊಂಡಿದ್ದೇನೆ’ ಎಂದು ಗುರುಪ್ಪ ದಾಸ್ಯಾಳ ವಿವರಣೆ ನೀಡಿದರು.

ಎಂ.ಬಿ.ಪಾಟೀಲ್ ಮನವೊಲಿಕೆ: ಅಥಣಿ ಕ್ಷೇತ್ರದಲ್ಲಿ ಕಾಂಗ್ರೆಸ್ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಶಾಸಕ ಶಹಜಹಾನ್ ಡೊಂಗರಗಾಂವ, ಎಸ್.ಕೆ. ಬುಟಾಳಿ, ಸುರೇಶ ಪಾಟೀಲ್ ಮನವೊಲಿಸುವಲ್ಲಿ ಮಾಜಿ ಸಚಿವ ಎಂ.ಬಿ. ಪಾಟೀಲ್ ಯಶಸ್ವಿಯಾಗಿದ್ದು, 3 ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದಾರೆ. 

ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಗಜಾನನ ಮಂಗಸೂಳಿ ಇದೇ ವೇಳೆ ಮಾಜಿ ಶಾಸಕ ಡೊಂಗರಗಾಂವರನ್ನು ತಬ್ಬಿ ಕಣ್ಣೀರಿಟ್ಟ ಪ್ರಸಂಗವೂ ನಡೆದಿದೆ. ಈ ವೇಳೆ ಮಾತನಾಡಿದ ಡೊಂಗರಗಾಂವ, ಪಕ್ಷದ ಅಧಿಕೃತ ಅಭ್ಯರ್ಥಿ ಪರ ಕೆಲಸ ಮಾಡಲಿದ್ದು, ಭವಿಷ್ಯದಲ್ಲಿ ಪಕ್ಷದಲ್ಲಿ ಸೂಕ್ತ ಸ್ಥಾನಮಾನದ ಭರವಸೆ ಹಿನ್ನೆಲೆಯಲ್ಲಿ ನಾಮಪತ್ರ ಹಿಂಪಡೆದಿದ್ದೇನೆ ಎಂದು ಸ್ಪಷ್ಟಣೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News