ಸ್ವಾರ್ಥಕ್ಕೆ ಪಕ್ಷಾಂತರ ಮಾಡಿದವರನ್ನು ಮನೆಗೆ ಕಳುಹಿಸಿ: ಸಿದ್ದರಾಮಯ್ಯ

Update: 2019-11-21 17:12 GMT

ಮಂಡ್ಯ, ನ.21: ಯಾರೆ ಆದರೂ ಸ್ವಾರ್ಥಕ್ಕಾಗಿ ರಾಜೀನಾಮೆ ನೀಡಿ ಪಕ್ಷಾಂತರ ಮಾಡಿದರೆ ಮನೆಗೆ ಕಳುಹಿಸುವ ನಿರ್ಧಾರವನ್ನು ಜನತೆ ಮಾಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಮತದಾರರಿಗೆ ಕರೆ ನೀಡಿದ್ದಾರೆ.

ಕೆ.ಆರ್.ಪೇಟೆ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್ ಪರವಾಗಿ ಗುರುವಾರ ಕಿಕ್ಕೇರಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕೆ.ಆರ್.ಪೇಟೆಯ ನಾರಾಯಣಗೌಡ ಪಕ್ಷಾಂತರ ಮಾಡಿದ್ದಾರೆ. ಅವರನ್ನ ಅವರೇ ಮಾರಾಟ ಮಾಡಿಕೊಂಡಿದ್ದಾರೆ. ಕೆ.ಆರ್.ಪೇಟೆಯಲ್ಲಿ ಅಭಿವೃದ್ಧಿ ಆಗುತ್ತಿದ್ದರೆ ನಾನು ಕೊಟ್ಟ ಅನುದಾನದಿಂದಲೇ ಹೊರತು, ನಾರಾಯಣಗೌಡ ತಂದ ಅನುದಾನದಿಂದಲ್ಲ. ನಾರಾಯಣಗೌಡನಿಗೆ ಬಿಜೆಪಿ ದುಡ್ಡು ಬಂದಿದೆ. ಅವನು ಹೆಚ್ಚು ಖರ್ಚು ಮಾಡ್ತಾನೆ ಅಂತ ಅವನಿಗೆ ಮತ ಹಾಕಬೇಡಿ. ಚಂದ್ರಶೇಖರ್ ಪ್ರಾಮಾಣಿಕ ವ್ಯಕ್ತಿ. ಅವನಿಗೆ ಮತ ಹಾಕಿ ಎಂದು ಅವರು ಮನವಿ ಮಾಡಿದರು.

ಯಡಿಯೂರಪ್ಪ ವಿರುದ್ಧ ವಾಗ್ದಾಳಿ: ಸಾಮಾನ್ಯವಾಗಿ ಎತ್ತು, ಕೋಳಿ, ಕುರಿ ಕೋಣ ಮಾರಾಟವಾಗೋದು ಸಾಮಾನ್ಯ. ಆದರೆ, ಎಂಎಲ್‍ಎಗಳನ್ನು ಖರೀದಿ ಮಾಡೋದು ಎಷ್ಟು ಸರಿ? ಯಡಿಯೂರಪ್ಪ ಅಧಿಕಾರಕ್ಕೆ ಬಂದಾಗ ಶಾಸಕರನ್ನು ಖರೀದಿಸುವ ಚಾಳಿ ಮಾಡಿಕೊಂಡಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.

ಹಸಿವು ಮುಕ್ತ ರಾಜ್ಯ ಮಾಡಲು ಅನ್ನಭಾಗ್ಯ ಯೋಜನೆ ಕೊಟ್ಟ ಏಕೈಕ ರಾಜ್ಯ ಕರ್ನಾಟಕ. ಅನ್ನಭಾಗ್ಯ ಮೋದಿ ಕೊಟ್ಟಿದ್ದು ಎನ್ನುವುದಾದರೆ ಅವರ ಸರಕಾರವಿದ್ದ ಗುಜರಾತ್, ಮಹಾರಾಷ್ಟ್ರದಲ್ಲಿ ಏಕೆ ಮಾಡಿಲ್ಲ? ಯಡಿಯೂರಪ್ಪ ಅರ್ಥಮಾಡಿಕೊಂಡು ಹೇಳಿಕೆ ಕೊಡಬೇಕು. ಬಡವ ಹಸಿದು ಮಲಗಬಾರದು. ಎರಡು ಹೊತ್ತು ಊಟ ಮಾಡಬೇಕೆಂದು ಅನ್ನಭಾಗ್ಯ ಕೊಟ್ಟೆ ಎಂದು ಅವರು ಹೇಳಿದರು.

ಯಾರು ಮಾಡದಂತಹ ಗುತ್ತಿಗೆಯಲ್ಲಿ ದಲಿತರಿಗೆ ಶೇ.50ರಷ್ಟು ಮೀಸಲಾತಿ ತಂದಿದ್ದೇನೆ. ಆದರೆ, ಅಸೂಯೆಯಿಂದ ನನ್ನ ವಿರುದ್ದ ಅಪಪ್ರಚಾರ ಮಾಡಿದರು. ನಾನು ಜಾತಿ ವಿರೋಧಿ ಆಗಿದ್ದರೆ ನನ್ನ ಕಾರ್ಯಕ್ರಮಗಳು ಎಲ್ಲಾ ಜಾತಿಗೆ ಸೀಮಿತವಾಗಿರುತ್ತಿರಲಿಲ್ಲ. ನಾನು ಹಳ್ಳಿಯಿಂದ ಬಂದವನು, ಹಳ್ಳಿ ಭಾಷೆಯಲ್ಲಿ ಮಾತಾಡುತ್ತೇನೆ. ಅದನ್ನೆ ಒರಟ ಅಂದರೆ ಹೇಗೆ. ಇದ್ದದ್ದು ಇದ್ದ ಹಾಗೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದ ಹಾಗೆ ಆಯ್ತು ಎಂದು ಅವರು ವಿಷಾದಿಸಿದರು.

ಶ್ರೀರಾಮುಲುಗೆ ತಿರುಗೇಟು
ಅವನ್ಯಾರೋ ಶ್ರೀರಾಮುಲು ಹೇಳ್ತಾನೆ, ಅನರ್ಹರು ಅಂತ ಕರಿಬೇಡಿ, ಸಿದ್ದರಾಮಯ್ಯನವರು ಪಕ್ಷಾಂತರ ಮಾಡಿಲ್ವ ಅಂತ. ನಾನು ಜೆಡಿಎಸ್‍ನ ಬಿಡಲಿಲ್ಲ, ಪಕ್ಷದಿಂದ ಹೊರ ಹಾಕಿದರು. ನಾನು ಉಚ್ಚಾಟನೆ ಬಳಿಕ ಅಹಿಂದ ಸಂಘಟನೆ ಮಾಡಿದೆ. ಕಾಂಗ್ರೆಸ್ ಆಹ್ವಾನ ಮಾಡಿದ ಬಳಿಕ ಪಕ್ಷ ಸೇರಿದೆ. ಇತಿಹಾಸವನ್ನು ತಿಳಿದುಕೊಂಡಿಲ್ಲ. ಪ್ರಜಾ ಪ್ರತಿನಿಧಿ ಕಾಯ್ದೆ 10 ಶೆಡ್ಯೂಲ್ ಓದಿಕೊಂಡಿಲ್ಲ. ಏನೇನೋ ಮಾತಾಡ್ತಾರೆ ಏನ್ ಹೇಳಬೇಕು ಎಂದು ಸಿದ್ದರಾಮಯ್ಯ ಶ್ರೀರಾಮುಲು ಹೇಳಿಕೆಗೆ ತಿರುಗೇಟು ನೀಡಿದರು.

ದೇಶದಲ್ಲಿ ಅಯಾರಾಂ ಗಯಾರಾಂ ಶುರುವಾಗಿದೆ. ಆ ಪಕ್ಷದಿಂದ ಈ ಪಕ್ಷಕ್ಕೆ, ಈ ಪಕ್ಷದಿಂದ ಆ ಪಕ್ಷಕ್ಕೆ ಜಿಗಿಯುತ್ತಿದ್ದಾರೆ. ಪಕ್ಷಾಂತರ ಪಿಡುಗನ್ನು ಹೋಗಲಾಡಿಸಲು 1985ರಲ್ಲಿ ಪಕ್ಷಾಂತರ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಪ್ರಜಾಪ್ರಭುತ್ವ ಉಳಿಯಬೇಕಾದರೆ ಪಕ್ಷಾಂತರ ಪಿಡುಗು ಹೋಗಬೇಕು ಎಂದು ಅವರು ಹೇಳಿದರು.

ಕೆ.ಆರ್.ಪೇಟೆ ತಾಲೂಕಿನ ಹಿರಿಕಳಲೆ ಸೇರಿದಂತೆ ಹಲವೆಡೆ ಪ್ರಚಾರ ಮಾಡಿದ ವೇಳೆ ಮಾಜಿ ಸ್ಪೀಕರ್ ರಮೇಶ್‍ಕುಮಾರ್, ಮಾಜಿ ಸಚಿವರಾದ ಎನ್. ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ, ಇತರ ಮುಖಂಡರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News